ಪಂಚಭೂತಗಳಲ್ಲಿ ಲೀನರಾದ 'ಅಭಿನಯ ಶಾರದೆ' ಜಯಂತಿ; ಪುತ್ರನಿಂದ ಅಂತಿಮ ವಿಧಿವಿಧಾನ

ಬಹುಭಾಷಾ ನಟಿ, 'ಅಭಿನಯ ಶಾರದೆ' ಜಯಂತಿ ಅವರು ವಯೋಸಹಜ ಕಾಯಿಲೆಯಿಂದಾಗಿ ಭಾನುವಾರ (ಜು.25) ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆಯು ಬೆಂಗಳೂರಿನ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿದೆ.

ಪಂಚಭೂತಗಳಲ್ಲಿ ಲೀನರಾದ 'ಅಭಿನಯ ಶಾರದೆ' ಜಯಂತಿ; ಪುತ್ರನಿಂದ ಅಂತಿಮ ವಿಧಿವಿಧಾನ
Linkup
ಕನ್ನಡ ಚಿತ್ರರಂಗದ ಹಿರಿಯ ನಟಿಯರಲ್ಲಿ ಒಬ್ಬರಾಗಿದ್ದ, ಐದಕ್ಕೂ ಅಧಿಕ ಭಾಷೆಗಳಲ್ಲಿ, 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಅಪಾರ ಪ್ರಮಾಣದ ಅಭಿಮಾನಿಗಳನ್ನು ಸಂಪಾದಿಸಿದ್ದ ನಟಿ ಅವರು ಭಾನುವಾರ (ಜು.25) ತಡರಾತ್ರಿ ನಿಧನರಾದರು. ಅವರ ಸಾವು ಸಿನಿಮಾರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಜಯಂತಿ ನಿಧನಕ್ಕೆ ಚಿತ್ರೋದ್ಯಮಿಗಳು, ಕಲಾವಿದರು, ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಇಂದು (ಜು.26) ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜಯಂತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಅಪಾರ ಸಂಖ್ಯೆಯ ಅಭಿಮಾನಿಗಳು ಜಯಂತಿ ಅವರ ಅಂತಿಮ ದರ್ಶನ ಪಡೆದುಕೊಂಡರು. ಅಗಲಿದ ಮಹಾನ್‌ ನಟಿಗೆ ನಮಿಸಿದರು. ನಂತರ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಬನಶಂಕರಿ ವಿದ್ಯುತ್ ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ಮಾಡಲಾಯಿತು. ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಸಂತಾಪ ಸೂಚಿಸಿದ ಯಡಿಯೂರಪ್ಪ, ಸಿದ್ಧರಾಮಯ್ಯ,ಎಚ್‌ಡಿಕೆಜಯಂತಿ ಅವರ ನಿಧನದ ಹಿನ್ನೆಲೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಶ್ರದ್ಧಾಂಜಲಿ ಅರ್ಪಿಸಿದರು. ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಬಿ.ಎಸ್. ಯಡಿಯೂರಪ್ಪ, 'ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ತಿಳಿಸಿದರು. ಹಾಗೆಯೇ, ಶ್ರುತಿ, ತಾರಾ, ಸುಧಾರಾಣಿ, ಬಿ. ಸರೋಜಾದೇವಿ, ಮುಖ್ಯಮಂತ್ರಿ ಚಂದ್ರು ಜಗ್ಗೇಶ್, ಉಮಾಶ್ರೀ, ದರ್ಶನ್, ಉಪೇಂದ್ರ, ಪುನೀತ್ ರಾಜ್‌ಕುಮಾರ್, ಪ್ರೇಮ್, ಗಣೇಶ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಅನೇಕ ನಟ-ನಟಿಯರು ಜಯಂತಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.