ಮಹಾರಾಷ್ಟ್ರದ 10 ಸಚಿವರು, 20ಕ್ಕೂ ಹೆಚ್ಚು ಶಾಸಕರಿಗೆ ಕೊರೊನಾ ವೈರಸ್ ಪಾಸಿಟಿವ್

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ರಾಜ್ಯದಲ್ಲಿ 10ಕ್ಕೂ ಹೆಚ್ಚು ಸಚಿವರು ಮತ್ತು 20ಕ್ಕೂ ಅಧಿಕ ಶಾಸಕರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರದ 10 ಸಚಿವರು, 20ಕ್ಕೂ ಹೆಚ್ಚು ಶಾಸಕರಿಗೆ ಕೊರೊನಾ ವೈರಸ್ ಪಾಸಿಟಿವ್
Linkup
ಪುಣೆ: ಸರ್ಕಾರದ 10ಕ್ಕೂ ಹೆಚ್ಚು ಸಚಿವರು ಮತ್ತು ಸುಮಾರು 20 ಶಾಸಕರು ಈವರೆಗೂ ಪಾಸಿಟಿವ್‌ಗೆ ಒಳಗಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಶನಿವಾರ ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರಕರಣಗಳ ಏರಿಕೆ ಹೀಗೆಯೇ ಮುಂದುವರಿದರೆ ಕಠಿಣ ನಿರ್ಬಂಧ ಕ್ರಮಗಳನ್ನು ಜಾರಿಗೆ ತರಬೇಕಾಗುತ್ತದೆ ಎಂದು ಹೇಳಿದ್ದಾರೆ. 'ನಾವು ವಿಧಾನಸಭೆ ಅಧಿವೇಶನವನ್ನು ಇತ್ತೀಚೆಗೆ ಮೊಟಕುಗೊಳಿಸಿದ್ದೆವು. ಈವರೆಗೂ 10ಕ್ಕೂ ಹೆಚ್ಚು ಸಚಿವರು ಮತ್ತು 20ಕ್ಕೂ ಅಧಿಕ ಶಾಸಕರು ಕೋರೊನಾ ವೈರಸ್ ಪಾಸಿಟಿವ್‌ಗೆ ಒಳಪಟ್ಟಿದ್ದಾರೆ. ಪ್ರತಿಯೊಬ್ಬರೂ ಹೊಸ ವರ್ಷ, ಹುಟ್ಟು ಹಬ್ಬ ಹಾಗೂ ಇತರೆ ಸಂಭ್ರಮಾಚರಣೆಗಳಲ್ಲಿ ಭಾಗವಹಿಸಲು ಬಯಸುತ್ತಾರೆ. ಹೊಸ ತಳಿ ವೈರಸ್ ವೇಗವಾಗಿ ಹರಡುತ್ತಿದೆ ಮತ್ತು ಈ ಕಾರಣಕ್ಕಾಗಿ ಎಚ್ಚರಿಕೆ ಅಗತ್ಯ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ' ಎಂದು ತಿಳಿಸಿದ್ದಾರೆ. 'ಕಟ್ಟೆಚ್ಚರ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಕೆಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಕೂಡ ಜಾರಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಮುಂಬಯಿ ಮತ್ತು ಪುಣೆಯಲ್ಲಿ ಕೋವಿಡ್ 19 ಪ್ರಕರಣಗಳಲ್ಲಿ ಏರಿಕೆಯಾಗಿದೆ' ಎಂದು ಭೀಮಾ ಕೋರೆಗಾಂವ್ ಕದನದ 204ನೇ ವರ್ಷಾಚರಣೆ ಸಂದರ್ಭದಲ್ಲಿ ಪೆರ್ನೆ ಗ್ರಾಮದಲ್ಲಿ ಜಯಸ್ತಂಭ ಸೇನಾ ಸ್ಮಾರಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಮತ್ತಷ್ಟು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯ ಮೇಲೆ ಸರ್ಕಾರ ಗಮನ ಹರಿಸಿದೆ. ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಮುಂದುವರಿದರೆ ಕಠಿಣ ನಿರ್ಬಂಧಗಳು ಜಾರಿಗೆ ಬರಲಿವೆ. ಈ ಕಠಿಣ ಕ್ರಮಗಳನ್ನು ತಪ್ಪಿಸಲು ಎಲ್ಲರೂ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ 12 ದಿನಗಳಲ್ಲಿ ತಳಿ ಪ್ರಕರಣಗಳ ಜತೆಗೆ ಒಟ್ಟಾರೆ ಕೋವಿಡ್ ಸಂಖ್ಯೆಯಲ್ಲಿ ಗಣನೀಯ ಏರಿಕೆ ಉಂಟಾಗಿದೆ. ತೆರೆದ ಹಾಗೂ ಮುಚ್ಚಿದ ಸ್ಥಳಗಳಲ್ಲಿ ಸಾರ್ವಜನಿಕರ ಸೇರುವಿಕೆಯ ಮಿತಿಯನ್ನು ಶೇ 50ಕ್ಕೆ ಇಳಿಕೆ ಮಾಡಲಾಗಿದೆ. ಶುಕ್ರವಾರ 8,067 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ದೇಶದ ಹೊಸ ಪ್ರಕರಣಗಳಲ್ಲಿ ಶೇ 25ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿವೆ. ಓಮಿಕ್ರಾನ್ ತಳಿ ಕೇಸ್‌ಗಳಲ್ಲಿಯೂ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.