ರಾವತ್ ಸಾವಿನ ಬಗ್ಗೆ ಸಂಭ್ರಮ: ದೇಶದ ಹಲವೆಡೆ ಅನೇಕರ ಬಂಧನ, ಪ್ರಕರಣ ದಾಖಲು

ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಅನೇಕರನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬಂಧಿಸಲಾಗಿದೆ. ಅನೇಕ ಕಡೆ ಪ್ರಕರಣಗಳು ದಾಖಲಾಗಿವೆ. ಇನ್ನೂ ಹಲವು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.

ರಾವತ್ ಸಾವಿನ ಬಗ್ಗೆ ಸಂಭ್ರಮ: ದೇಶದ ಹಲವೆಡೆ ಅನೇಕರ ಬಂಧನ, ಪ್ರಕರಣ ದಾಖಲು
Linkup
ಹೊಸದಿಲ್ಲಿ: ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಹಾಗೂ ಇತರೆ 12 ಮಂದಿ ತಮಿಳುನಾಡಿನ ಕೂನೂರು ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಘಟನೆ ದೇಶಾದ್ಯಂತ ಜನರಲ್ಲಿ ಅತೀವ ದುಃಖ ಮೂಡಿಸಿದೆ. ಆದರೆ ಅನೇಕ ಕಿಡಿಗೇಡಿಗಳು ಈ ಸಾವುಗಳನ್ನು ಸಂಭ್ರಮಿಸಿದ ವರದಿಗಳಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ದುರಂತದ ಕುರಿತಾದ ಮಾಧ್ಯಮ ವರದಿಗಳಿಗೆ ಖುಷಿಯ ಎಮೋಜಿಗಳನ್ನು, ಕಾಮೆಂಟ್‌ಗಳನ್ನು ಹಾಕಿದ್ದಾರೆ. ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆಲವು ರಾಜ್ಯಗಳಲ್ಲಿ ಅನೇಕರನ್ನು ಬಂಧಿಸಲಾಗಿದೆ. ತಮಿಳುನಾಡಿನ ಮದುರೆ ನಗರದಲ್ಲಿ ಯೂಟ್ಯೂಬರ್ ಮುರಿದಾಸ್ ಎಂಬಾತನನ್ನು ಗುರುವಾರ ಬಂಧಿಸಲಾಗಿದೆ. ತಮಿಳುನಾಡು ಡಿಎಂಕೆ ಆಡಳಿತದಲ್ಲಿ ಮತ್ತೊಂದು ಕಾಶ್ಮೀರವಾಗುತ್ತಿದೆ. ತಮಿಳುನಾಡಿನಲ್ಲಿ ಇಂತಹ ಯಾವುದೇ ಸಂಚುಗಳನ್ನು ನಡೆಸಲು ಅವಕಾಶವಿದೆ ಎಂದು ಆತ ಟ್ವೀಟ್ ಮಾಡಿದ್ದ. ಬಿಪಿನ್ ರಾವತ್ ಕುರಿತು ಅವಹೇಳನಾಕಾರಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ಆರೋಪಡಿ ಗುಜರಾತ್‌ನ 44 ವರ್ಷದ ಶಿವ ಭಾಯ್ ಅಹಿರ್ ಎಂಬ ವ್ಯಕ್ತಿಯನ್ನು ಅಹ್ಮದಾಬಾದ್ ಸೈಬರ್ ಅಪರಾಧ ಘಟಕದ ಪೊಲೀಸರು ಗುರುವಾರ ಬಂಧಿಸಿದ್ದಾರೆ. ರಾಜಸ್ಥಾನದಲ್ಲಿ ರಾವತ್ ಅವರ ಸಾವನ್ನು ಸಂಭ್ರಮಿಸಿ ವಿಕೃತಿ ಮೆರೆದಿದ್ದ 21 ವರ್ಷದ ಜವಾದ್ ಖಾನ್ ಎಂಬಾತನನ್ನು ಟಾಂಕ್ ಪೊಲೀಸರು ಬಂಧಿಸಿದ್ದಾರೆ. 'ನರಕಕ್ಕೆ ಪ್ರವೇಶಿಸುವ ಮುನ್ನವೇ ರಾವತ್ ಜೀವಂತ ಸುಟ್ಟುಹೋಗಿದ್ದಾರೆ' ಎಂದು ಜನರಲ್ ರಾವತ್ ಫೋಟೊದೊಂದಿಗೆ ಆತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಜಮ್ಮು ಮತ್ತು ಕಾಶ್ಮೀರದ ರಜೌರಿ ಸಮೀಪದ ಹಳ್ಳಿಯೊಂದರ ಅಂಗಡಿ ಮಾಲೀಕನನ್ನು ಬಂಧಿಸಲಾಗಿದ್ದು, ರಜೌರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಂಗಡಿ ಮಾಲೀಕ ಸೂಕ್ಷ್ಮ ಸಂವೇದನೆಯ ಮತ್ತು ಅತ್ಯಧಿಕ ಆಕ್ಷೇಪಾರ್ಹ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಎನ್ನಲಾಗಿದೆ. ಆತನ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ರಾವತ್ ಅವರ ನಿಧನ ವಾರ್ತೆಗೆ ನಗುವಿನ ಎಮೋಜಿ ಬಳಸಿದ್ದ ಮಹಿಳಾ ಉದ್ಯೋಗಿಯೊಬ್ಬರನ್ನು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಕೆಲಸದಿಂದ ವಜಾಗೊಳಿಸಿದೆ.