ಬಿಬಿಎಂಪಿ ಚುನಾವಣೆ ಸಂಬಂಧ ರಾಜ್ಯ ಸರಕಾರದಿಂದ ಕರಡು ನಿಯಮಾವಳಿ ಪ್ರಕಟ

ಕರ್ನಾಟಕ ಸರಕಾರವು ಬಿಬಿಎಂಪಿ ಚುನಾವಣೆ ಸಂಬಂಧ ಕರಡು ನಿಯಮಾವಳಿಗಳನ್ನು ಸಿದ್ಧಪಡಿಸಿ, ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಬಿಬಿಎಂಪಿ ಕಾಯಿದೆ - 2020ರ ಅನ್ವಯ ಚುನಾವಣೆ ನಡೆಸಲು ಬಿಬಿಎಂಪಿ (ಚುನಾವಣೆ) ನಿಯಮಗಳು - 2021 ಅನ್ನು ರೂಪಿಸಲಾಗಿದೆ.

ಬಿಬಿಎಂಪಿ ಚುನಾವಣೆ ಸಂಬಂಧ ರಾಜ್ಯ ಸರಕಾರದಿಂದ ಕರಡು ನಿಯಮಾವಳಿ ಪ್ರಕಟ
Linkup
ಬೆಂಗಳೂರು: ರಾಜ್ಯ ಸರಕಾರವು ಬೃಹತ್‌ ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಂಬಂಧ ಕರಡು ನಿಯಮಾವಳಿಗಳನ್ನು ಸಿದ್ಧಪಡಿಸಿ, ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಕಾಯಿದೆ - 2020ರ ಅನ್ವಯ ಚುನಾವಣೆ ನಡೆಸಲು ಬಿಬಿಎಂಪಿ (ಚುನಾವಣೆ) ನಿಯಮಗಳು - 2021 ಅನ್ನು ರೂಪಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ನಿಯಮಗಳಿಗೆ ಸಂಬಂಧಪಟ್ಟ ಅಂತಿಮ ಅಧಿಸೂಚನೆಯನ್ನು 30 ದಿನಗಳ ಬಳಿಕ ಪ್ರಕಟಿಸಲಾಗುತ್ತದೆ. ಅಲ್ಲಿಯವರೆಗೆ ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಪಾಲಿಕೆ ಚುನಾವಣೆ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿದ್ದು, ಡಿಸೆಂಬರ್‌ 6ರಂದು ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಗಳಿವೆ. ಹಾಗಾಗಿಯೇ, ರಾಜ್ಯ ಸರಕಾರವು ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಪಾಲಿಕೆಯ ಚುನಾವಣಾ ಕರಡು ನಿಯಮಾವಳಿಯಲ್ಲಿ ಚುನಾವಣಾ ವಿಧಾನ, ಮತಗಟ್ಟೆಗಳ ಸ್ಥಾಪನೆ, ಮತಗಟ್ಟೆ ಅಧಿಕಾರಿಗಳ ನೇಮಕ, ಕಾರ್ಯ ವಿಧಾನ, ಮತದಾರರ ಪಟ್ಟಿ ಸಿದ್ಧಪಡಿಸುವುದು, ಅಭ್ಯರ್ಥಿಗಳ ನಾಮಪತ್ರ ಸ್ವೀಕಾರ, ಚಿಹ್ನೆ ಒದಗಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಲಾಗಿದೆ. ಈ ನಿಯಮಾವಳಿಯಂತೆಯೇ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತರು ಕ್ರಮ ವಹಿಸಬೇಕೆಂದು ಸೂಚಿಸಲಾಗಿದೆ. ಬಿಬಿಎಂಪಿಯ ವಾರ್ಡ್‌ಗಳ ಮರು ವಿಂಗಡಣಾ ಸಮಿತಿಯ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಿ ರಾಜ್ಯ ಸರಕಾರವು ಅಕ್ಟೋಬರ್‌ 30ರಂದು ಆದೇಶ ಹೊರಡಿಸಿದೆ. ಜುಲೈ 28ರಿಂದ ಜಾರಿಗೆ ಬರುವಂತೆ ಸಮಿತಿ ಅವಧಿಯನ್ನು 6 ತಿಂಗಳು ಮುಂದುವರಿಸಿರುವ ಹಿನ್ನೆಲೆಯಲ್ಲಿ 2022ರ ಜನವರಿ ನಂತರವೇ ಪಾಲಿಕೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಬಿಬಿಎಂಪಿ ಕಾಯಿದೆ - 2020ರ ಅನ್ವಯ ಪಾಲಿಕೆ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಜನವರಿ 29ರಂದು ವಾರ್ಡ್‌ ಮರುವಿಂಗಡಣಾ ಸಮಿತಿ ರಚಿಸಿ, ವರದಿ ಸಲ್ಲಿಸಲು 6 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಸಮಿತಿಯು ಬಿಬಿಎಂಪಿ ಗಡಿಯಿಂದ ಒಂದು ಕಿ.ಮೀ ಆಚೆಗಿರುವ ಪ್ರದೇಶಗಳನ್ನು ಪಾಲಿಕೆಗೆ ಸೇರಿಸಿ, 243 ವಾರ್ಡ್‌ಗಳನ್ನು ರಚಿಸಿ ವರದಿ ಸಲ್ಲಿಸಬೇಕಿತ್ತು. ಆದರೆ, ಸಮಿತಿಗೆ ನೀಡಿದ್ದ ಗಡುವು ಜುಲೈ 28ಕ್ಕೆ ಮುಗಿದಿದ್ದು, ಈವರೆಗೆ ವರದಿ ಸಲ್ಲಿಕೆ ಮಾಡಿಲ್ಲ. ಆದ ಕಾರಣ, ಸಮಿತಿಯ ಅವಧಿಯನ್ನು ವಿಸ್ತರಿಸಲಾಗಿದೆ. ಸಮಿತಿಗೆ ವರದಿ ಸಲ್ಲಿಸಲು ಇನ್ನು ಮೂರು ತಿಂಗಳಷ್ಟೇ ಸಮಯಾವಕಾಶವಿದೆ. ಈವರೆಗೆ ಸಮಿತಿಯು ಎರಡು ಬಾರಿಯಷ್ಟೇ ಸಭೆ ಸೇರಿ ಯಾವೆಲ್ಲಾ ಪ್ರದೇಶಗಳನ್ನು ಪಾಲಿಕೆಗೆ ಸೇರಿಸಿಕೊಂಡು 243 ವಾರ್ಡ್‌ಗಳನ್ನು ವಿಂಗಡಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಿದೆ. ವಾರ್ಡ್‌ ಮರು ವಿಂಗಡಣಾ ಸಮಿತಿಯು 2022ರ ಜನವರಿ 28ರೊಳಗೆ ಅಂತಿಮ ವರದಿ ಸಲ್ಲಿಸಿ, ಚುನಾವಣೆಗೆ ಸಜ್ಜಾಗಲಿದೆ. ಅಂದುಕೊಂಡಂತೆ ನಡೆದರೆ 2022ರ ಮಾರ್ಚ್ ತಿಂಗಳಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರವಧಿ ಅಂತ್ಯಗೊಂಡು 13 ತಿಂಗಳು ಕಳೆದಿವೆ.