ವಿದ್ಯುತ್‌ ಕಾರ್ಮಿಕರ ಮುಷ್ಕರದಿಂದ ಕಾಶ್ಮೀರದಲ್ಲಿ ಆವರಿಸಿದ ಕತ್ತಲು; ಸಹಾಯಕ್ಕೆ ಸೇನೆಗೆ ಕರೆ

ಜಮ್ಮು ಮತ್ತು ಕಾಶ್ಮೀರದ ವಿದ್ಯುತ್‌ ಇಲಾಖೆ ನೌಕರರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಇಳಿದಿದ್ದು, ಕೇಂದ್ರಾಡಳಿತ ಪ್ರದೇಶದ ಹೆಚ್ಚಿನ ಎಲ್ಲಾ ಭಾಗಗಳು ಕತ್ತಲೆಯಲ್ಲಿ ಮುಳುಗಿವೆ. ಪ್ರತಿಭಟನೆ ನಿಲ್ಲುವ ಲಕ್ಷಣಗಳು ಕಾಣಿಸದೇ ಇರುವ ಹಿನ್ನೆಲೆಯಲ್ಲಿ ಸೇನೆಯಲ್ಲಿರುವ ಇಂಜಿನಿಯರ್‌ಗಳನ್ನು ಸಹಾಯಕ್ಕೆ ಕರೆಸಿಕೊಳ್ಳಲಾಗಿದೆ.

ವಿದ್ಯುತ್‌ ಕಾರ್ಮಿಕರ ಮುಷ್ಕರದಿಂದ ಕಾಶ್ಮೀರದಲ್ಲಿ ಆವರಿಸಿದ ಕತ್ತಲು; ಸಹಾಯಕ್ಕೆ ಸೇನೆಗೆ ಕರೆ
Linkup
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಇಲಾಖೆಯ ನೌಕರರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಇಳಿದಿರುವ ಹಿನ್ನೆಲೆಯಲ್ಲಿ, ಕೇಂದ್ರಾಡಳಿತ ಪ್ರದೇಶದ ಹೆಚ್ಚಿನ ಎಲ್ಲಾ ಭಾಗಗಳು ಕತ್ತಲೆಯಲ್ಲಿ ಮುಳುಗಿವೆ. ಪ್ರತಿಭಟನೆ ನಿಲ್ಲುವ ಲಕ್ಷಣಗಳು ಕಾಣಿಸದೇ ಇರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯಲ್ಲಿರುವ ಇಂಜಿನಿಯರ್‌ಗಳನ್ನು ಸಹಾಯಕ್ಕೆ ಕರೆಸಿಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪವರ್‌ ಡೆವಲಪ್‌ಮೆಂಟ್‌ ಡಿಪಾರ್ಟ್‌ಮೆಂಟ್‌ನ್ನು ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಜತೆ ವಿಲೀನಗೊಳಿಸುವುದನ್ನು ವಿರೋಧಿಸಿ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಎಲ್ಲಾ ಭಾಗಗಳ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಇದೀಗ ಸೇನೆಯನ್ನು ಸಹಾಯಕ್ಕೆ ಕರೆಸಿಕೊಳ್ಳಲಾಗಿದ್ದು, ಇಂಜಿನಿಯರಿಂಗ್‌ ಸೇವಾ ಸಿಬ್ಬಂದಿ ನಿನ್ನೆ ಗ್ರಿಡ್‌ ತಲುಪಿದ್ದು, ಒಂದಿಷ್ಟು ಭಾಗಗಳಿಗೆ ವಿದ್ಯುತ್‌ ಸಂಪರ್ಕ ಪುನರ್‌ ಸ್ಥಾಪಿಸಲಾಗಿದೆ. “ಜಮ್ಮು ಭಾಗದ ಕೇವಲ ಶೇ. 15 - 20ರಷ್ಟು ಫೀಡರ್‌ಗಳು ಮಾತ್ರ ತೊಂದರೆಗೆ ಒಳಗಾಗಿವೆ. ಇವನ್ನು ಸರಿ ಮಾಡುವ ಪ್ರಯತ್ನ ಜಾರಿಯಲ್ಲಿದೆ. ಧರಣಿಯಿಂದ ಕಾಶ್ಮೀರದಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಇಲ್ಲಿ ಎಲ್ಲವೂ ಎಂದಿನಂತೆ ನಡೆಯುತ್ತಿದೆ,” ಎಂದು ಕೇಂದ್ರ ವಿದ್ಯುತ್‌ ಸಚಿವ ಆರ್‌.ಕೆ. ಸಿಂಗ್‌ ಹೇಳಿದರು. ಇದೇ ವೇಳೆ ಕಾಶ್ಮೀರದ ಉದ್ಯೋಗಿಗಳ ಯೂನಿಯನ್‌ ಜತೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಇಂದು, ವಿದ್ಯುತ್ ನೌಕರರು ಮತ್ತು ಇಂಜಿನಿಯರ್‌ಗಳ ರಾಷ್ಟ್ರೀಯ ಸಮನ್ವಯ ಸಮಿತಿಯು ದೇಶಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ಗೆ ಜ್ಞಾಪಕ ಪತ್ರಗಳನ್ನು ಕಳುಹಿಸುವಂತೆ ರಾಜ್ಯ ವಿದ್ಯುತ್ ಒಕ್ಕೂಟಗಳನ್ನು ಒತ್ತಾಯಿಸಿದೆ. "ವಿಲೀನವು ಹೊಸ ಕೇಂದ್ರಾಡಳಿತ ಪ್ರದೇಶದ ಹಿತಾಸಕ್ತಿಯ ಪರವಾಗಿಲ್ಲ" ಎಂದು ಸಮಿತಿ ಹೇಳಿದ್ದು, "ಅಲ್ಲಿನ ನೌಕರರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಇದು ಸುಸಮಯ" ಎಂದು ತಿಳಿಸಿದೆ. ಉತ್ತರ ಭಾರತದಲ್ಲಿ ಶೀತ ಅಲೆಯ ನಡುವೆಯೇ ವಾರಾಂತ್ಯದಲ್ಲಿ ಸಂಭವಿಸಿದ ಪ್ರಮುಖ ವಿದ್ಯುತ್ ಸ್ಥಗಿತವನ್ನು ಸರಿಪಡಿಸಲು ಜಮ್ಮು ಮತ್ತು ಕಾಶ್ಮೀರದ ವಿದ್ಯುತ್ ವಲಯದ ನೌಕರರು ನಿರಾಕರಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿಯಿಂದ ಸುಮಾರು 20,000 ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವವರೆಗೆ ಯಾವುದೇ ದುರಸ್ತಿ ಮತ್ತು ನಿರ್ವಹಣೆ ಕಾರ್ಯ ನಡೆಸದಿರಲು ನಿರ್ಧರಿಸಿದ್ದಾರೆ. ಮುಷ್ಕರದಿಂದಾಗಿ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಜಮ್ಮು ಮತ್ತು ಶ್ರೀನಗರದಲ್ಲೂ ಸ್ಥಗಿತಗಳು ವರದಿಯಾಗಿವೆ. ಆಸ್ತಿಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ನಿರ್ಧಾರವನ್ನು ಹಿಂಪಡೆಯುವುದು ನೌಕರರ ಪ್ರಮುಖ ಬೇಡಿಕೆಯಾಗಿದೆ. ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು ಮತ್ತು ನೌಕರರ ವೇತನ ಬಿಡುಗಡೆ ಮಾಡಬೇಕು ಎಂದೂ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಸರ್ಕಾರಗಳು ದಶಕಗಳಿಂದ ನಿರ್ಮಿಸಿದ ಆಸ್ತಿಗಳನ್ನು ಈಗ ಕೇಂದ್ರದ ನಿಯಮದ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ನೌಕರರು ದೂರಿದ್ದಾರೆ. ಪ್ರತಿಭಟನಾ ನಿರತ ನೌಕರರು ಮತ್ತು ಆಡಳಿತದ ನಡುವಿನ ಮಾತುಕತೆಗಳು ವಿಫಲವಾಗಿವೆ. ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಗಳು ಅನಿವಾರ್ಯ ಎಂದು ಆಡಳಿತವು ಘೋಷಿಸಿದ್ದು, ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಅನುಸರಿಸುತ್ತಿರುವುದಾಗಿ ಹೇಳಿದೆ.