ಭರ್ಜರಿ 26,805 ಕೋಟಿ ರೂ. ಹೂಡಿಕೆ ಸಂಗ್ರಹಿಸಿದ ಫ್ಲಿಪ್‌ಕಾರ್ಟ್‌

ವಾಲ್‌ಮಾರ್ಟ್‌ ಒಡೆತನದ, ಬೆಂಗಳೂರು ಮೂಲದ ಇ-ಕಾಮರ್ಸ್‌ ದಿಗ್ಗಜ ಫ್ಲಿಪ್‌ಕಾರ್ಟ್‌ 26,805 ಕೋಟಿ ರೂ. ಹೊಸ ಹೂಡಿಕೆ ಗಳಿಸಿದ್ದು, ಇದರೊಂದಿಗೆ ಕಂಪನಿಯ ಮಾರುಕಟ್ಟೆ ಮೌಲ್ಯ ಈಗ 2.78 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ.

ಭರ್ಜರಿ 26,805 ಕೋಟಿ ರೂ. ಹೂಡಿಕೆ ಸಂಗ್ರಹಿಸಿದ ಫ್ಲಿಪ್‌ಕಾರ್ಟ್‌
Linkup
ಬೆಂಗಳೂರು: ವಾಲ್‌ಮಾರ್ಟ್‌ ಒಡೆತನದ, ಬೆಂಗಳೂರು ಮೂಲದ ಇ-ಕಾಮರ್ಸ್‌ ದಿಗ್ಗಜ 3.6 ಶತಕೋಟಿ ಡಾಲರ್‌ (ಅಂದಾಜು 26,805 ಕೋಟಿ ರೂ.) ಹೊಸ ಗಳಿಸಿದೆ. ಹಲವಾರು ಜಾಗತಿಕ ಮಟ್ಟದ ಕಂಪನಿಗಳಿಂದ ಹೊಸ ಹೂಡಿಕೆಯನ್ನು ಗಳಿಸುವಲ್ಲಿ ಕಂಪನಿ ಯಶಸ್ವಿಯಾಗಿದೆ. ಫ್ಲಿಪ್‌ಕಾರ್ಟ್‌ನ ಹೂಡಿಕೆದಾರನಾಗಿ ಜಪಾನ್‌ ಮೂಲದ ಸಾಫ್ಟ್‌ಬ್ಯಾಂಕ್‌ ಮರಳಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್‌ನ ಮಾರುಕಟ್ಟೆ ಮೌಲ್ಯ ಈಗ 37.6 ಶತಕೋಟಿ ಡಾಲರ್‌ಗೆ (2.78 ಲಕ್ಷ ಕೋಟಿ ರೂ.) ವೃದ್ಧಿಸಿದೆ. ಸಿಂಗಾಪುರ ಮೂಲದ ಜಿಐಸಿ (ಸಿಂಗಾಪುರಿಯನ್‌ ಸಾವರಿನ್‌ ವೆಲ್ತ್‌ ಫಂಡ್‌), ಜಪಾನ್‌ನ ಸಾಫ್ಟ್‌ ಬ್ಯಾಂಕ್‌, ಕತಾರ್‌ ಇನ್ವೆಸ್ಟ್‌ಮೆಂಟ್‌ ಅಥಾರಿಟಿ, ಡಿಸರಪ್ಟ್‌ ಎಡಿ, ಟೈಗರ್‌ ಗ್ಲೋಬಲ್‌ ಮುಂತಾದ ಕಂಪನಿಗಳು ಹೂಡಿಕೆ ಮಾಡಿವೆ. ಸ್ವತಃ ವಾಲ್‌ಮಾರ್ಟ್‌ ಕೂಡ ಹೂಡಿಕೆ ಮಾಡಿದೆ. ''ಜಾಗತಿಕ ಕಂಪನಿಗಳಿಂದ ಲಭಿಸಿರುವ ಹೂಡಿಕೆಯು ಭಾರತದ ಇ-ಕಾಮರ್ಸ್‌ ವಲಯದಲ್ಲಿ ಮತ್ತು ಫ್ಲಿಪ್‌ಕಾರ್ಟ್‌ನ ಬೆಳವಣಿಗೆ ಬಗ್ಗೆ ಅಂತಾರಾಷ್ಟ್ರೀಯ ಹೂಡಿಕೆದಾರರು ಇಟ್ಟಿರುವ ವಿಶ್ವಾಸವನ್ನು ಬಿಂಬಿಸಿದೆ. ನಾವು ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಭಾರತೀಯ ಉದ್ದಿಮೆಗಳು, ವ್ಯಾಪಾರಸ್ಥರಿಗೆ, ಕಿರಾಣಿ ಅಂಗಡಿಯವರಿಗೆ ಬಿಸಿನೆಸ್‌ ವೃದ್ಧಿಸಲು ಸಹಕರಿಸುತ್ತೇವೆ. ನಾವು ಮೇಡ್‌ ಇನ್‌ ಇಂಡಿಯಾ ತಂತ್ರಜ್ಞಾನಗಳಲ್ಲಿ ಹೂಡಿಕೆಯನ್ನೂ ಮುಂದುವರಿಸುತ್ತಿದ್ದೇವೆ. ಗ್ರಾಹಕರ ಶಾಪಿಂಗ್‌ ಅನುಭವವನ್ನು ಸುಧಾರಿಸಲು ಶ್ರಮಿಸುತ್ತೇವೆ. ವಿಶ್ವ ದರ್ಜೆಯ ಪೂರೈಕೆ ಸರಣಿಯನ್ನು ಕಟ್ಟುತ್ತೇವೆ," ಎಂದು ಫ್ಲಿಪ್‌ಕಾರ್ಟ್‌ನ ಸಿಇಒ ಕೃಷ್ಣಮೂರ್ತಿ ತಿಳಿಸಿದ್ದಾರೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್‌ ಮಾರುಕಟ್ಟೆಯಲ್ಲಿ ಅಮೆಜಾನ್‌, ರಿಲಯನ್ಸ್‌ ಇಂಡಸ್ಟ್ರೀಸ್‌ನ ಜಿಯೊ ಮಾರ್ಟ್‌ ಮತ್ತಿತರ ಇ-ಕಾಮರ್ಸ್‌ ಕಂಪನಿಗಳ ಜತೆ ಫ್ಲಿಪ್‌ಕಾರ್ಟ್‌ ಸ್ಪರ್ಧಿಸುತ್ತಿದೆ. 2007ರಲ್ಲಿ ಫ್ಲಿಪ್‌ಕಾರ್ಟ್‌ ಬೆಂಗಳೂರಿನಲ್ಲಿ ಸ್ಥಾಪನೆಯಾಗಿತ್ತು. ನಂತರ ಇದನ್ನು ವಾಲ್‌ಮಾರ್ಟ್‌ ಖರೀದಿಸಿತ್ತು.