ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆಯಿಂದ ಶಬ್ದ ಮಾಲಿನ್ಯ: ಆಕ್ಷೇಪಣೆ ಸಲ್ಲಿಕೆಗೆ ಸಮಯ ಕೇಳಿದ ರಾಜ್ಯ ಸರ್ಕಾರ

ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು - 2000 ರ ಅನ್ವಯ ಲಿಖಿತ ಪರವಾನಗಿ ಪಡೆಯದ ಹೊರತು ಧ್ವನಿ ವರ್ಧಕಗಳನ್ನು ಬಳಸುವುದಿಲ್ಲವೆಂದು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ನಗರದ ಥಣಿಸಂದ್ರ ಹಾಗೂ ಸುತ್ತಲಿನ 16 ಮಸೀದಿಗಳಿಗೆ ಕೋರ್ಟ್‌ ನಿರ್ದೇಶನ ನೀಡಿತ್ತು.

ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆಯಿಂದ ಶಬ್ದ ಮಾಲಿನ್ಯ: ಆಕ್ಷೇಪಣೆ ಸಲ್ಲಿಕೆಗೆ ಸಮಯ ಕೇಳಿದ ರಾಜ್ಯ ಸರ್ಕಾರ
Linkup
: ನಗರದ ಹಲವು ಮಸೀದಿಗಳಲ್ಲಿನ ಧ್ವನಿ ವರ್ಧಕಗಳಿಂದ ಮಿತಿ ಮೀರಿದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರಕಾರ ಹೈಕೋರ್ಟ್‌ನಿಂದ ನಾಲ್ಕು ವಾರ ಕಾಲಾವಕಾಶ ಪಡೆದಿದೆ. ಪಿ. ರಾಕೇಶ್‌ ಮತ್ತು ಅಯ್ಯಪ್ಪ ದಾಸ್‌ ಬಾಲ ಗೋಪಾಲ್‌ ಸೇರಿ ಥಣಿ ಸಂದ್ರ ಮುಖ್ಯ ರಸ್ತೆಯ ಐಕಾನ್‌ ಅಪಾರ್ಟ್‌ಮೆಂಟ್‌ನ 32 ಮಂದಿ ನಿವಾಸಿಗಳು ಸುತ್ತಲಿನ 16 ಮಸೀದಿಗಳ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿತು. ಅಲ್ಲದೆ, ರಾಷ್ಟೀಯ ಹಸಿರು ನ್ಯಾಯಾಧಿಕರಣದ ನಿರ್ದೇಶನಗಳ ಪ್ರಕಾರ, ಈ ಅರ್ಜಿಯ ವಿಚಾರಣಾ ಮಾನ್ಯತೆಯನ್ನು ಮುಂದಿನ ವಿಚಾರಣೆ ದಿನದಂದು ಪರಿಶೀಲಿಸಲಾಗುವುದು ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್ 16ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಾದಿಸಿದ ವಕೀಲ ಶ್ರೀಧರ ಪ್ರಭು, 'ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು - 2000 ರ ಅನ್ವಯ ಲಿಖಿತ ಪರವಾನಗಿ ಪಡೆಯದ ಹೊರತು ಧ್ವನಿ ವರ್ಧಕಗಳನ್ನು ಬಳಸುವುದಿಲ್ಲವೆಂದು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ನಗರದ ಥಣಿಸಂದ್ರ ಹಾಗೂ ಸುತ್ತಲಿನ 16 ಮಸೀದಿಗಳಿಗೆ ಕೋರ್ಟ್‌ ನಿರ್ದೇಶನ ನೀಡಿತ್ತು' ಎಂದು ನ್ಯಾಯ ಪೀಠದ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಮಸೀದಿಗಳ ಆಡಳಿತ ಮಂಡಳಿ ಪರ ವಕೀಲರು, 'ಎಲ್ಲಾ 16 ಮಸೀದಿಗಳಲ್ಲಿ ಶಬ್ದ ಅಳತೆ ಮತ್ತು ನಿಯಂತ್ರಣ ಮಾಪಕಗಳನ್ನು ಅಳವಡಿಸಲಾಗಿದೆ. ಇದು ಶಬ್ದ ಮಿತಿಯನ್ನು ನಿಯಂತ್ರಿಸುತ್ತದೆ. ಒಂದು ವೇಳೆ ಮಿತಿಗಿಂತ ಅಧಿಕ ಶಬ್ದ ಉಂಟಾದರೆ ಅದು ನೇರವಾಗಿ ಸಂಬಂಧಪಟ್ಟ ಪೊಲೀಸ್‌ ಠಾಣೆಯ ಗಮನಕ್ಕೆ ಬರುತ್ತದೆ. ಅದಕ್ಕೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಅಲ್ಲದೆ, ಧ್ವನಿ ವರ್ಧಕಗಳ ಬಳಕೆಗೆ ಲಿಖಿತ ಪರವಾನಗಿ ಪಡೆದುಕೊಳ್ಳಲಾಗಿದೆ' ಎಂದರು. ಸರಕಾರಿ ವಕೀಲರು ಮತ್ತು ಮಸೀದಿಗಳ ಆಡಳಿತ ಮಂಡಳಿ ಪರ ವಕೀಲರು, 'ಈ ಪ್ರಕರಣವು ಹಸಿರು ನ್ಯಾಯಾಧೀಕರಣದ ವಿಚಾರಣಾ ವ್ಯಾಪ್ತಿಗೆ ಬರುತ್ತದೆ' ಎಂದು ನ್ಯಾಯ ಪೀಠಕ್ಕೆ ತಿಳಿಸಿದರು. ಅದಕ್ಕೆ ನ್ಯಾಯ ಪೀಠ, ಎನ್‌ಜಿಟಿ ವ್ಯಾಪ್ತಿಗೆ ಬರುವ ವಿಚಾರದ ಸಂಬಂಧ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದು ಏಕೆ? ಎಂದು ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ಅವರನ್ನು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ವಕೀಲ ಶ್ರೀಧರ ಪ್ರಭು, 'ರಾಜ್ಯದ ರಾಜಧಾನಿಯ ಕೇಂದ್ರ ಸ್ಥಳದಲ್ಲಿ ಯಾವುದೇ ನ್ಯಾಯಾಧಿಕರಣ ಇಲ್ಲದಿದ್ದಾಗ, ನ್ಯಾಯಾಧಿಕರಣಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹಸಿರು ನ್ಯಾಯಾಧಿಕರಣ ಪೀಠ ಬೆಂಗಳೂರಿನಲ್ಲಿ ಇರದ ಕಾರಣ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ' ಎಂದು ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದರು.