ರಾಘವೇಂದ್ರ ಬ್ಯಾಂಕ್‌ ಹಗರಣ: ಇಡಿ ಅಧಿಕಾರಿಗಳಿಂದ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಬಂಧನ !

ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕ್ಷ ಕೆ. ರಾಮಕೃಷ್ಣ (72) ಅವರನ್ನು ಬಂಧಿಸಿದ್ದಾರೆ. ರಾಘವೇಂದ್ರ ಬ್ಯಾಂಕ್‌ ನೂರಾರು ಕೋಟಿ ಹಗರಣ ಹಿನ್ನೆಲೆ ಬಂಧನ ಮಾಡಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಘವೇಂದ್ರ ಬ್ಯಾಂಕ್‌ ಹಗರಣ: ಇಡಿ ಅಧಿಕಾರಿಗಳಿಂದ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಬಂಧನ !
Linkup
: ಬೋಗಸ್‌ ದಾಖಲೆಗಳ ಆಧಾರದ ಮೇಲೆ 892.43 ಕೋಟಿ ರೂ. ಸಾಲ ನೀಡಿದ್ದ ಆರೋಪದಡಿ ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕ್ಷ ಕೆ. ರಾಮಕೃಷ್ಣ (72) ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಮಂಗಳವಾರ ನಗರದ ಜಿಲ್ಲಾ ಪ್ರಧಾನ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ರಾಮಕೃಷ್ಣ ಅವರನ್ನು ಫೆ. 18ರವರೆಗೆ ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 892.43 ಕೋಟಿ ರೂ. ಸಾಲದ ಹಣ ಪ್ರಸ್ತುತ ಎಲ್ಲಿದೆ, ಯಾರ ಬಳಿ ಇದೆ, ಯಾರ್ಯಾರಿಗೆ ವರ್ಗಾವಣೆಯಾಗಿದೆ ಹಾಗೂ ಸಾಲ ನೀಡಿದ್ದರೆ, ಯಾರ್ಯಾರಿಗೆ ಸಾಲ ನೀಡಲಾಗಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ರಾಮಕೃಷ್ಣ ಅವರು ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಸಮಯದಲ್ಲಿ 2876 ಮಂದಿಗೆ ಸಾಲ ನೀಡಲಾಗಿತ್ತು. ಈ ಸಾಲದ ಮೊತ್ತ 1544.43 ಕೋಟಿ ರೂ. ಆಗಿದೆ. ಇದರಲ್ಲಿ ಬೋಗಸ್‌ ದಾಖಲೆಗಳಿಗೆ 892.85 ಕೋಟಿ ಸಾಲ ನೀಡಿರುವುದು ತನಿಖೆಯಿಂದ ತಿಳಿದುಬಂದಿತ್ತು. ಹೀಗಾಗಿ, ಬಸವನಗುಡಿ ಪೊಲೀಸ್‌ ಠಾಣೆಯಲ್ಲಿಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಸಿಐಡಿಗೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ರಾಮಕೃಷ್ಣ ಅವರನ್ನು ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರಬಂದಿದ್ದರು. ಇದೀಗ ನೂರಾರು ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಅಂಶ ಹೊರಬರುತ್ತಿದ್ದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.