ಮತ್ತೆ ತೈಲ ಬೆಲೆ ಏರಿಕೆ, ಮಹಾರಾಷ್ಟ್ರದಲ್ಲಿ ಸೆಂಚುರಿ ದಾಟಿದ ಲೀಟರ್‌ ಪೆಟ್ರೋಲ್‌ ದರ

ಬೆಂಗಳೂರು ನಗರದಲ್ಲಿ ಪೆಟ್ರೋಲ್‌ ಬೆಲೆ 27 ಪೈಸೆ ಹೆಚ್ಚಳವಾಗಿದ್ದು, 94.57 ರೂ.ಗೆ ಏರಿಕೆಯಾಗಿದೆ. ಇನ್ನು ಡೀಸೆಲ್‌ ಬೆಲೆ ಲೀಟರ್‌ಗೆ 35 ಪೈಸೆ ಹೆಚ್ಚಳವಾಗಿದ್ದು 86.99 ರೂ.ಗೆ ಮುಟ್ಟಿದೆ.​​

ಮತ್ತೆ ತೈಲ ಬೆಲೆ ಏರಿಕೆ, ಮಹಾರಾಷ್ಟ್ರದಲ್ಲಿ ಸೆಂಚುರಿ ದಾಟಿದ ಲೀಟರ್‌ ಪೆಟ್ರೋಲ್‌ ದರ
Linkup
ಹೊಸದಿಲ್ಲಿ: ಕಳೆದ ಎರಡು ದಿನಗಳಿಂದ ಏರಿಕೆ ಕಾಣದೇ ಇದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಸೋಮವಾರ ಮತ್ತೆ ಹೆಚ್ಚಳವಾಗಿವೆ. ದಿಲ್ಲಿಯಲ್ಲಿ 26 ಪೈಸೆ ಏರಿಕೆಯಾಗಿದ್ದು, ಲೀಟರ್‌ 91.53 ರೂ. ತಲುಪಿದೆ. 33 ಪೈಸೆ ತುಟ್ಟಿಯಾಗಿದ್ದು 82.06 ರೂ.ಗೆ ಏರಿಕೆಯಾಗಿದೆ. ಮೆಟ್ರೋ ನಗರಗಳಲ್ಲಿ ಮುಂಬಯಿನಲ್ಲಿ ತೈಲ ಬೆಲೆ ಗರಿಷ್ಠ ಮಟ್ಟದಲ್ಲಿದೆ. ವಾಣಿಜ್ಯ ನಗರಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 97.86 ರೂ. ಇದ್ದರೆ, ಡೀಸೆಲ್‌ ದರ 89.17 ರೂ. ಇದೆ. ಈಗಾಗಲೇ ಮಧ್ಯ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಪೆಟ್ರೋಲ್‌ ದರ 100 ರೂ. ದಾಟಿದ್ದು, ಇದೇ ಪಟ್ಟಿಗೆ ಇದೀಗ ಮಹಾರಾಷ್ಟ್ರ ಕೂಡ ಸೇರ್ಪಡೆಯಾಗಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಪೆಟ್ರೋಲ್‌ ದರ ಸೆಂಚುರಿ ಬಾರಿಸಿದೆ. ಮಹಾರಾಷ್ಟ್ರದ ಪರ್ಭಾನಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 100.20 ರೂ. ತಲುಪಿದೆ. ರಾಜಸ್ಥಾನದ ಶ್ರೀ ಗಂಗಾನಗರ್‌ನಲ್ಲಿ ಪೆಟ್ರೋಲ್‌ನ್ನು ಲೀಟರ್‌ಗೆ 102.42 ರೂ. ದರದಲ್ಲಿ ಮಾರಲಾಗುತ್ತಿದ್ದರೆ, ಮಧ್ಯ ಪ್ರದೇಶದ ಅನುಪ್ಪುರ್‌ನಲ್ಲಿ 102.12 ರೂ. ಬೆಲೆ ಇದೆ.
ನಗರ ಪೆಟ್ರೋಲ್‌ ದರ (ರೂ.) ಡೀಸೆಲ್‌ ದರ (ರೂ.)
ದಿಲ್ಲಿ 91.53 82.06
ಮುಂಬಯಿ 97.86 89.17
ಚೆನ್ನೈ 93.38 86.96
ಕೋಲ್ಕೊತ್ತಾ 91.66 84.90
ಬೆಂಗಳೂರು 94.57 86.99
ಕಳೆದ ಒಂದು ವಾರದಲ್ಲಿ ಐದು ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್‌ 1.14 ರೂ. ತುಟ್ಟಿಯಾಗಿದೆ. ಡೀಸೆಲ್‌ ಬೆಲೆ ಲೀಟರ್‌ಗೆ 1.33 ರೂ. ಹೆಚ್ಚಾಗಿದೆ. ಕೆಲವು ರಾಜ್ಯಗಳಲ್ಲಿ ಇದಕ್ಕಿಂತಲೂ ಹೆಚ್ಚು ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಎಷ್ಟಿದೆ? ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ 27 ಪೈಸೆ ಹೆಚ್ಚಳವಾಗಿದ್ದು, 94.57 ರೂ.ಗೆ ಏರಿಕೆಯಾಗಿದೆ. ಇನ್ನು ಡೀಸೆಲ್‌ ಬೆಲೆ 35 ಪೈಸೆ ಹೆಚ್ಚಳವಾಗಿದ್ದು 86.99 ರೂ.ಗೆ ಮುಟ್ಟಿದೆ. ಕಚ್ಚಾ ತೈಲ ದರ ಏರಿಕೆ ಅಮೆರಿಕದ ಪ್ರಮುಖ ತೈಲ ಸರಬರಾಜು ಪೈಪ್‌ಲೈನ್‌ ಮೇಲೆ ಸೈಬರ್‌ ದಾಳಿ ನಡೆದ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬೆನ್ನಿಗೆ ಸೋಮವಾರ ಕಚ್ಚಾ ತೈಲ ದರ ಶೇ. 1ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲದ ದರ ಬ್ಯಾರಲ್‌ಗೆ 69.04 ಡಾಲರ್‌ಗೆ ತಲುಪಿದ್ದರೆ, ಡಬ್ಲ್ಯೂಟಿಐ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 65.60 ಡಾಲರ್‌ಗೆ ಮುಟ್ಟಿದೆ.