ಎಟಿಎಂನ 75 ಲಕ್ಷ ರೂ. ದೋಚಿ ಚಾಲಕನ ನಿಗೂಢ ಕೊಲೆ ಪ್ರಕರಣ; ಎರಡು ವರ್ಷಗಳ ಹಳೆಯ ಪ್ರಕರಣ ಭೇದಿಸಿದ ಪೊಲೀಸ್‌ ತಂಡ

ಎರಡೂವರೆ ವರ್ಷಗಳಿಂದ ನಿಗೂಢವಾಗಿದ್ದ ನಗರದ ಎಟಿಎಂಗೆ ತುಂಬಬೇಕಿದ್ದ 75 ಲಕ್ಷ ರೂ. ಹಣ ಮತ್ತು ಸೆಕ್ಯುರಿಟಿ ವಾಹನ ಚಾಲಕ ನಾಪತ್ತೆ ಪ್ರಕರಣವನ್ನು ಗೋವಿಂದಪುರ ಪೊಲೀಸರು ಪತ್ತೆ ಹಚ್ಚಿ ನಾಲ್ವರು ಹಂತಕರನ್ನು ಹೆಡೆಮುರಿ ಕಟ್ಟಿದ್ದಾರೆ.

ಎಟಿಎಂನ 75 ಲಕ್ಷ ರೂ. ದೋಚಿ ಚಾಲಕನ ನಿಗೂಢ ಕೊಲೆ ಪ್ರಕರಣ; ಎರಡು ವರ್ಷಗಳ ಹಳೆಯ ಪ್ರಕರಣ ಭೇದಿಸಿದ ಪೊಲೀಸ್‌ ತಂಡ
Linkup
ಬೆಂಗಳೂರು: ಎರಡೂವರೆ ವರ್ಷಗಳಿಂದ ನಿಗೂಢವಾಗಿದ್ದ ನಗರದ ಎಟಿಎಂಗೆ ತುಂಬಬೇಕಿದ್ದ 75 ಲಕ್ಷ ರೂ. ಹಣ ಮತ್ತು ಸೆಕ್ಯುರಿಟಿ ವಾಹನ ಚಾಲಕ ನಾಪತ್ತೆ ಪ್ರಕರಣವನ್ನು ಗೋವಿಂದಪುರ ಪೊಲೀಸರು ಪತ್ತೆ ಹಚ್ಚಿ ನಾಲ್ವರು ಹಂತಕರನ್ನು ಹೆಡೆಮುರಿ ಕಟ್ಟಿದ್ದಾರೆ. ಹಣದೊಂದಿಗೆ ಪರಾರಿಯಾಗಿದ್ದ ಅಸ್ಸಾಂ ಮೂಲದ ಸೆಕ್ಯುರಿಟಿ ವಾಹನದ ಚಾಲಕ ಅಬ್ದುಲ್ ಶಹೀದ್ ನನ್ನು(19) ಕೊಲೆ ಮಾಡಿ ಸಕಲೇಶಪುರದ ಬ್ಯೂಟಿ ಸ್ಪಾಟ್‌ನಿಂದ ತಳ್ಳಿ, ಹಣ ದೋಚಿ ಏನು ಗೊತ್ತಿಲ್ಲದವರತೆ ತಮ್ಮ ಪಾಡಿಗೆ ತಾವಿದ್ದ ನಾಲ್ವರು ಹಂತಕರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಂಡ್ಯದ ಕೆ.ಆರ್ ಪೇಟೆಯ ಕುಮಾರ್ (23), ಮೈಸೂರಿನ ಕೆ.ಆರ್ ನಗರದ ಎಂ.ಬಿ ಪ್ರಸನ್ನ (31), ಮಧುಸೂದನ್ (23) ಹಾಗೂ ಆಂಧ್ರಪ್ರದೇಶದ ಯು. ಮಹೇಶ್ (22) ಬಂಧಿತ ಆರೋಪಿಗಳು. ಇವರಿಂದ 3 ದ್ವಿಚಕ್ರ ವಾಹನ, 2 ಕಾರುಗಳು, 121 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು 15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ವಿವರ ರೈಟರ್ ಸೇಫ್­ಗಾರ್ಡ್ ಕಂಪನಿಯಿಂದ 2018ರ ನ.5ರಂದು ಚಾಲಕ ಶಹೀದ್, ಗನ್ ಮ್ಯಾನ್ ಜಮೀತ್ ಸಿಂಗ್ ಮತ್ತು ನೌಕರರಾದ ಶ್ರೀ ಶೈಲ ಮತ್ತು ಹರೀಶ್ ಎಂಬುವರು ವಾಹನದಲ್ಲಿ ಎಟಿಎಂಗೆ ಹಣ ತುಂಬಲು ಹೋಗಿದ್ದರು. ರಾತ್ರಿ 7.30ರಲ್ಲಿ ನಾಗವಾರ ರಸ್ತೆ ಆ್ಯಕ್ಸಿಸ್ ಬ್ಯಾಂಕಿನ ಎಟಿಎಂಗೆ ಹಣ ತುಂಬಲು ಮೂವರು ಇಳಿದಿದ್ದಾಗ, 75 ಲಕ್ಷ ರೂ. ಹಣವಿದ್ದ ಟ್ರಂಕ್ ಮತ್ತು 2 ಬ್ಯಾಗ್ಗಳೊಂದಿಗೆ ಶಹೀದ್ ನಾಪತ್ತೆಯಾಗಿದ್ದಾನೆಂದು ಕೆ.ಜಿ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಪತ್ತೆಯಾಗದೇ ನಿಗೂಢವಾಗಿಯೇ ಉಳಿದಿತ್ತು ನೂತನವಾಗಿ ಸ್ಥಾಪನೆಯಾಗಿದ್ದ ಗೋವಿಂದಪುರ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ಮತ್ತು ತಂಡ ಪತ್ತೆಯಾಗದ ಹಳೇ ಪ್ರಕರಣಗಳ ತನಿಖೆ ಕೈಗೊಂಡಿದ್ದರು. ಈ ವೇಳೆ 75 ಲಕ್ಷ ರೂ. ಹಣ ಮತ್ತು ಚಾಲಕ ಶಹೀದ್ ಪತ್ತೆಯಾಗದಿರುವುದು ಗೊತ್ತಾಗಿದೆ. ಈ ಕುರಿತು ಸುಳಿವುಗಳ ಬಗ್ಗೆ ಕೆದಕಿದಾಗ, ಘಟನೆ ನಡೆದ ಸ್ಥಳದ ಸಮೀಪದಲ್ಲಿ ಕಾರೊಂದು ನಿಂತಿದ್ದು, ಚಾಲಕ ಶಹೀದ್ ಮತ್ತು ಕಾರಿನಲ್ಲಿದ್ದವರು ಹಣವಿದ್ದ ಟ್ರಂಕ್ ಮತ್ತು ಬ್ಯಾಗ್ಗೆ ಹಾಕಿಕೊಂಡು ಹೋಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಇದೇ ಸುಳಿವು ಆಧರಿಸಿ ಕಾರಿನಲ್ಲಿದ್ದವರು ಮತ್ತು ಕಾರಿನ ಕುರಿತು ಮಾಹಿತಿ ಕಲೆ ಹಾಕಲು ಆರಂಭಿಸಿದ್ದಾರೆ. ಕಾರಿನಲ್ಲಿದ್ದವರ ಕುರಿತು ಶಂಕೆ ಮೇರೆಗೆ ಬಾತ್ಮೀದಾರರಿಂದ ಮಾಹಿತಿ ಸಂಗ್ರಹ ಆರಂಭಿಸಲಾಗಿತ್ತು. ಈ ವೇಳೆ ಸ್ವಂತ ಕಾರ್ ಓಡಿಸಿಕೊಂಡು, ಸಂಘಟನೆಗಳ ಜತೆ ಓಡಾಡಿಕೊಂಡಿದ್ದ ಕುಮಾರ್ ಎಂಬಾತನ ಸುಳಿವು ಸಿಕ್ಕಿದೆ. ಸುಮಾರು ಒಂದು ತಿಂಗಳು ಕಾಲ ಆತನ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರು, ಬಲವಾದ ಶಂಕೆ ಮೇಲೆ ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ 75 ಲಕ್ಷ ರೂ. ಹಣ ದೋಚಿರುವುದು ಮತ್ತು ಚಾಲಕ ಕೊಲೆ ಮಾಡಿರುವ ವಿಷಯ ಬಯಲಾಗಿದೆ. ಪೊಲೀಸರಿಗೆ ಹೇಳುತ್ತಾನೆಂದು ಕೊಲೆ ಮಾಡಿದ್ದರು ಬಂಧಿತರ ಪೈಕಿ ಕುಮಾರ್ ಮತ್ತು ಪ್ರಸನ್ನ ಹಣ ಸಾಗಿಸುವ ಸೆಕ್ಯುರಿಟಿ ವಾಹನದ ಚಾಲಕರಾಗಿ ಕೆಲಸ ಮಾಡಿದ್ದು, ನಂತರ ಕೆಲಸ ಬಿಟ್ಟಿದ್ದರು. ಆದರೆ, ಸುಲಭವಾಗಿ ಹಣ ಗಳಿಸಲು ಮತ್ತಿಬ್ಬರನ್ನು ಸೇರಿಸಿಕೊಂಡು ಎಟಿಎಂ ಹಣ ದೋಚಲು ಸ್ಕೆಚ್ ಹಾಕಿದ್ದರು. ಹಣ ಸಾಗಿಸುವ ವಾಹನವನ್ನು ಫಾಲೋ ಮಾಡಿಕೊಂಡು ಹೋಗುತ್ತಿದ್ದರು. ಅಂದು ಎಟಿಎಂಗೆ ಹಣ ತುಂಬಲು ಬಂದಾಗ ಶಹೀದ್ ಒಬ್ಬನೇ ಇರುವುದನ್ನು ಗಮನಿಸಿ ಆತನಿಗೆ ಹಣದ ಅಮಿಷ ಒಡ್ಡಿ ತಮ್ಮ ಕಾರಿನಲ್ಲಿ 75 ಲಕ್ಷ ರೂ.ಗಳೊಂದಿಗೆ ಕರೆದುಕೊಂಡು ಹೋಗಿದ್ದರು. ಪೋನ್ ಬಳಸಿದರೆ ಸಿಕ್ಕಿ ಬೀಳಬಹುದು ಎಂದು ಮನೆಯಲ್ಲೇ ಪೋನ್ ಬಿಟ್ಟು ಹೋಗಿದ್ದರು. ಬ್ಯೂಟಿ ಸ್ಪಾಟ್‌ನಿಂದ ತಳ್ಳಿದ್ದರು ಬೆಂಗಳೂರಿನಿಂದ ಆರೋಪಿಗಳು ಮಂಗಳೂರು ಕಡೆ ತೆರಳಿದ್ದರು. ಮಾರ್ಗ ಮಧ್ಯದಲ್ಲಿ ನನಗೆ ಭಯವಾಗುತ್ತಿದೆ ಬಿಟ್ಟು ಬಿಡಿ ಹೋಗುತ್ತೇನೆ ಎಂದು ಚಾಲಕ ಶಾಹೀದ್­ ಕೇಳಿದ್ದಾನೆ. ಈತನನ್ನು ಬಿಟ್ಟರೆ ಪೊಲೀಸರಿಗೆ ಮಾಹಿತಿ ನೀಡುತ್ತಾನೆಂದು ಸಕಲೇಶಪುರದ ಬ್ಯೂಟಿ ಸ್ಪಾಟ್ ಬಳಿ ಕೊಲೆ ಮಾಡಿ ಶವವನ್ನು ಸ್ಟಾಪ್‌ನಿಂದ ಸುಮಾರು 35 ಅಡಿ ಆಳಕ್ಕೆ ಶವ ತಳ್ಳಿದ್ದರು. 21 ದಿನಗಳ ಬಳಿಕ ಶವ ಪತ್ತೆ ಬಿಸಾಡಿದ್ದ ಶವ ಕಣಿವೆಗೆ ಬಿದ್ದಿರಲಿಲ್ಲ. ಬದಲಿಗೆ ಮರಕ್ಕೆ ನೇತು ಬಿದ್ದಿತ್ತು. ಸುಮಾರು 21 ದಿನಗಳ ಬಳಿಕ ದುರ್ವಾಸನೆ ಮತ್ತು ಶವ ಕಣ್ಣಿಗೆ ಬಿದ್ದ ಕಾರಣ ನಾಗರಿಕರು ನೀಡಿದ ಮಾಹಿತಿ ಆಧರಿಸಿ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಕೇಸ್ ದಾಖಲಾಗಿತ್ತು. ಶವ ಕೊಳೆತಿದ್ದ ಕಾರಣ ಯಾವುದೇ ಗುರುತು ಪತ್ತೆಯಾಗಲಿಲ್ಲ. ಶಹೀದ್ ಬಳಸುತ್ತಿದ್ದ ಮೊಬೈಲ್ ಫೋನ್ ಅನ್ನು ಆರೋಪಿಗಳು ರಸ್ತೆಯಲ್ಲೇ ಬಿಸಾಡಿದ್ದರು. ಮೊಬೈಲ್ ಸಿಕ್ಕರೂ ಆರೋಪಿಗಳು ಸಿಗಲಿಲ್ಲ ರಸ್ತೆಯಲ್ಲಿ ಬಿದ್ದಿದ್ದ ಮೊಬೈಲ್ ಫೋನ್ ಅನ್ನು ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದ. ಕೆಲ ದಿನಗಳ ನಂತರ ಬಳಕೆ ಮಾಡಿದ ಕಾರಣ ಫೋನ್ ಐಎಂಇಐ ಆಧರಿಸಿ ಕೆ.ಜಿ ಹಳ್ಳಿ ಪೊಲೀಸರು ಆತನನ್ನು ಪತ್ತೆ ಮಾಡಿದ್ದರು. ಆದರೆ, ನನಗೆ ಆ ಮೊಬೈಲ್ ಫೋನ್ ದಾರಿಯಲ್ಲಿ ಸಿಕ್ಕಿದೆ. ಮೊಬೈಲ್ ಮಾಲೀಕನ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾನೆ. ಅಲ್ಲಿಗೆ ಪ್ರಕರಣ ಡೆಡ್ ಎಂಡ್ ತಲುಪಿತ್ತು. ಪಾಲಕರು ದೂರು ನೀಡಿಲ್ಲ ಅಸ್ಸಾಂನಲ್ಲಿರುವ ಚಾಲಕ ಶಹೀದ್ ಪಾಲಕರು, ತಮ್ಮ ಮಗ ನಾಪತ್ತೆ ಕುರಿತು ದೂರು ನೀಡಿರಲಿಲ್ಲ. ಎರಡೂವರೆ ವರ್ಷಗಳಾದರೂ ತಲೆಕೆಡಿಸಿಕೊಂಡಿರಲಿಲ್ಲ. ಕೊಲೆಯಾಗಿದ್ದಾನೆ ಎಂಬ ಮಾಹಿತಿ ತಿಳಿಸಿದ್ದೇವೆ. ಬಸ್ ಚಾರ್ಜ್ ಕೊಡುತ್ತೇವೆ ಬಂದು ಹೇಳಿಕೆ ನೀಡಿ ಎಂದರು ಪಾಲಕರು ಬರಲು ಸಿದ್ದರಿಲ್ಲ. ಅವರ ಮನವೊಲಿಸುತ್ತಿದ್ದೇವೆ ಎಂದು ಗೋವಿಂದಪುರ ಇನ್ಸ್­ಪೆಕ್ಟರ್ ಪ್ರಕಾಶ್ ತಿಳಿಸಿದರು.