ಎರಡೂ ಡೋಸ್‌ ಲಸಿಕೆ ಪಡೆದ 1,049 ಪೊಲೀಸರಿಗೆ ಕೊರೊನಾ ಸೋಂಕು..! ಶೀಘ್ರ ಗುಣಮುಖ..!

ಲಸಿಕೆ ಪಡೆಯುವುದರಿಂದ ಇತರೆ ಸಮಸ್ಯೆ ಎದುರಾಗಬಹುದೆಂಬ ಅನುಮಾನ ಕೆಲವು ಪೊಲೀಸ್‌ ಸಿಬ್ಬಂದಿಯಲ್ಲಿತ್ತು. ಅದರಲ್ಲೂ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುವವರು ಭಯಪಡುತ್ತಿದ್ದರು. ಇದೀಗ ಅವರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಎರಡೂ ಡೋಸ್‌ ಲಸಿಕೆ ಪಡೆದ 1,049 ಪೊಲೀಸರಿಗೆ ಕೊರೊನಾ ಸೋಂಕು..! ಶೀಘ್ರ ಗುಣಮುಖ..!
Linkup
: ಎರಡನೇ ಡೋಸ್‌ ಕೊರೊನಾ ಪಡೆದಿದ್ದ ಬೆಂಗಳೂರು ನಗರದ 1,049 ಪೊಲೀಸ್‌ ಸಿಬ್ಬಂದಿಗೆ ಕೊರೊನಾ ಎರಡನೇ ಅಲೆಯಲ್ಲಿ ಪಾಸಿಟಿವ್‌ ಬಂದಿರುವುದು ದೃಢಪಟ್ಟಿದೆ. ಬೆಂಗಳೂರು ನಗರದ ಒಟ್ಟು 1,797 ಪೊಲೀಸ್‌ ಸಿಬ್ಬಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರಲ್ಲಿ 1,672 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. 109 ಮಂದಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. 16 ಮಂದಿ ಮೃತಪಟ್ಟಿದ್ದಾರೆ. ಲಸಿಕೆ ಪಡೆದ ಬಳಿಕ ಸೋಂಕಿಗೊಳಗಾಗಿದ್ದ 1,049 ಮಂದಿ ಪೈಕಿ ಬಹುತೇಕರಲ್ಲಿ ಸೌಮ್ಯ ಲಕ್ಷಣಗಳು ಕಂಡು ಬಂದಿದ್ದು, ಕೆಲವರು ಕೆಲಸಕ್ಕೆ ಹಾಜರಾಗಿದ್ದಾರೆ. ಇದು ಲಸಿಕೆ ಪಡೆಯುವುದರಿಂದ ಬೇಗ ಗುಣಮುಖರಾಗಬಹುದು ಎಂಬುದನ್ನು ತೋರಿಸುತ್ತದೆ ಎಂದು ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಬೆಂಗಳೂರು ನಗರದಲ್ಲಿ 18,900 ಪೊಲೀಸ್‌ ಸಿಬ್ಬಂದಿ ಇದ್ದಾರೆ. ಅದರಲ್ಲಿ 15,158 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಡಿಜಿ, ಐಜಿಪಿ ಪ್ರವೀಣ್‌ ಸೂದ್‌ ಹಾಗೂ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಫೆಬ್ರವರಿಯಲ್ಲೇ ಲಸಿಕೆ ಪಡೆದು, ಲಸಿಕೆ ಪಡೆದ ರಾಜ್ಯ ಪೊಲೀಸರಲ್ಲಿ ಮೊದಲಿಗರಾಗಿದ್ದಾರೆ. ಇದೇ ಮಾದರಿಯಲ್ಲಿ ಇತರೆ ಪೊಲೀಸ್‌ ಅಧಿಕಾರಿಗಳು ಲಸಿಕೆ ಪಡೆದು ಮಾದರಿಯಾಗಿ ಇತರರು ಲಸಿಕೆ ಪಡೆಯುವಂತೆ ಹುರಿದುಂಬಿಸಬೇಕು. ಮೊದ ಮೊದಲು ಲಸಿಕೆ ಪಡೆಯುವುದರಿಂದ ಇತರೆ ಸಮಸ್ಯೆ ಎದುರಾಗಬಹುದೆಂಬ ಅನುಮಾನ ಕೆಲವು ಪೊಲೀಸ್‌ ಸಿಬ್ಬಂದಿಯಲ್ಲಿತ್ತು. ಅದರಲ್ಲೂ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುವವರು ಭಯಪಡುತ್ತಿದ್ದರು. ಹೀಗಾಗಿ, ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ವೈದ್ಯಕೀಯ ಶಿಬಿರ ಆಯೋಜಿಸಿ ವೈದ್ಯರಿಂದ ಲಸಿಕೆ ಪಡೆಯುವುದರ ಉದ್ದೇಶ ತಿಳಿಸಲಾಗುತ್ತಿದೆ. ಜತೆಗೆ, ಅಡ್ಡ ಪರಿಣಾಮ ಬೀರಬಹುದೆಂಬ ಅನುಮಾನವಿರುವವರಿಗೂ ಮನವರಿಕೆ ಮಾಡಿಕೊಡಲಾಗುತ್ತಿದೆ.