
ಹೊಸದಿಲ್ಲಿ: ಚೀನಾಗೆ ಸೆಡ್ಡು ಹೊಡೆಯಲು ಮುಂದಾಗಿರುವ ದಕ್ಷಿಣ ಸಮುದ್ರಕ್ಕೆ ಈ ತಿಂಗಳು ಯುದ್ಧನೌಕೆಗಳನ್ನು ಕಳುಹಿಸುತ್ತಿದೆ. ಈ ಮೂಲಕ ವಿವಿಧ ದೇಶಗಳೊಂದಿಗೆ ಭದ್ರತಾ ಸಂಬಂಧಗಳನ್ನು ವಿಸ್ತರಿಸಲು ಮುಂದಾಗಿರುವ ಭಾರತ, ಚೀನಾವನ್ನು ಎದುರಿಸಲು ಪ್ರಾದೇಶಿಕ ಪ್ರಯತ್ನ ನಡೆಸುತ್ತಿದೆ.
ಭಾರತ ಮತ್ತು ಚೀನಾ ನಡುವಿನ ಸಾಂಪ್ರದಾಯಿಕ ವೈರತ್ವ ಗಲ್ವಾನ್ ಸಂಘರ್ಷದ ಬಳಿಕ ಮತ್ತಷ್ಟು ತೀವ್ರತೆ ಪಡೆದಿದ್ದು, ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಈಗ ಆಗ್ನೇಯ ಏಷ್ಯಾ, ದಕ್ಷಿಣ ಚೀನಾ ಸಮುದ್ರ ಮತ್ತು ಪಶ್ಚಿಮ ಪೆಸಿಫಿಕ್ಗೆ ಎರಡು ತಿಂಗಳ ಅವಧಿಗೆ ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಮತ್ತು ಕ್ಷಿಪಣಿ ಯುದ್ಧ ನೌಕೆ ಸೇರಿ ನಾಲ್ಕು ಹಡಗುಗಳನ್ನು ನಿಯೋಜಿಸಲಾಗುವುದು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಾಗರ ಕ್ಷೇತ್ರದಲ್ಲಿ ಕಾರ್ಯಾಚರಣೆಯ ವ್ಯಾಪ್ತಿ, ಶಾಂತಿಯುತ ಉಪಸ್ಥಿತಿ ಮತ್ತು ಆಪ್ತ ದೇಶಗಳೊಂದಿಗೆ ಹೊಂದಿರುವ ಒಗ್ಗಟ್ಟನ್ನು ತಿಳಿಸಲು ಭಾರತೀಯ ನೌಕಾಪಡೆಯ ಹಡಗುಗಳನ್ನು ನಿಯೋಜಿಸಲಾಗುತ್ತಿದೆ ಎಂದು ನೌಕಾಪಡೆ ಹೇಳಿದೆ. ದಕ್ಷಿಣ ಚೀನಾ ಸಮುದ್ರ ಚೀನಾ ಹಾಗೂ ಅಮೆರಿಕಕ್ಕೆ ಪ್ರಮುಖವಾಗಿದ್ದು, ಅನೇಕ ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುವ ಚೀನಾದ ಹಕ್ಕನ್ನು ಅಮೆರಿಕ ತಿರಸ್ಕರಿಸಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಭುತ್ವ ಸಾಧಿಸಲು ಮುಂದಾಗಿದೆ.
ಭಾರತದ ಹಡಗುಗಳು ಗುವಾಮ್ ಕರಾವಳಿಯಲ್ಲಿ ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾದ ಜೊತೆ ವಾರ್ಷಿಕ ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸಲಿವೆ ಎಂದು ನೌಕಾಪಡೆ ತಿಳಿಸಿದೆ. ನಾಲ್ಕು ರಾಷ್ಟ್ರಗಳು ಕ್ವಾಡ್ ಎಂಬ ಅನೌಚಾರಿಕ ಗುಂಪು ರಚಿಸಿದ್ದು, ಚೀನಾ ಎದುರಿಸಲು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಡಳಿತ ಇಂತಹ ಸಮರಾಭ್ಯಾಸಗಳನ್ನು ಉತ್ತೇಜಿಸುತ್ತಿದೆ.
ಈ ಸಾಗರ ಉಪಕ್ರಮಗಳು ಭಾರತೀಯ ನೌಕಾಪಡೆ ಮತ್ತು ಆಪ್ತ ದೇಶಗಳ ನಡುವಿನ ಸಮನ್ವಯತೆಯನ್ನು ಹೆಚ್ಚಿಸುತ್ತದೆ ಎಂದು ಭಾರತೀಯ ನೌಕಾಪಡೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಮೆರಿಕ ಜೊತೆಗೂಡಿ ಚೀನಾದ ಆಕ್ರಮಣಶಾಹಿಯನ್ನು ತಡೆಯಲು ಭಾರತ ಮುಂದಾಗಿರುವುದು ಸ್ಪಷ್ಟವಾಗಿದೆ.