ಬಿಬಿಎಂಪಿ ಚುನಾವಣೆ ಕುರಿತ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ಬಿಬಿಎಂಪಿ ಚುನಾಯಿತ ಕೌನ್ಸಿಲ್‌ನ ಅವಧಿಯು 2020ರ ಸೆಪ್ಟೆಂಬರ್‌ನಲ್ಲಿಯೇ ಮುಕ್ತಾಯವಾಗಿದ್ದು, ಸುಪ್ರೀಂ ಕೋರ್ಟ್‌ ತಡೆಯಾಜ್ಞೆಯಿಂದಾಗಿ ಚುನಾವಣೆ ನಡೆದಿಲ್ಲ ಎಂಬ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿದೆ.

ಬಿಬಿಎಂಪಿ ಚುನಾವಣೆ ಕುರಿತ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ
Linkup
ಹೊಸದಿಲ್ಲಿ: ಬೃಹತ್‌ ಮಹಾನಗರ ಪಾಲಿಕೆ ()ಗೆ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಗುರುವಾರ ಒಪ್ಪಿಗೆ ಸೂಚಿಸಿದೆ. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ, "ಬಿಬಿಎಂಪಿ ಚುನಾಯಿತ ಕೌನ್ಸಿಲ್‌ನ ಅವಧಿಯು 2020ರ ಸೆಪ್ಟೆಂಬರ್‌ನಲ್ಲಿಯೇ ಮುಕ್ತಾಯವಾಗಿದೆ. ಆದರೆ ತಡೆಯಾಜ್ಞೆಯಿಂದಾಗಿ ಚುನಾವಣೆ ನಡೆದಿಲ್ಲ," ಎಂದು ತಿಳಿಸಿದರು. "ದೇಶದಲ್ಲಿ ಹಲವು ಚುನಾವಣೆಗಳು ನಡೆದಿವೆ. ನಿಮ್ಮ ಅರ್ಜಿಯನ್ನು ನಾವು ಪರಿಗಣಿಸುತ್ತೇವೆ," ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಹಾಗೂ ಹಿಮಾ ಕೊಹ್ಲಿಅವರಿದ್ದ ಪೀಠವು ತಿಳಿಸಿತು. ಈ ಹಿಂದೆ ಬಿಬಿಎಂಪಿಯ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನೀಡಿದ ಆದೇಶದ ವಿರುದ್ಧ ಕರ್ನಾಟಕ ಸರಕಾರ ಸಹ ಮೇಲ್ಮನವಿ ಸಲ್ಲಿಸಿ ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿತ್ತು. ಕರ್ನಾಟಕ ನಗರ ಪಾಲಿಕೆಯ ಮೂರನೇ ತಿದ್ದುಪಡಿ ಕಾಯಿದೆ (2020) ಅನುಸಾರ 243 ವಾರ್ಡ್‌ಗಳಿಗೆ ಬದಲಾಗಿ 2020ರ ಸೆ.23ರಂದು ಹೊರಡಿಸಿರುವ ಅಧಿಸೂಚನೆಯಂತೆ 198 ವಾರ್ಡ್‌ಗಳಿಗೆ ಆರು ವಾರಗಳ ಒಳಗಾಗಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ 2020ರ ಡಿಸೆಂಬರ್‌ 4ರಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ನಂತರ ರಾಜ್ಯ ವಿಧಾನಸಭೆಯು ಹೈಕೋರ್ಟ್‌ ಆದೇಶವನ್ನು ರದ್ದುಪಡಿಸಿ 243 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು ಎಂಬ ನಿರ್ಣಯ ಅಂಗೀಕರಿಸಿತ್ತು. ಅಲ್ಲದೇ ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ಹಿನ್ನೆಲೆಯಲ್ಲಿ ಅಂದಿನ ಸಿಜೆಐ ಎಸ್‌.ಎ. ಬೊಬ್ಡೆ ನೇತೃತ್ವದ ಪೀಠವು ಚುನಾವಣೆಗೆ ತಡೆ ನೀಡಿತ್ತು.