ಬೆಂಗಳೂರು: ನಗರದ ಮಲ್ಲೇಶ್ವರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಗಡಿ ಭಾಗದಲ್ಲಿರುವ ಯಶವಂತಪುರದ ವಿವಿಧ ಪ್ರದೇಶಗಳಿಗೆ ಜಂಟಿಯಾಗಿ ಬುಧವಾರ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ತೋಟಗಾರಿಕೆ ಸಚಿವ ಮುನಿರತ್ನ ಅವರು ಈ ಭಾಗದಲ್ಲಿನ ಸಂಚಾರ ದಟ್ಟಣೆಗೆ ಪರ್ಯಾಯ ಮಾರ್ಗಗಳ ಬಗ್ಗೆ ಪರಿಶೀಲಿಸಿದರು.
ಅಲ್ಲದೆ, ಜನರ ಅನುಕೂಲಕ್ಕಾಗಿ ಕೆಲ ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣ ಮಾಡಬೇಕೆಂದು ಅವರು ಹೇಳಿದರು.
ಬೆಳಗ್ಗೆಯೇ ಸರ್ಕಲ್ ಸಮೀಪದ ಮಾರುಕಟ್ಟೆಯ ಖುದ್ದು ಪರಿಶೀಲನೆಗೆ ಬಂದ ಸಚಿವರಿಬ್ಬರು, ಮುಖ್ಯವಾಗಿ ಯಶವಂತಪುರ ವೃತ್ತದಿಂದ ಆರ್ ಟಿಒ ಕಚೇರಿ ಮುಂಭಾಗದಲ್ಲಿ ಸಾಗುವ ರಸ್ತೆಯ ಅಗಲೀಕರಣಕ್ಕೆ ಕೂಡಲೇ ಕ್ರಮ ವಹಿಸಬೇಕು. ಆರು ತಿಂಗಳಲ್ಲಿ ಕನಿಷ್ಠ ಅರ್ಧ ಕಾಮಗಾರಿ ಮುಗಿಯುವ ಹಾಗೆ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರಿಗೆ ಸೂಚನೆ ನೀಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯುಕ್ತರು, ಕೂಡಲೇ ಈ ಕಾಮಗಾರಿ ಕೈಗೆತ್ತಿಕೊಂಡು ಮಾಡಲಾಗುವುದು. ವಿಶಾಲ ಪಾದಾಚಾರಿ ಮಾರ್ಗ ನಿರ್ಮಾಣದ ಜತೆಗೆ, ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದರು.
ಬೆಂಗಳೂರು- ತುಮಕೂರು ರಸ್ತೆಗೆ ಹೊಂದಿಕೊಂಡಿರುವ ಈ ರಸ್ತೆಯಲ್ಲಿ ವಾಹನ- ಜನ ಸಂಚಾರ ಹೆಚ್ಚಾಗಿರುತ್ತದೆ. ಪಕ್ಕದಲ್ಲೇ ರೈಲು ಮತ್ತು ಮೆಟ್ರೋ ನಿಲ್ದಾಣಗಳು ಕೂಡ ಇರುವುದರಿಂದ ಇಲ್ಲಿ ಮೂಲಭೂತ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಒದಗಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಡಾ.ಅಶ್ವತ್ಥನಾರಾಯಣ ಮನವರಿಕೆ ಮಾಡಿಕೊಟ್ಟರು.
ಯಶವಂತಪುರ ಸರ್ಕಲ್’ನಿಂದ ಮಾರುಕಟ್ಟೆವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಮಾಡುವ ಪ್ರಸ್ತಾವನೆ ಇದೆ. ಟ್ರಾಫಿಕ್ ದಟ್ಟಣೆ ತಪ್ಪಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಮುನಿರತ್ನ ಅವರು ಹೇಳಿದರೆ, ಯಶವಂತಪುರ ಜನಸಂದಣಿ ಪ್ರದೇಶವಾಗಿದೆ. ಜನರಿಗೆ ಮತ್ತು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಅಗತ್ಯವಿದೆ. ರಸ್ತೆಗಳನ್ನು ಉತ್ತಮ ಗಣಕ ಮಟ್ಟದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಎಂದು ಅಶ್ವತ್ಥನಾರಾಯಣ ಹೇಳಿದರು.
ದುರ್ನಾತ ಬೀರುತ್ತಿದ್ದ ಅಂಡರ್‌ಪಾಸ್:
ಹಾಗೆಯೇ; ಯಶವಂತಪುರ ಮೀನು ಮಾರುಕಟ್ಟೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ಕಂಡು ಸಚಿವರಿಬ್ಬರೂ ಹೌಹಾರಿದರು.
ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಈ ಅಂಡರ್ ಪಾಸ್‌ನಲ್ಲಿ ಮಳೆ ನೀರು ಹೊರಹೋಗುತ್ತಿಲ್ಲ. ಅಲ್ಲದೆ, ಕೊಳಚೆ ನೀರು ಸೇರಿಕೊಂಡು ದುರ್ನಾತ ಬೀರುತ್ತಿತ್ತಲ್ಲದೆ, ಜನರು ಸಂಚಾರ ಮಾಡಲು ಸಾಧ್ಯವಾಗದ ಸ್ಥಿತಿ ಇತ್ತು. ಇದನ್ನು ಕಂಡ ಸಚಿವರಿಬ್ಬರೂ ತಕ್ಷಣ ಇದಕ್ಕೊಂದು ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು.
ಕೂಡಲೇ ಕೊಳಚೆ ನೀರನ್ನು ತೆರವುಗೊಳಿಸಿ ಸ್ವಚ್ಛ ಮಾಡಬೇಕು. ಮಳೆ ನೀರು ನಿರಾಯಾಸವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಬೇಕು. ತಕ್ಷಣವೇ ಕ್ರಮ ವಹಿಸಬೇಕು ಎಂದು ಡಾ.ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ಸೂಚಿಸಿದರು.
ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ:
ಯಶವಂತಪುರದಲ್ಲಿ ಯಲಹಂಕ ತಾಲೂಕು ಪಂಚಾಯಿತಿಗೆ ಸೇರಿದ ಜಾಗವಿದ್ದು, ಅದರ ಪಕ್ಕದಲ್ಲಿ ಹೂವಿನ ಮಾರುಕಟ್ಟೆ ಇದೆ. ವ್ಯಾಪಾರಿಗಳು ಬೀದಿ ಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದು ಇದರಿಂದ ಜನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಹೀಗಾಗಿ ಖಾಲಿ ಇರುವ ತಾಪಂ ಜಾಗದಲ್ಲಿ ಸುಸಜ್ಜಿತ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡುವ ಬಗ್ಗೆ ಯೋಜನೆ ಸಿದ್ಧಪಡಿಸಿದ್ದು ಅದರ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಬೇಕು ಎಂದು ಸಚಿವ ಡಾ.ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ನೀಡುವುದರ ಜತೆಗೆ, ಮಾರುಕಟ್ಟೆಯಲ್ಲಿ ಯಾಂತ್ರೀಕೃತ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಜತೆಗೆ, ಪಶ್ಚಿಮ ವಿಭಾಗದ ಆಯುಕ್ತ ಬಸವರಾಜು, ಜಂಟಿ ಆಯುಕ್ತ ಶಿವಸ್ವಾಮಿ ಮುಂತಾದ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಸಚಿವರು ಏನೆಂದರು?
ಯಶವಂಪತಪುರ ಬಹಳ ಆಯಕಟ್ಟಿನ ಪ್ರದೇಶ. ರೈಲ್ವೆ ನಿಲ್ದಾಣ ಕೂಡ ಇದೆ. ಈ ಪ್ರದೇಶದ ಮೂಲಕ ಇಡೀ ರಾಜ್ಯದ ಜನ ಸಂಚಾರ ಮಾಡುತ್ತಾರೆ. ಹೀಗಾಗಿ ವಾಹನ ದಟ್ಟಣಿ ಆಗದಂತೆ ಕ್ರಮ ವಹಿಸಲಾಗುವುದು. ಈ ಕಾರಣಕ್ಕಾಗಿ ರಸ್ತೆ ಅಗಲೀಕರಣ ಸೇರಿದಂತೆ ಹಲವಾರು ಉಪಯುಕ್ತ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
-ಡಾ.ಸಿ.ಎನ್.ಅಶ್ವತ್ಥನಾರಾಯಣ,ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ
ಇಂದು ನಾನು ಮತ್ತು ಅಶ್ವತ್ಥನಾರಾಯಣ ಜಂಟಿ ಪರಿಶೀಲನೆ ಮಾಡಿದ್ದೇವೆ. ಈ ಭಾಗದಲ್ಲಿ ಬಹಳಷ್ಟು ಕೆಲಸ ಆಗಬೇಕಿದೆ. ಸುಲಭ ಸಂಚಾರಕ್ಕೆ ಇಲ್ಲೊಂದು ಮೇಲು ಸೇತುವೆ ಅಗತ್ಯವಿದೆ. ರೈಲು ನಿಲ್ದಾಣದಿಂದ ಬರುವ- ಹೋಗುವ ಜನರಿಗೆ ಟ್ರಾಫಿಕ್ ಸಮಸ್ಯೆ ಇರಬಾರದು. ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು.
- ಮುನಿರತ್ನ, ತೋಟಗಾರಿಕೆ ಮತ್ತು ಸಾಂಖ್ಯಿಕ ಖಾತೆ ಸಚಿವರು.