ಬ್ಲ್ಯಾಕ್ ಫಂಗಸ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ ನಗರದಲ್ಲಿ ಶುರುವಾಯ್ತು ಮತ್ತೊಂದು ಸಮಸ್ಯೆ

ಕಪ್ಪು ಶಿಲೀಂದ್ರ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ನಡುವೆಯೇ ಔಷಧದ ಕೊರತೆಯಿಂದ ಕಂಗೆಟ್ಟಿರುವ ಬೆಂಗಳೂರಿನ ವೈದ್ಯಲೋಕಕ್ಕೆ ಮತ್ತೊಂದು ಸವಾಲು ಎದುರಾಗಿದೆ. ನಗರದ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಹಾಸಿಗೆಗಳ ಅಭಾವ ಉಂಟಾಗಿದೆ.

ಬ್ಲ್ಯಾಕ್ ಫಂಗಸ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ ನಗರದಲ್ಲಿ ಶುರುವಾಯ್ತು ಮತ್ತೊಂದು ಸಮಸ್ಯೆ
Linkup
ಬೆಂಗಳೂರು: ದೇಶದ ಅನೇಕ ಕಡೆ ಕಪ್ಪು ಶಿಲೀಂದ್ರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ರಾಜ್ಯದಲ್ಲಿಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಥವಾ ಮ್ಯುಕೊರ್ಮಿಕೊಸಿಸ್ ರೋಗಿಗಳ ಚಿಕಿತ್ಸೆಗೆ ಅಗತ್ಯವಾಗಿರುವ ಲೈಪೊಸೊಮಲ್ ಅಂಫೊಟೆರಿಸಿನ್ ಬಿ ಔಷಧದ ಕೊರತೆ ಉಂಟಾಗಿರುವ ಸಂಕಷ್ಟದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಕಪ್ಪು ಶಿಲೀಂದ್ರ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಹಾಸಿಗೆ ಕೊರತೆ ಎದುರಾಗಿದೆ. ಬ್ಲ್ಯಾಗ್ ಫಂಗಸ್‌ನಂತಹ ಗಂಭೀರ ಪ್ರಕರಣಗಳಿಗಾಗಿ ಹಾಸಿಗೆಗಳನ್ನು ಮೀಸಲಿಟ್ಟಿರುವ ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ವಾರ್ಡ್‌ಗಳು ಭರ್ತಿಯಾಗಿವೆ ಎಂಬ ಉತ್ತರ ಬರುತ್ತಿದೆ. ಮಾರಕ ಕಪ್ಪು ಶಿಲೀಂದ್ರದ ಸೋಂಕಿಗೆ ತುತ್ತಾಗಿದ್ದರೂ ಅನೇಕ ರೋಗಿಗಳು ಹೊರರೋಗಿಗಳಾಗಿ ಬಂದು, ಚಿಕಿತ್ಸೆ ಸಿಗದೆ ಮರಳಿ ಹೋಗುತ್ತಿದ್ದಾರೆ. ಈ ಅಪಾಯಕಾರಿ ಸೋಂಕಿಗೆ ಕನಿಷ್ಠ ಎರಡು ವಾರಗಳ ಆರೈಕೆ ಬೇಕಾಗುತ್ತದೆ. ಮೂಗಿನ ನಾಳದ ಮೂಲಕ ಅಭಿವೃದ್ಧಿಯಾಗುವ ಈ ಆಕ್ರಮಣಕಾರಿ ಸೋಂಕು, ಕಣ್ಣಿನತ್ತ ಚಲಿಸುತ್ತದೆ. ಅದು ಮಿದುಳಿಗೆ ಹರಡಿದರೆ ಸಾವು ಬಹುತೇಕ ಖಚಿತ. ಕೋವಿಡ್-19ರಿಂದ ಚೇತರಿಸಿಕೊಂಡ ಅನೇಕ ರೋಗಿಗಳಲ್ಲಿ ಕಪ್ಪು ಶಿಲೀಂದ್ರ ಕಾಣಿಸಿಕೊಂಡಿದೆ. ಕೋವಿಡ್ ಚಿಕಿತ್ಸೆ ವೇಳೆ ಆಕ್ಸಿಜನ್ ಸಹಾಯದೊಂದಿಗಿದ್ದು, ಅಧಿಕ ಡೋಸ್ ಸ್ಟೀರಾಯ್ಡ್‌ಗಳನ್ನು ನೀಡಲಾದ ರೋಗಿಗಳ ಸ್ಥಿತಿ ಮತ್ತಷ್ಟು ಅಪಾಯಕಾರಿಯಾಗುತ್ತಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 50 ಮಂದಿಯನ್ನು ದಾಖಲಿಸಿಕೊಳ್ಳಲಾಗಿದೆ. ಹಾಸಿಗೆ ಕೊರತೆಯಿಂದಾಗಿ ಇನ್ನೂ 30ಕ್ಕೂ ಅಧಿಕ ರೋಗಿಗಳನ್ನು ಒಪಿಡಿಯಲ್ಲಿ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಮನೆಯಲ್ಲಿದ್ದವರಿಗೂ ಕಪ್ಪು ಶಿಲೀಂದ್ರ! 'ನಮ್ಮಲ್ಲಿ ಬ್ಲ್ಯಾಕ್ ಫಂಗಸ್ ಹೊಂದಿರುವವರಲ್ಲಿ 24 ವರ್ಷದ ಕ್ಯಾನ್ಸರ್ ರೋಗಿಯೊಬ್ಬರಿದ್ದಾರೆ. ಅವರಿಗೆ ಯಾವುದೇ ಕೋವಿಡ್ ಸೋಂಕು ಬಂದಿರಲಿಲ್ಲ. ಹಾಗೆಯೇ ಕೋವಿಡ್ ಬಂದಾಗ ಆಸ್ಪತ್ರೆಗೆ ದಾಖಲಾಗದೆ ಪ್ರತ್ಯೇಕವಾಗಿ ಇದ್ದು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆಯರಿಗೂ ಬ್ಲ್ಯಾಕ್ ಫಂಗಸ್ ಬಂದಿದೆ. ಅವರಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ತಿಳಿಯುತ್ತಿಲ್ಲ' ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದ್ದಾರೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ನೋಡಲ್ ಸೌಲಭ್ಯ ರೂಪಿಸಿದೆ. ಅಂತಹ ಪ್ರಕರಣಗಳಿಗಾಗಿ ಅಲ್ಲಿ ಮೀಸಲಿಟ್ಟಿರುವ ಎಲ್ಲ 35 ಹಾಸಿಗೆಗಳು ಭರ್ತಿಯಾಗಿವೆ. ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜ್‌ನಲ್ಲಿ ಕೂಡ 53 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೊಸ ದಾಖಲಾತಿಯನ್ನು ನಿಲ್ಲಿಸಲಾಗಿದೆ. ಬೆಂಗಳೂರಲ್ಲಿಯೇ 400-500 ಪ್ರಕರಣ 'ವೈದ್ಯಕೀಯ ಸಮುದಾಯದ ಸ್ನೇಹಿತರ ಜತೆ ಮಾತನಾಡಿದ ಬಳಿಕ, ಒಂದರಲ್ಲಿಯೇ 400-500 ರೋಗಿಗಳಿರುವುದು ಗೊತ್ತಾಗಿದೆ. ಇನ್ನು ಪ್ರತಿ ಜಿಲ್ಲೆಗಳಲ್ಲಿಯೂ ಕನಿಷ್ಠ ತಲಾ 25 ಪ್ರಕರಣಗಳಿವೆ. ಇದು ನಾವು ತಿಳಿದಿರುವ ಸಣ್ಣ ಪ್ರಮಾಣವಷ್ಟೇ. ಇದನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದೆ. ಹೀಗಾಗಿ ವಾಸ್ತವ ಅಂಕಿ ಅಂಶಗಳು ಶೀಘ್ರದಲ್ಲಿಯೇ ಗೊತ್ತಾಗಲಿದೆ' ಎಂದು ಮ್ಯುಕೊರ್ಮಿಕೊಸಿಸ್ ಕುರಿತಾದ ಪರಿಣತರ ಸಮಿತಿ ಸದಸ್ಯ ಡಾ. ಭುಜಂಗ ಶೆಟ್ಟಿ ತಿಳಿಸಿದ್ದಾರೆ. ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಾಧ್ಯವಿಲ್ಲ 'ಎಲ್ಲ ಮ್ಯುಕೊರ್ಮಿಕೊಸಿಸ್ ರೋಗಿಗಳೆಲ್ಲರೂ ಮದುಮೇಹಿಗಳು. ಇದು ಬಹುವಿಧೀಯ ಚಿಕಿತ್ಸೆಗೆ ಒಳಪಡಬೇಕಾದ ಸ್ಥಿತಿಯಾದ ಕಾರಣ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಬಹಳ ಕಷ್ಟ. ಇದಕ್ಕೆ ಇಎನ್‌ಟಿ ಸರ್ಜನ್‌ಗಳು, ಫಿಸಿಷಿಯನ್‌ಗಳು, ನರವೈದ್ಯರು ಮತ್ತು ಅನಸ್ತೇಷಿಯಾ ತಜ್ಞರ ನೆರವು ಕೂಡ ಅಗತ್ಯ. ನಮ್ಮ ಕೈಗಳನ್ನು ಕಟ್ಟಿಹಾಕಿದಂತಾಗಿದೆ' ಎಂದು ಅವರು ಹೇಳಿದ್ದಾರೆ.