ಭಜರಂಗಿ-2 ಈವೆಂಟ್‌ನಲ್ಲೇ ಡಲ್ ಆಗಿದ್ದ ಅಪ್ಪು: ವಿಧಿ 10 ನಿಮಿಷ ಟೈಮ್ ಕೊಡಬಹುದಿತ್ತು- ಶಿವಣ್ಣ ಬೇಸರ

ಭಜರಂಗಿ-2 ಈವೆಂಟ್‌ನಲ್ಲಿ ಪುನೀತ್ ರಾಜ್‌ಕುಮಾರ್ ಕೊಂಚ ಡಲ್ ಆಗಿದ್ದರಂತೆ. ಅದನ್ನ ಗಮನಿಸಿದ ಗೀತಾ ಶಿವರಾಜ್ ಕುಮಾರ್ ಪತಿಗೆ ತಿಳಿಸಿದ್ದಾರೆ. ಅಸಲಿಗೆ ಅವತ್ತು ಪುನೀತ್ ರಾಜ್‌ಕುಮಾರ್ ಫಿಸಿಯೋ ಮಾಡಿಸಿಕೊಂಡು ಬಂದಿದ್ದರಂತೆ!

ಭಜರಂಗಿ-2 ಈವೆಂಟ್‌ನಲ್ಲೇ ಡಲ್ ಆಗಿದ್ದ ಅಪ್ಪು: ವಿಧಿ 10 ನಿಮಿಷ ಟೈಮ್ ಕೊಡಬಹುದಿತ್ತು- ಶಿವಣ್ಣ ಬೇಸರ
Linkup
‘ಭಜರಂಗಿ-2’ ಸಿನಿಮಾದ ಬಿಡುಗಡೆಗೂ ಮುನ್ನ ಪ್ರೀ-ರಿಲೀಸ್ ಈವೆಂಟ್ ನಡೆದಿತ್ತು. ಅಕ್ಟೋಬರ್ 27 ರಂದು ನಡೆದ ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಜೊತೆಗೆ ಕೂಡ ಭಾಗವಹಿಸಿದ್ದರು. ವೇದಿಕೆ ಮೇಲೆ ಶಿವಣ್ಣ, ಯಶ್ ಜೊತೆಗೆ ಅಪ್ಪು ಕೂಡ ಡ್ಯಾನ್ಸ್ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಕೊಂಚ ಡಲ್ ಆಗಿದ್ದರಂತೆ. ಅದನ್ನ ಗಮನಿಸಿದ ಗೀತಾ ಪತಿಗೆ ತಿಳಿಸಿದ್ದಾರೆ. ಅಸಲಿಗೆ ಅವತ್ತು ಪುನೀತ್ ರಾಜ್‌ಕುಮಾರ್ ಫಿಸಿಯೋ ಮಾಡಿಸಿಕೊಂಡು ಬಂದಿದ್ದರಂತೆ! ಈ ವಿಚಾರವನ್ನು ಇದೀಗ ಮಾಧ್ಯಮಗಳ ಜೊತೆಗೆ ಶಿವರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನವಾರ್ತೆಯಿಂದ ಆಘಾತಗೊಂಡಿದ್ದ ರಾಮ್ ಚರಣ್ ತೇಜಾ ಇಂದು ಶಿವರಾಜ್ ಕುಮಾರ್ ಮನೆಗೆ ಭೇಟಿ ಕೊಟ್ಟಿದ್ದರು. ರಾಮ್ ಚರಣ್ ತೇಜಾ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಶಿವರಾಜ್ ಕುಮಾರ್ ಮಾತಿಗಿಳಿದರು. ಶಿವರಾಜ್ ಕುಮಾರ್ ಹೇಳಿದ್ದೇನು? ‘’ಮೊನ್ನೆ ಶಿವಕಾರ್ತಿಕೇಯನ್ ಅವರು ಬಂದಿದ್ದರು. ನಾಗಾರ್ಜುನ ಬಂದಿದ್ದರು. ಇವತ್ತು ನಕೀರನ್ ಗೋಪಾಲ್ ಮತ್ತು ರಾಮ್ ಚರಣ್ ತೇಜಾ ಬಂದಿದ್ದರು. ಸಾಕಷ್ಟು ಗಣ್ಯರು ಬರುತ್ತಿದ್ದಾರೆ. ದುಃಖವನ್ನು ನಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ. ಆ ಪ್ರೀತಿಯನ್ನ ಅಪ್ಪು ಗಳಿಸಿಕೊಂಡಿದ್ದಾರೆ. ಅಪ್ಪು ಇಲ್ಲ ಅಂತ ಹೇಳೋಕೆ ಮನಸ್ಸಿಗೆ ತುಂಬಾ ಕಷ್ಟ ಆಗುತ್ತದೆ. ಹೇಗೆ ಇದೆಲ್ಲಾ ಆಯ್ತು ಅಂತ ಎಲ್ಲರೂ ಕೇಳುತ್ತಾರೆ. ನಮಗೂ ಅದೇ ಪ್ರಶ್ನೆ ಕಾಡುತ್ತಿದೆ. ಈ ನೋವಿನಿಂದ ನಾವು ಯಾವಾಗ ಸುಧಾರಿಸಿಕೊಳ್ಳುತ್ತೇವೆ ಅನ್ನೋದು ನಮಗೇ ಗೊತ್ತಿಲ್ಲ. ಊಟ ಮಾಡಬಹುದು, ಮಲಗಬಹುದು ಆದರೆ ಮನಸ್ಸಿನಲ್ಲಿ ನೋವಂತೂ ಕಾಡುತ್ತಲೇ ಇರುತ್ತದೆ. ನಾವು ಯಾವತ್ತೂ ಅಪ್ಪು ಫ್ಯಾಮಿಲಿ ಜೊತೆಲೇ ಇರ್ತೀವಿ. ಯಾವುದೇ ಸಪೋರ್ಟ್ ಆದರೂ ಮಾಡೇ ಮಾಡ್ತೀವಿ. ನಮ್ಮ ತಮ್ಮನ ಬಗ್ಗೆ ನನಗೆ ಹೆಮ್ಮೆ ಇದೆ’’ ಎಂದರು ಶಿವಣ್ಣ. ದುಃಖ ಪಟ್ಟ ರಜನಿಕಾಂತ್ ‘’ರಜನಿಕಾಂತ್ ಅವರು ಕೂಡ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಅವರ ಪುತ್ರಿ ಹಾಗೂ ಪತ್ನಿ ಫೋನ್ ಮಾಡಿ ನಮ್ಮ ಜೊತೆ ಮಾತನಾಡಿದ್ದರು. ಅವರಿಗೂ ತುಂಬಾ ಶಾಕ್ ಆಗಿದೆ. ಪುನೀತ್ ಇಲ್ಲ ಅನ್ನೋದನ್ನ ಅವರಿಗೂ ನಂಬೋಕೆ ಆಗುತ್ತಿಲ್ಲ. ಅಪ್ಪು ಚಿಕ್ಕ ಮಗುವಿದ್ದಾಗಿನಿಂದ ಅವರು ನೋಡಿದ್ದಾರೆ. ಹೀಗಾಗಿ ರಜನಿಕಾಂತ್ ಕೂಡ ತುಂಬಾ ದುಃಖ ಪಟ್ಟಿದ್ದಾರೆ’’ ಎಂದು ಶಿವಣ್ಣ ತಿಳಿಸಿದರು. ಭಜರಂಗಿ-2 ಈವೆಂಟ್‌ನಲ್ಲಿ ಡಲ್ ಆಗಿದ್ದ ಅಪ್ಪು ‘’ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಅಪ್ಪು ಯಾಕೋ ಡಲ್ ಆಗಿದ್ದಾರೆ ಅಂತ ನನಗೆ ಗೀತಾ ಹೇಳ್ತಿದ್ರು. ಶೂಟಿಂಗ್ ಮುಗಿಸಿ ಬರಬೇಕಾದರೆ ಸುಸ್ತಾಗಿರುತ್ತೆ ಅಂದುಕೊಂಡೆ. ನೋಡಿದರೆ ಅವತ್ತು ಫಿಸಿಯೋ ಮಾಡಿಬಿಟ್ಟು ಬಂದಿದ್ದಾನೆ. ಅದಕ್ಕಾಗಿ ಸ್ವಲ್ಪ ಡಲ್ ಆಗಿದ್ದ. ಅದು ಬಿಟ್ಟರೆ ಸೂಚನೆ ಅನ್ನೋದೇ ಇಲ್ಲ. ಹಾಗಿದಿದ್ದರೆ ಸುಮ್ಮನೆ ಬಿಡೋಕೆ ಆಗುತ್ತಿತ್ತಾ? ನಾನಾದರೂ ಹೇಳುತ್ತಿದ್ದೆ ‘’ಒಂದ್ಸಲಿ ಚೆಕ್ ಮಾಡ್ಸು ಅಪ್ಪು, ಯಾಕೆ’’ ಅಂತ. ಆದರೆ ಏನೂ ಸೂಚನೆಯೇ ಸಿಕ್ಕಿಲ್ಲ. ಯಾಕಂದ್ರೆ, ಅವನು ತುಂಬಾ ಫಿಟ್ ಆಗಿದ್ದ’’ ಎಂದು ಶಿವಣ್ಣ ಹೇಳಿದರು. ವಿಕ್ರಂ ಆಸ್ಪತ್ರೆಗಿಂತ ಹತ್ತಿರದ ಆಸ್ಪತ್ರೆಗೆ ಹೋಗಬಹುದಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟ ಶಿವಣ್ಣ ‘’ಆ ಸಮಯದಲ್ಲಿ… ಈ ಬಗ್ಗೆ ಏನೂ ಹೇಳೋಕೆ ಆಗಲ್ಲ. ವಿಧಿ ಅಪ್ಪುಗೆ ಒಂದು 10 ನಿಮಿಷ ಟೈಮ್ ಕೊಡಬಹುದಿತ್ತು. ಎಲ್ಲರಿಗೂ ಟೈಮ್ ಕೊಡ್ತಾನೆ, ನಮ್ಮ ಅಪ್ಪುಗೆ ಯಾಕೆ ಕೊಡಲಿಲ್ಲ. ಅಂತಹ ಒಳ್ಳೆಯ ವ್ಯಕ್ತಿಗೆ ಯಾಕೆ ವಿಧಿ ಹೀಗೆ ಮಾಡ್ತು ಅನ್ನೋದು ನಮಗೆಲ್ಲಾ ಕಾಡುತ್ತಲೇ ಇರುತ್ತದೆ’’ ಎಂದರು ಶಿವರಾಜ್ ಕುಮಾರ್. ಫಿಸಿಯೋ ಥೆರಪಿ ಮಾಡಿಸಿದ್ದ ಪುನೀತ್ ರಾಜ್‌ಕುಮಾರ್ ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಡಾ.ಪಳನಿವೇಲು ಬಳಿ ಪುನೀತ್ ರಾಜ್‌ಕುಮಾರ್ ಫಿಸಿಯೋ ಥೆರಪಿ ಮಾಡಿಸಿಕೊಂಡಿದ್ದರು. ‘’ಪುನೀತ್ ಅವರಿಗೆ ಲೋವರ್ ಬ್ಯಾಕ್ ಪೇನ್ ಇತ್ತು. ಡ್ಯಾನ್ಸ್, ಫೈಟ್ಸ್ ಮಾಡೋದರಿಂದ ಆ ನೋವು ಸಹಜವಾಗಿ ಬರುತ್ತದೆ. ಅದಕ್ಕೆ ಟ್ರೀಟ್‌ಮೆಂಟ್‌ಗಾಗಿ ಬಂದಿದ್ದರು. ವರ್ಷದ ಹಿಂದೆಯೂ ಅವರಿಗೆ ಇದೇ ಪ್ಲಾಬ್ಲಂ ಬಂದಿತ್ತು. ಆಗಲೂ ಚಿಕಿತ್ಸೆ ಕೊಟ್ಟಿದ್ವಿ, ಅವರು ಗುಣಮುಖರಾಗಿದ್ದರು. ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರಲಿಲ್ಲ’’ ಎಂದು ಡಾ.ಪಳನಿವೇಲು ತಿಳಿಸಿದ್ದಾರೆ.