ಮಣ್ಣಲ್ಲಿ ಮಣ್ಣಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್

ಕನ್ನಡ ನಟ ಸಂಚಾರಿ ವಿಜಯ್ ಅವರ ಅಂತ್ಯಸಂಸ್ಕಾರ ಇಂದು ಅವರ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನೆರವೇರಿತು.

ಮಣ್ಣಲ್ಲಿ ಮಣ್ಣಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್
Linkup
'ನಾನು ಅವನಲ್ಲ.. ಅವಳು' ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಕನ್ನಡ ನಟ ಅವರ ಅಂತ್ಯಸಂಸ್ಕಾರ ಇಂದು 3.50ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನೆರವೇರಿತು. ಕುಟುಂಬಸ್ಥರ ಆಕ್ರಂದನ, ಸ್ನೇಹಿತರ ರೋಧನ, ಶೋಕತಪ್ತ ಗ್ರಾಮಸ್ಥರ ಮಧ್ಯೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕುಪ್ಪೂರು ಯತೀಶ್ವರ ಶಿವಾಚಾರ್ಯಶ್ರೀ ನೇತೃತ್ವದಲ್ಲಿ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆ ನಡೆಯಿತು. ಸಂಚಾರಿ ವಿಜಯ್ ಅವರ ಆತ್ಮೀಯ ಸ್ನೇಹಿತ ರಘು ತೋಟದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಅಂತಿಮ ವಿಧಿ ವಿಧಾನಗಳನ್ನು ಸಂಚಾರಿ ವಿಜಯ್ ಸಹೋದರರು ನೆರವೇರಿಸಿಕೊಟ್ಟರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಇಂದು ಬೆಳಗಿನ ಜಾವ ಕೊನೆಯುಸಿರು ಕಳೆದ ಶನಿವಾರ ತಡರಾತ್ರಿ ಜೆಪಿ ನಗರದ ಏಳನೇ ಹಂತದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ನಟ ಸಂಚಾರಿ ವಿಜಯ್ ತೀವ್ರವಾಗಿ ಗಾಯಗೊಂಡಿದ್ದರು. ತಲೆಗೆ ಬಲವಾಗಿ ಪೆಟ್ಟು ಬಿದ್ದ ಕಾರಣ ಅವರು ಕೋಮಾಕ್ಕೆ ಜಾರಿದರು. ಬ್ರೇನ್ ಫೇಲ್ಯೂರ್ ಮತ್ತು ಬ್ರೇನ್ ಡೆತ್ ಆದ ಪರಿಣಾಮ ಇಂದು ಬೆಳಗಿನ ಜಾವ ಅಪೋಲೋ ಆಸ್ಪತ್ರೆಯಲ್ಲಿ ನಟ ಸಂಚಾರಿ ವಿಜಯ್ ಕೊನೆಯುಸಿರೆಳೆದರು. ಅಂಗಾಂಗ ದಾನ ಪ್ರಕ್ರಿಯೆ ಮತ್ತು ಮರಣೋತ್ತರ ಪರೀಕ್ಷೆ ನೆರವೇರಿಸಿದ ಬಳಿಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟ ಶಿವರಾಜ್‌ಕುಮಾರ್, ಡಾಲಿ ಧನಂಜಯ, ವಾಸುಕಿ ವೈಭವ್, ಶೈನ್ ಶೆಟ್ಟಿ, ಮುಖ್ಯಮಂತ್ರಿ ಚಂದ್ರು, ವೈ.ಎಸ್‌.ವಿ ದತ್ತ, ರಂಗಾಯಣ ರಘು, ನಿರ್ದೇಶಕ ಲಿಂಗದೇವರು, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಅನೇಕರು ಸಂಚಾರಿ ವಿಜಯ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಹುಟ್ಟೂರಾದ ಕಡೂರಿನ ಪಂಚನಹಳ್ಳಿಗೆ ಸಂಚಾರಿ ವಿಜಯ್ ಪಾರ್ಥೀವ ಶರೀರವನ್ನು ರವಾನಿಸಲಾಯಿತು. ಪಂಚನಹಳ್ಳಿಯಲ್ಲಿನ ಆತ್ಮೀಯ ಸ್ನೇಹಿತನ ತೋಟದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಟ ಸಂಚಾರಿ ವಿಜಯ್ ಮಣ್ಣಲ್ಲಿ ಮಣ್ಣಾದರು.