ಜೂನ್‌ನಲ್ಲಿ ಪ್ರಮುಖ ಮೂಲ ಸೌಕರ್ಯ ವಲಯಗಳಲ್ಲಿ 8.9% ಬೆಳವಣಿಗೆ

ಕಳೆದ ಜೂನ್‌ನಲ್ಲಿ ದೇಶದ ಪ್ರಮುಖ 8 ಮೂಲ ಸೌಕರ್ಯ ವಲಯಗಳಾದ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಿತ ಉತ್ಪನ್ನ, ರಸಗೊಬ್ಬರ, ಸಿಮೆಂಟ್‌ ಮತ್ತು ವಿದ್ಯುತ್‌ ಉತ್ಪಾದನೆಯಲ್ಲಿ ಚೇತರಿಕೆ ಕಂಡು ಬಂದಿದೆ.

ಜೂನ್‌ನಲ್ಲಿ ಪ್ರಮುಖ ಮೂಲ ಸೌಕರ್ಯ ವಲಯಗಳಲ್ಲಿ 8.9% ಬೆಳವಣಿಗೆ
Linkup
ಹೊಸದಿಲ್ಲಿ: ಕಳೆದ ಜೂನ್‌ನಲ್ಲಿ ದೇಶದ ಎಂಟು ಮೂಲ ಸೌಕರ್ಯ ವಲಯಗಳಲ್ಲಿ ಉತ್ಪಾದನೆ ಶೇ.8.9ರಷ್ಟು ಬೆಳವಣಿಗೆ ದಾಖಲಾಗಿದೆ. ನೈಸರ್ಗಿಕ ಅನಿಲ, ಉಕ್ಕು, ಕಲ್ಲಿದ್ದಲು ಮತ್ತು ವಿದ್ಯುತ್‌ ವಲಯದಲ್ಲಿ ಪ್ರಗತಿ ಕಂಡು ಬಂದಿದೆ ಎಂದು ಶುಕ್ರವಾರ ಬಿಡುಗಡೆಯಾಗಿರುವ ಅಂಕಿ-ಅಂಶಗಳು ತಿಳಿಸಿವೆ. 2020ರ ಜೂನ್‌ನಲ್ಲಿ ಮೂಲ ಸೌಕರ್ಯ ವಲಯದ ಪ್ರಗತಿ ಶೇ.12.4ರಷ್ಟು ಕುಸಿದಿತ್ತು. ಹಾಗೂ ಕಳೆದ ಮೇನಲ್ಲಿ ದಾಖಲೆಯ ಶೇ.16.3ರಷ್ಟು ಚೇತರಿಸಿತ್ತು. ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಪ್ರಕಾರ, ಜೂನ್‌ನಲ್ಲಿಕ ಲ್ಲಿದ್ದಲು, ನೈಸರ್ಗಿಕ ಅನಿಲ, ಸಂಸ್ಕರಿತ ಉತ್ಪನ್ನ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ ಉತ್ಪಾದನೆ ಅನುಕ್ರಮವಾಗಿ, ಶೇ.7.4, ಶೇ.20.6, ಶೇ.2.4, ಶೇ.25, ಶೇ.4.3, ಶೇ.7.2ರಷ್ಟು ಪ್ರಗತಿ ದಾಖಲಿಸಿದೆ. ಇದೇ ವಲಯಗಳು ಕಳೆದ ವರ್ಷ ಇದೇ ಅವಧಿಯಲ್ಲಿಅನುಕ್ರಮವಾಗಿ ಶೇ.15.5, ಶೇ.12, ಶೇ.8.9, ಶೇ.23.2, ಶೇ.6.8 ಮತ್ತು ಶೇ.10ರಷ್ಟು ಕುಸಿದಿತ್ತು. ರಸಗೊಬ್ಬರ ವಲಯ ಜೂನ್‌ನಲ್ಲಿ ಶೇ.2ರಷ್ಟು ಪ್ರಗತಿ ಕಂಡಿದೆ. ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ 8 ಪ್ರಮುಖ ಕ್ಷೇತ್ರಗಳು ಶೇ.25.3 ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.23.8 ಕುಸಿತ ದಾಖಲಿಸಿತ್ತು. ಬೆಳವಣಿಗೆಗೆ ಕಾರಣವೇನು? ರಾಜ್ಯಗಳಲ್ಲಿ ಕೋವಿಡ್‌-19 ನಿಯಂತ್ರಣಕ್ಕೆ ವಿಧಿಸಿದ್ದ ಲಾಕ್‌ಡೌನ್‌ ಕ್ರಮೇಣ ತೆರವಾಗಿರುವುದು, ಸಾರಿಗೆ ಸಂಚಾರ ವ್ಯವಸ್ಥೆ ಸುಗಮವಾಗುತ್ತಿರುವುದು, ವಿದ್ಯುತ್‌ ಬೇಡಿಕೆ ಹೆಚ್ಚಳ, ಕೈಗಾರಿಕಾ ಚಟುವಟಿಕೆಗಳ ಚೇತರಿಕೆಯ ಪರಿಣಾಮ ಬೆಳವಣಿಗೆ ದಾಖಲಿಸಿದೆ ಎಂದು ಐಸಿಆರ್‌ಎಯ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ತಿಳಿಸಿದ್ದಾರೆ. 2021ರ ಜೂನ್‌ನಲ್ಲಿ ಕೈಗಾರಿಕಾ ಉತ್ಪಾದನೆ (ಐಐಪಿ) ಶೇ.12-17ರಷ್ಟು ಚೇತರಿಸುವ ನಿರೀಕ್ಷೆ ಇದೆ. ಜಿಎಸ್‌ಟಿ ಇ-ವೇ ಬಿಲ್‌ಗಳ ಹೆಚ್ಚಳ, ಆಟೋಮೊಬೈಲ್‌ ಉತ್ಪಾದನೆ ಮತ್ತು ಮಾರಾಟ ಚುರುಕಾಗಿರುವುದನ್ನು ಗಮನಿಸಬಹುದು ಎಂದಿದ್ದಾರೆ. ಜೂನ್‌ನಲ್ಲಿ ಆಟೋಮೊಬೈಲ್‌ ವ್ಯಾಪಾರ ಶೇ.15ರಷ್ಟು ಚೇತರಿಸಿತ್ತು. 12.96 ಲಕ್ಷ ವಾಹನಗಳನ್ನು ಆಟೋಮೊಬೈಲ್‌ ಉದ್ದಿಮೆ ಮಾರಾಟ ಮಾಡಿತ್ತು. ಜುಲೈ 25ಕ್ಕೆ ಅಂತ್ಯವಾದ ವಾರದಲ್ಲಿ ದಿನಕ್ಕೆ ಸರಾಸರಿ 20.2 ಲಕ್ಷ ಇ-ವೇ ಬಿಲ್‌ ಸೃಷ್ಟಿಯಾಗಿತ್ತು. ಜುಲೈನಲ್ಲಿ ಜಿಎಸ್‌ಟಿ ಸಂಗ್ರಹ ಚೇತರಿಸುವ ನಿರೀಕ್ಷೆ ಇದೆ.