ಸ್ಥಗಿತಗೊಂಡ ಚೀನಾದ ಪೂರೈಕೆ, ವಾರಣಾಸಿಗೆ ಇನ್ಮುಂದೆ ಕರ್ನಾಟಕದಿಂದ ರೇಷ್ಮೆ ?

ಉತ್ತರ ಪ್ರದೇಶದ ವಾರಣಾಸಿಗೆ ಚೀನಾದಿಂದ ರೇಷ್ಮೆ ಪೂರೈಕೆ ಸ್ಥಗಿತಗೊಂಡಿದ್ದು, ಕಚ್ಚಾ ರೇಷ್ಮೆಯನ್ನು ಪೂರೈಕೆ ಮಾಡಲು ಕರ್ನಾಟಕ ಮುಂದಾಗಿದೆ. ಈ ಸಂಬಂಧ ಉತ್ತರ ಪ್ರದೇಶ ರೇಷ್ಮೆ ಸಚಿವರ ಜೊತೆ ಸಚಿವ ಡಾ.ಕೆ.ಸಿ. ನಾರಾಯಣಗೌಡ ಅವರ ನೇತೃತ್ವದ ನಿಯೋಗದ ಸಭೆ ನಡೆಸಲಿದೆ.

ಸ್ಥಗಿತಗೊಂಡ ಚೀನಾದ ಪೂರೈಕೆ, ವಾರಣಾಸಿಗೆ ಇನ್ಮುಂದೆ ಕರ್ನಾಟಕದಿಂದ ರೇಷ್ಮೆ ?
Linkup
ಬೆಂಗಳೂರು: ಉತ್ತರ ಪ್ರದೇಶದ ವಾರಣಾಸಿಗೆ ಪೂರೈಕೆ ಮಾಡಲು ಕರ್ನಾಟಕ ಮುಂದಾಗಿದೆ.‌ ಈ ಕುರಿತಾಗಿ ರೇಷ್ಮೆ ಸಚಿವರ ಜೊತೆ ಸಚಿವ ಡಾ.ಕೆ.ಸಿ. ನಾರಾಯಣಗೌಡ ಅವರ ನೇತೃತ್ವದ ನಿಯೋಗದ ಸಭೆ ನಡೆಸಲಿದೆ. ಈ ಸಂಬಂಧ ಬುಧವಾರ ಸಚಿವ ನಾರಾಯಣಗೌಡ ನೇತೃತ್ವದ ನಿಯೋಗ ವಾರಣಾಸಿಗೆ ತೆರಳಲಿದೆ. ರಾಜ್ಯದಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ ಬೆಳೆಯಲಾಗುತ್ತಿದ್ದು, ಕರ್ನಾಟಕ ರಾಜ್ಯ ರೇಷ್ಮೆ ಉತ್ಪಾದನೆಯಲ್ಲಿ ವಿಶ್ವವಿಖ್ಯಾತಿ ಪಡೆದಿದೆ. ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೆ, ಬನಾರಸ್ ಸೀರೆಗಳ ನೇಯ್ಗೆಗೆ ಹೆಸರುವಾಸಿಯಾಗಿದೆ. ಹಾಗಾಗಿ, ವಾರಣಾಸಿಗೆ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಇದೀಗ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಸರ್ಕಾರದ ಜೊತೆ ಚರ್ಚಿಸಲು ಸಚಿವ ಡಾ. ನಾರಾಯಣಗೌಡ ಅವರ ನೇತೃತ್ವದ ನಿಯೋಗ ವಾರಣಾಸಿಗೆ ಭೇಟಿ ನೀಡುತ್ತಿದೆ. ನವೆಂಬರ್ 18ರಂದು ಸಚಿವ ನಾರಾಯಣಗೌಡ ಅವರು ಉತ್ತರ ಪ್ರದೇಶದ ರೇಷ್ಮೆ ಸಚಿವರಾದ ಸಿದ್ಧಾರ್ಥ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಶಾಖೆ ತೆರೆಯುವ ಕುರಿತು ಹಾಗೂ ಕರ್ನಾಟಕದಿಂದ ವಾರಣಾಸಿಗೆ ರೇಷ್ಮೆ ಕಳುಹಿಸುವ ಸಂಬಂಧ ಸಭೆ ನಡೆಸಲಿದ್ದಾರೆ. ಉತ್ತರ ಪ್ರದೇಶ ರೇಷ್ಮೆ ಸಚಿವರ ಜೊತೆಗಿನ ಸಭೆ ಬಳಿಕ ವಾರಣಾಸಿಯಲ್ಲಿ ನೇಕಾರರನ್ನು ಭೇಟಿ ಮಾಡಿ, ಅಲ್ಲಿನ ಸ್ಥಿತಿಗತಿಗಳ ಕುರಿತು ಸಚಿವರು ಪರಿಶೀಲನೆಯನ್ನೂ ನಡೆಸಲಿದ್ದಾರೆ. ಕರ್ನಾಟಕದ ರೇಷ್ಮೆಗೂ ವಾರಣಾಸಿ ನೇಕಾರರಿಗೂ ಅವಿನಾಭಾವ ಸಂಬಂಧವಿದೆ. ವಾರಣಾಸಿಗೆ ಕರ್ನಾಟಕ ಮತ್ತು ಚೀನಾದಿಂದ ರೇಷ್ಮೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಚೀನಾದ‌ ಅಗ್ಗದ ರೇಷ್ಮೆ ಅಬ್ಬರಕ್ಕೆ ಸಿಲುಕಿ ಕರ್ನಾಟಕದ ರೇಷ್ಮೆ ಖರೀದಿಯಲ್ಲಿ ಕುಂಠಿತವಾಗಿತ್ತು. ಆದರೀಗ ಚೀನಾದಿಂದ ರೇಷ್ಮೆ ಆಮದು ಸ್ಥಗಿತಗೊಳಿಸಿರುವುದರಿಂದ ಮತ್ತೆ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಪೂರೈಕೆ ಮಾಡಲು ಹಾಗೂ ವಾರಣಾಸಿಗೆ ಸಂಪೂರ್ಣ ರೇಷ್ಮೆಯನ್ನು ಕರ್ನಾಟಕದಿಂದಲೇ ಪೂರೈಸುವ ಸಂಬಂಧ ಉತ್ತರ ಪ್ರದೇಶ ರೇಷ್ಮೆ ಸಚಿವರ ಜೊತೆ ಸಚಿವ ಡಾ. ನಾರಾಯಣಗೌಡ ಅವರು ಚರ್ಚಿಸಲಿದ್ದಾರೆ.