ಬ್ಲ್ಯಾಕ್‌ ಫಂಗಸ್‌ ಔ‍ಷಧಗಳ ಮೇಲಿನ ತೆರಿಗೆ ರದ್ದು, ಲಸಿಕೆ ಮೇಲೆ 5% ಜಿಎಸ್‌ಟಿ ಮುಂದುವರಿಕೆ

ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಅಗತ್ಯವಾದ ಟೋಸಿಲಿಜುಮಾಬ್‌ ಮತ್ತು ಆಂಪೋಟೆರಿಸಿನ್‌-ಬಿ ಔಷಧದ ಮೇಲಿನ ತೆರಿಗೆಯನ್ನು ಸಂಪೂರ್ಣ ತೆಗೆದುಹಾಕಲಾಗಿದ್ದು, ಹಲವು ಔಷಧಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ.

ಬ್ಲ್ಯಾಕ್‌ ಫಂಗಸ್‌ ಔ‍ಷಧಗಳ ಮೇಲಿನ ತೆರಿಗೆ ರದ್ದು, ಲಸಿಕೆ ಮೇಲೆ 5% ಜಿಎಸ್‌ಟಿ ಮುಂದುವರಿಕೆ
Linkup
ಹೊಸದಿಲ್ಲಿ: ಕೊರೊನಾ ಹಾಗೂ ರೋಗದ ಚಿಕಿತ್ಸೆಗೆ ಅಗತ್ಯವಾದ ಕೆಲವು ಔಷಧಗಳು, ಆಸ್ಪತ್ರೆ ಸಲಕರಣೆಗಳು ಮತ್ತು ಇತರ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ () ಯನ್ನು ಕಡಿತಗೊಳಿಸಲಾಗಿದೆ. ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ನಡೆದ 44ನೇ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಚಿವರ ತಂಡದ ಶಿಫಾರಸ್ಸಿನ ಮೇರೆಗೆ ತೆರಿಗೆ ಕಡಿತ ನಿರ್ಧಾರಕ್ಕೆ ಬರಲಾಗಿದೆ. ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಅಗತ್ಯವಾದ ಟೋಸಿಲಿಜುಮಾಬ್‌ ಮತ್ತು ಆಂಪೋಟೆರಿಸಿನ್‌-ಬಿ ಔಷಧದ ಮೇಲಿನ ತೆರಿಗೆಯನ್ನು ಸಂಪೂರ್ಣ ತೆಗೆದುಹಾಕಲಾಗಿದೆ. ಇನ್ನು ಹಲವು ವಸ್ತುಗಳ ಮತ್ತು ಔಷಧಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಈ ತೆರಿಗೆ ಕಡಿತ ಸೆಪ್ಟೆಂಬರ್‌ 30ರವರೆಗೆ ಜಾರಿಯಲ್ಲಿ ಇರಲಿದೆ. ಆದರೆ ಕೊರೊನಾ ಲಸಿಕೆಯ ಮೇಲೆ ಮಾತ್ರ ಶೇ. 5ರಷ್ಟು ತೆರಿಗೆ ಮುಂದುವರಿಯಲಿದೆ. ತೆರಿಗೆ ಕಡಿತ ರೆಮ್‌ಡೆಸಿವಿರ್‌, ವೈದ್ಯಕೀಯ ಆಮ್ಲಜನಕ, ವೆಂಟಿಲೇಟರ್‌, ವೆಂಟಿಲೇಟರ್‌ ಮಾಸ್ಕ್‌, ಆಕ್ಸಿಜನ್‌ ಕಾನ್ಸಂಟ್ರೇಟರ್‌, ಕೋವಿಡ್‌ ಟೆಸ್ಟಿಂಗ್‌ ಕಿಟ್‌, ಪಲ್ಸ್‌ ಆಕ್ಸಿಮೀಟರ್‌ ಮೊದಲಾದ ವಸ್ತುಗಳ ಮೇಲಿನ ತೆರಿಗೆಯನ್ನು ಶೇ. 12 ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಹ್ಯಾಂಡ್‌ ಸ್ಯಾನಿಟೈಸರ್‌, ಉಷ್ಣಾಂಶ ಪರೀಕ್ಷಿಸುವ ಉಪಕರಣಗಳು, ಅಂತ್ಯಸಂಸ್ಕಾರಕ್ಕೆ ಉಪಯೋಗಿಸುವ ಗ್ಯಾಸ್‌ ಮತ್ತು ಎಲೆಕ್ಟಿಕ್‌ ಫರ್ನೇಸ್‌ಗಳ ಮೇಲಿನ ತೆರಿಗೆಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಕೆ ಮಾಡಲಾಗಿದೆ. ಆಂಬ್ಯುಲೆನ್ಸ್‌ಗಳ ಮೇಲಿನ ತೆರಿಗೆಯನ್ನು ಶೇ. 28 ರಿಂದ ಶೇ. 12ಕ್ಕೆ ಇಳಿಕೆ ಮಾಡಲಾಗಿದೆ. ಆದರೆ ಆರ್‌ಟಿ-ಪಿಸಿಆರ್‌ ಯಂತ್ರಗಳು, ಆರ್‌ಎನ್‌ಎ ಎಕ್ಸ್‌ಟ್ರಾಕ್ಷನ್‌ ಯಂತ್ರಗಳ ಮೇಲಿನ ಜಿಎಸ್‌ಟಿಯಲ್ಲಿ ಯಾವುದೇ ಇಳಿಕೆ ಮಾಡಿಲ್ಲ. ಕೊರೊನಾ ಬಿಕ್ಕಟ್ಟಿನ ನಡುವೆಯೂ ಇವುಗಳಿಗೆ ಶೇ. 18ರಷ್ಟು ತೆರಿಗೆ ಅನ್ವಯವಾಗುತ್ತಿದೆ. ಜಿನೋಮ್‌ ಸೀಕ್ವೆನ್ಸಿಂಗ್‌ ಯಂತ್ರಗಳ ಮೇಲೆ ಶೇ. 12ರಷ್ಟು ತೆರಿಗೆ ಜಾರಿಯಲ್ಲಿದೆ. ಜತೆಗೆ ಕೊರೊನಾ ಟೆಸ್ಟಿಂಗ್‌ ಕಿಟ್‌ಗಳಿಗೆ ಬೇಕಾದ ಕಚ್ಚಾ ಪದಾರ್ಥಗಳ ಮೇಲಿನ ತೆರಿಗೆಯನ್ನೂ ಇಳಿಕೆ ಮಾಡಿಲ್ಲ.