ಬಿ.ವಿ. ಶ್ರೀನಿವಾಸ್‌ ಸೇರಿ ರಾಜಕಾರಣಿಗಳಿಗೆ ಪೊಲೀಸರ ಕ್ಲೀನ್‌ಚಿಟ್‌, ದಿಲ್ಲಿ ಹೈಕೋರ್ಟ್‌ ಅಸಮಾಧಾನ

ದೇಶದಲ್ಲಿ ಸಾಂಕ್ರಾಮಿಕ ತಾಂಡವವಾಡುತ್ತಿರುವ ಹೊತ್ತಲ್ಲಿ ಈ ರೀತಿಯ ಖರೀದಿ, ವಿತರಣೆ ದಂಧೆಗೆ ಅವಕಾಶ ಇರಬಾರದು. ಬಿಕ್ಕಟ್ಟಿನ ಸಂದರ್ಭವನ್ನು ಲಾಭದ ಉದ್ದೇಶಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ದಿಲ್ಲಿ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಬಿ.ವಿ. ಶ್ರೀನಿವಾಸ್‌ ಸೇರಿ ರಾಜಕಾರಣಿಗಳಿಗೆ ಪೊಲೀಸರ ಕ್ಲೀನ್‌ಚಿಟ್‌, ದಿಲ್ಲಿ ಹೈಕೋರ್ಟ್‌ ಅಸಮಾಧಾನ
Linkup
ಹೊಸದಿಲ್ಲಿ: ಕೋವಿಡ್‌ ಸೋಂಕಿತರ ಬಳಕೆಯ ಆಕ್ಸಿಜನ್‌ ಮತ್ತು ಔಷಧ ದಾಸ್ತಾನು ಪ್ರಕರಣದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿವಿ ಶ್ರೀನಿವಾಸ್‌ ಸೇರಿ ಒಂಬತ್ತು ರಾಜಕಾರಣಿಗಳಿಗೆ ಕ್ಲೀನ್‌ ಚಿಟ್‌ ನೀಡಿದ ಪೊಲೀಸರ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. "ದೇಶದಲ್ಲಿ ಸಾಂಕ್ರಾಮಿಕ ತಾಂಡವವಾಡುತ್ತಿರುವಾಗ ಈ ರೀತಿಯ ಖರೀದಿ-ವಿತರಣೆ ದಂಧೆಗೆ ಅವಕಾಶ ಇರಬಾರದು. ಬಿಕ್ಕಟ್ಟಿನ ಸಂದರ್ಭವನ್ನು ಲಾಭದ ಉದ್ದೇಶಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ವರ್ತಿಸುವುದನ್ನು ಕಲಿಯಬೇಕು. ವೈದ್ಯರ ಪ್ರಿಸ್ಕ್ರಿಪ್ಷನ್‌ ಇರದೇ ಇವರು ಔಷಧವನ್ನು ಖರೀದಿಸಿದ್ದು ಹೇಗೆ,'' ಎಂದು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. "ರಾಜಕೀಯ ಲಾಭದ ಲೆಕ್ಕಾಚಾರದ ಹಿಂದೆ ಬಿದ್ದು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಔಷಧ, ಅಗತ್ಯ ಉಪಕರಣಗಳನ್ನು ಖರೀದಿಸಿ ದಾಸ್ತಾನು ಮಾಡಿದರೆ ಉಳಿದವರ ಕಥೆ ಏನು? ತುರ್ತು ಸಂದರ್ಭದಲ್ಲಿಅಗತ್ಯ ಔಷಧಗಳ ವಿತರಣೆಗೆ ಸಮರ್ಪಕ ವ್ಯವಸ್ಥೆ ಇರಬೇಕು. ಅದನ್ನು ಯಾರೂ ಅಡ್ಡಿಪಡಿಸಬಾರದು. ಆದರೆ ಈಗ ಈ ರಾಜಕಾರಣಿಗಳು ತಮಗೆ ಬೇಕಾದವರಿಗೆ ಹಂಚಿಕೆ ಮಾಡಲು ಇಷ್ಟೆಲ್ಲ ಔಷಧ ದಾಸ್ತಾನು ಇಟ್ಟುಕೊಂಡರೆ ಹೇಗೆ? ಇದು ಅಕ್ರಮ. ಇದರ ತನಿಖೆ ನಡೆಸಿ, ಸತ್ಯಾಂಶ ಹೊರಗೆಳೆಯಬೇಕಾದ ಪೊಲೀಸರು, ಕ್ಲಿನ್‌ ಚಿಟ್‌ ನೀಡಿ ಕೈತೊಳೆದುಕೊಂಡಿದ್ದಾರೆ,'' ಎಂದು ನ್ಯಾಯಮೂರ್ತಿಗಳಾದ ವಿಪಿನ್‌ ಸಂಘಿ ಮತ್ತು ಜಸ್ಮೀತ್‌ ಸಿಂಗ್‌ ಅವರಿದ್ದ ಪೀಠ ಬೇಸರ ವ್ಯಕ್ತಪಡಿಸಿತು. "ಈ ಪ್ರಕರಣದ ತನಿಖೆ ಮಾಡದೇ ಜಾರಿಕೊಂಡಿರುವುದಕ್ಕೆ ಕೆಲವು ರಾಜಕಾರಣಿಗಳು ಇದರಲ್ಲಿ ಪಾಲ್ಗೊಂಡಿರುವುದೇ ಕಾರಣ. ಪೊಲೀಸರು ಕರ್ತವ್ಯ ಪ್ರಜ್ಞೆಯಿಂದ ಜನರ ಪರ ನಿಲ್ಲುವುದನ್ನು ಕಲಿಯಬೇಕು. ಎಲ್ಲೆಡೆ ಜನ ಸಂಕಷ್ಟಕ್ಕೆ ಸಿಲುಕಿ ನರಳುತ್ತಿರುವಾಗ ಈ ರೀತಿ ದಾಸ್ತಾನು ಮಾಡಿದರೆ ಏನಾಗುತ್ತದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಿ. ಒತ್ತಡಕ್ಕೆ ಒಳಗಾಗದೇ ಕರ್ತವ್ಯ ನಿರ್ವಹಿಸಿ," ಎಂದು ಪೊಲೀಸರಿಗೆ ಚಾಟಿ ಬೀಸಿದರು. ಇಂತಹ ಕೆಲವು ಜನ ಔಷಧ, ಆಕ್ಸಿಜನ್‌ ಅನ್ನು ಮನಸೋ ಇಚ್ಛೆ ದಾಸ್ತಾನು ಮಾಡುತ್ತಿರುವುದರಿಂದಲೇ ಕೋವಿಡ್‌ ಸೋಂಕಿತರ ಸಾವು ಹೆಚ್ಚಾಗುತ್ತಿದೆ ಎನ್ನುವುದನ್ನು ಕೋರ್ಟ್‌ ಒತ್ತಿ ಹೇಳಿದೆ. ಸ್ಥಿತಿಗತಿ ವರದಿ ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಕೋವಿಡ್‌ ಚಿಕಿತ್ಸೆಗೆ ಬಳಕೆಯಾಗುವ ಔಷಧ ಮತ್ತು ಆಕ್ಸಿಜನ್‌ ಅನ್ನು ಸಂಗ್ರಹಿಸಿ, ಉಚಿತ ವಿತರಣೆ ಮಾಡುವ ಕಾರ್ಯದಲ್ಲಿ ತೊಡಗಿವೆ. ಆದರೆ ಇದರಿಂದ ಸಮರ್ಪಕ ವಿತರಣೆಗೆ ಅಡ್ಡಿಯಾಗುತ್ತದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. "ಈ ಪ್ರಕರಣದಲ್ಲಿ ಸಂಪೂರ್ಣ ಸ್ಥಿತಿಗತಿ ವರದಿ ಸಲ್ಲಿಸಿ. ರಾಜಕೀಯ ಪಕ್ಷಗಳು ಈಗ ಸಂಗ್ರಹಿಸಿ ಇಟ್ಟುಕೊಂಡಿರುವ ಎಲ್ಲಾ ಔಷಧಗಳನ್ನು ತಕ್ಷಣವೇ ದಿಲ್ಲಿ ಆರೋಗ್ಯ ಸೇವೆಗಳ ನಿರ್ದೇಶನಾಲಯಕ್ಕೆ ಒಪ್ಪಿಸಬೇಕು. ಸಾರ್ವಜನಿಕರಿಗೆ ನಿಜಕ್ಕೂ ಅವರು ಒಳಿತನ್ನು ಮಾಡಲು ಬಯಸಿದ್ದರೆ ಮೊದಲು ಈ ಕೆಲಸ ಮಾಡಲಿ,'' ಎಂದು ಹೈಕೋರ್ಟ್‌ ಆದೇಶ ನೀಡಿತು. ಹಲವು ಪಕ್ಷಗಳು ಭಾಗಿ ಕೋವಿಡ್‌ ಸೋಂಕಿತರ ಸೇವೆಗಾಗಿ ಹಲವು ರಾಜಕೀಯ ಪಕ್ಷಗಳು ಆಕ್ಸಿಜನ್‌, ಔಷಧ ಮತ್ತಿತರೆ ವೈದ್ಯಕೀಯ ಉಪಕರಣಗಳನ್ನು ಸಂಗ್ರಹಿಸಿರುವುದು ವರದಿಯಾಗಿದೆ. ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌, ಬಿಜೆಪಿ ಸಂಸದ ಗೌತಮ್‌ ಗಂಭೀರ್‌, ಪಕ್ಷದ ಮುಖಂಡ ಹರೀಶ್‌ ಖುರಾನಾ, ಆಮ್‌ ಆದ್ಮಿ ಪಾರ್ಟಿಯ ದಿಲೀಪ್‌ ಪಾಂಡೆ ಸೇರಿದಂತೆ ಒಂಬತ್ತು ರಾಜಕಾರಣಿಗಳು ಈ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿದ್ದರು. ಇವರು ಸೋಂಕಿತರಿಗೆ ಉಚಿತ ಸೇವೆ ನೀಡುತ್ತಿದ್ದು, ಯಾವುದೇ ಸ್ವಾರ್ಥದಿಂದ ಔಷಧವನ್ನು ಸಂಗ್ರಹಿಸಿಟ್ಟಿಲ್ಲ ಎಂದು ದಿಲ್ಲಿ ಪೊಲೀಸರು ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಿದ್ದರು.