ಅಮಿತ್‌ ಶಾ ಭೇಟಿಯಾದ ಅಮರೀಂದರ್‌ ಸಿಂಗ್‌, ಬಿಜೆಪಿಯತ್ತ ಕ್ಯಾಪ್ಟನ್‌?

ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ದಿಲ್ಲಿಯ ಅವರ ನಿವಾಸದಲ್ಲಿ ಭೇಟಿಯಾಗಿದ್ದು, ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ.

ಅಮಿತ್‌ ಶಾ ಭೇಟಿಯಾದ ಅಮರೀಂದರ್‌ ಸಿಂಗ್‌, ಬಿಜೆಪಿಯತ್ತ ಕ್ಯಾಪ್ಟನ್‌?
Linkup
ಹೊಸದಿಲ್ಲಿ: ‘ಅವಮಾನ ಸಹಿಸಲು ಸಾಧ್ಯವಿಲ್ಲ’ ಎಂದು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೇಂದ್ರ ಗೃಹ ಸಚಿವ ಅವರನ್ನು ಬುಧವಾರ ದಿಲ್ಲಿಯ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಅಮರೀಂದರ್‌ ಸಿಂಗ್‌ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ. ಆದರೆ ಬಿಜೆಪಿ ಸೇರುವುದರ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ಅಮರೀಂದರ್‌ ಸಿಂಗ್‌ ನಿರಾಕರಿಸಿದ್ದಾರೆ. ರಾಜೀನಾಮೆ ನೀಡಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಅವರು, 'ತಮ್ಮ ಆಯ್ಕೆಗಳು ಮುಕ್ತವಾಗಿವೆ' ಎಂದಿದ್ದರು. ತಮ್ಮ ಬೆಂಬಲಿಗರ ಜತೆ ಸಮಾಲೋಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಈ ಮೂಲಕ ಪಕ್ಷ ಬಿಡುವ ಸಣ್ಣ ಸೂಚನೆಯನ್ನು ಅಂದೇ ನೀಡಿದ್ದರು. ಆದರೆ ದಿಲ್ಲಿಯ ಈ ಮಹತ್ವದ ಭೇಟಿಯನ್ನು ಅಮರೀಂದರ್‌ ಸಿಂಗ್‌ ಅವರ ತಂಡ ಮಾತ್ರ, 'ಸಾಮಾನ್ಯ ಭೇಟಿ' ಎಂದು ಹೇಳಿ ತಣ್ಣಗಾಗಿಸಿದೆ. ಮಂಗಳವಾರ ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅಮರೀಂದರ್‌ ಸಿಂಗ್‌ ಅವರ ಮಾಧ್ಯಮ ಸಲಹೆಗಾರ ರವೀನ್‌ ಥುಕ್ರಾಲ್‌, 'ಅಮರೀಂದರ್‌ ಸಿಂಗ್‌ ದಿಲ್ಲಿ ಭೇಟಿ ಬಗ್ಗೆ ಅನಗತ್ಯ ಊಹಪೋಹಗಳು ಹಬ್ಬಿವೆ' ಎಂದು ಹೇಳಿದ್ದರು. “ಅವರು ಖಾಸಗಿ ಭೇಟಿಯಲ್ಲಿದ್ದಾರೆ. ಭೇಟಿ ವೇಳೆ ಅವರು ತಮ್ಮ ಗೆಳೆಯರನ್ನು ಭೇಟಿಯಾಗಲಿದ್ದಾರೆ ಮತ್ತು ಕಪುರ್ತಲಾ ಹೌಸ್‌ (ರಾಷ್ಟ್ರ ರಾಜಧಾನಿಯಲ್ಲಿರುವ ಪಂಜಾಬ್‌ ಮುಖ್ಯಮಂತ್ರಿಗಳ ನಿವಾಸ)ನ್ನು ಖಾಲಿ ಮಾಡಲಿದ್ದಾರೆ. ಅನಗತ್ಯ ಊಹಾಪೋಹಗಳ ಅವಶ್ಯಕತೆಯಿಲ್ಲ,” ಎಂದು ಅವರು ತಿಳಿಸಿದ್ದರು. ನವಜೋತ್‌ ಸಿಂಗ್‌ ಸಿಧು ಜತೆಗಿನ ಸುದೀರ್ಘ ಮುಸುಕಿನ ಗುದ್ದಾಟದ ಬಳಿಕ ಈ ತಿಂಗಳ ಆರಂಭದಲ್ಲಿ ಅಮರೀಂದರ್‌ ಸಿಂಗ್‌ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರು. ಅಮರೀಂದರ್‌ ಸಿಂಗ್‌ ಅವರನ್ನು ಪಂಜಾಬ್‌ ಕಾಂಗ್ರೆಸ್‌ನ ಪ್ರಭಾವಿ ಮಾಸ್‌ ಲೀಡರ್‌ ಎಂದೇ ಪರಿಗಣಿಸಲಾಗಿದ್ದು, 2017ರಲ್ಲಿ ಎಎಪಿಯ ಪ್ರಬಲ ಸ್ಪರ್ಧೆಯ ನಡುವೆಯೂ ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದಿದ್ದರು. ಇದೀಗ ಅವರು ವಿಧಾನಸಭೆ ಚುನಾವಣೆಗೆ ನಾಲ್ಕೇ ತಿಂಗಳಿರುವಾಗ ಕಾಂಗ್ರೆಸ್‌ ತೊರೆಯುವ ಹಾದಿಯಲ್ಲಿದ್ದಾರೆ. ಅತ್ತ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ ಗೆದ್ದು ಬೀಗಿದ್ದ ನವಜೋತ್‌ ಸಿಂಗ್‌ ಸಿಧು ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ನಾಯಕರನ್ನು ಅಚ್ಚರಿಗೆ ತಳ್ಳಿದ್ದಾರೆ. ಒಟ್ಟಿನಲ್ಲಿ ಈಗ ಬಿಕ್ಕಟ್ಟಿನ ಬೀಡಾಗಿದೆ. ಕೇಂದ್ರ ಕೃಷಿ ಸಚಿವರಾಗಲಿದ್ದಾರೆಯೇ ಕ್ಯಾಪ್ಟನ್‌? ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ದಿಲ್ಲಿಗೆ ಭೇಟಿ ನೀಡಿರುವ ಅಮರೀಂದರ್‌ ಸಿಂಗ್‌ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೃಷಿ ಕಾಯಿದೆಗಳ ವಿರುದ್ಧ ಪಂಜಾಬ್‌ ರೈತರು ನಡೆಸುತ್ತಿರುವ ಹೋರಾಟವನ್ನು ಕೊನೆಗೊಳಿಸುವ ತಂತ್ರವಾಗಿ ಕ್ಯಾ. ಅಮರೀಂದರ್‌ ಸಿಂಗ್‌ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು, ಕೃಷಿ ಖಾತೆ ನೀಡುವ ನಿಟ್ಟಿನಲ್ಲಿ ಬಿಜೆಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.