ನಾನು ಇಂಗ್ಲಿಷ್ ಕಲಿತಿದ್ದು 8ನೇ ತರಗತಿಯಲ್ಲಿ: ಸಿಜೆಐ ಎನ್‌ವಿ ರಮಣ

ನಾನು ಶಾಲಾ ದಿನಗಳಲ್ಲಿ ಓದಿದ್ದು ತೆಲುಗು ಮಾಧ್ಯಮದಲ್ಲಿ. ಇಂಗ್ಲಿಷ್ ಕಲಿತಿದ್ದು ಎಂಟನೇ ತರಗತಿಯಲ್ಲಿ. ಹೀಗಾಗಿ ನನ್ನ ಮಾತುಗಾರಿಕೆ ಅಷ್ಟೇನೂ ಉತ್ತಮವಾಗಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದ್ದಾರೆ.

ನಾನು ಇಂಗ್ಲಿಷ್ ಕಲಿತಿದ್ದು 8ನೇ ತರಗತಿಯಲ್ಲಿ: ಸಿಜೆಐ ಎನ್‌ವಿ ರಮಣ
Linkup
ಹೊಸದಿಲ್ಲಿ: ತಾವು ಉತ್ತಮ ಮಾತುಗಾರನಲ್ಲ, ಇಂಗ್ಲಿಷ್ ಕಲಿತಿದ್ದು ಎಂಟನೇ ತರಗತಿಯಲ್ಲಿ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಅಪಾಯದ ಕುರಿತಾದ ಅರ್ಜಿ ವಿಚಾರಣೆ ವೇಳೆ ಶನಿವಾರ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ಅವರ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯೆಯಾಗಿ ಸಿಜೆಐ ಈ ಹೇಳಿಕೆ ನೀಡಿದ್ದಾರೆ. ದಿಲ್ಲಿಯಲ್ಲಿನ ವಾಯು ಮಾಲಿನ್ಯವು ಪಂಜಾಬ್ ಭಾಗದಲ್ಲಿನ ರೈತರು ಕೃಷಿ ತ್ಯಾಜ್ಯಗಳನ್ನು ಸುಡುತ್ತಿರುವುದರಿಂದ ಉಂಟಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಸುಪ್ರೀಂಕೋರ್ಟ್ ಸಿಜೆಐ ಎನ್‌ವಿ ರಮಣ, ರೈತರು ಕೂಳೆಗಳನ್ನು ಸುಡುವುದರಿಂದಲೇ ಇಷ್ಟು ವಾಯು ಮಾಲಿನ್ಯ ಆಗುತ್ತಿದೆಯೇ? ದಿಲ್ಲಿ ಮಾಲಿನ್ಯಕ್ಕೆ ಕೂಳೆ ಸುಡುವುದು ಕೇವಲ ಅಲ್ಪ ಪ್ರಮಾಣದ ಕಾರಣವಷ್ಟೇ. ಅದಕ್ಕೆ ಇತರೆ ಕಾರಣಗಳು ಇವೆ ಎಂದು ಹೇಳಿದ್ದರು. ಇದಕ್ಕೆ ಸ್ಪಷ್ಟೀಕರಣ ನೀಡಿದ್ದ ಮೆಹ್ತಾ, ದಿಲ್ಲಿ ವಾಯುಮಾಲಿನ್ಯಕ್ಕೆ ರೈತರು ಮಾತ್ರವೇ ಕಾರಣ ಎಂದು ತಾವು ಹೇಳುತ್ತಿಲ್ಲ ಎಂದು ಹೇಳಿದ್ದರು. 'ದುರದೃಷ್ಟವಶಾತ್, ನಾನು ಉತ್ತಮ ಮಾತುಗಾರ ಅಲ್ಲ. ನನ್ನ ಹಿನ್ನಡೆ ಏನೆಂದರೆ ನಾನು ಇಂಗ್ಲಿಷ್ ಕಲಿತಿದ್ದು ಎಂಟನೇ ತರಗತಿಯಲ್ಲಿ. ಶಾಲಾ ದಿನಗಳಲ್ಲಿ ಓದಿದ್ದು ತೆಲುಗು ಮಾಧ್ಯಮದಲ್ಲಿ. ಪದಗಳನ್ನು ವರ್ಣಿಸಲು ನನ್ನ ಬಳಿ ಉತ್ತಮ ಇಂಗ್ಲಿಷ್ ಇಲ್ಲ. ನಾನು ಕಾನೂನು ಕಲಿತಿದ್ದು ಇಂಗ್ಲಿಷ್ ಭಾಷೆಯಲ್ಲಿ. ನನಗೆ ನಾನು ಮತ್ತು ಸಿಜೆಐ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲ. ಅದರ ಬಗ್ಗೆ ನನಗೆ ಹೆಮ್ಮೆಯಿದೆ' ಎಂದು ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ ನ್ಯಾ. ಎನ್‌ವಿ ರಮಣ ಹೇಳಿದ್ದಾರೆ. 'ವಕೀಲರಾಗಿ ನಮ್ಮ ಪ್ರತಿಕ್ರಿಯೆ ಇರುವ ಭಾಷೆಯು ತಪ್ಪು ಸಂದೇಶವನ್ನು ರವಾನಿಸಬಹುದು. ಆದರೆ ಅದು ನೈಜ ಉದ್ದೇಶವಾಗಿರುವುದಿಲ್ಲ' ಎಂದು ಸಾಲಿಸಿಟರ್ ತುಷಾರ್ ಮೆಹ್ತಾ ಹೇಳಿದರು. ತಾವೂ ಇಂಗ್ಲಿಷ್ ಅನ್ನು ಓದಿದ್ದು ಎಂಟನೇ ತರಗತಿಯಲ್ಲಿ. ಪದವಿಯವರೆಗೂ ಗುಜರಾತಿ ಮಾಧ್ಯಮದಲ್ಲಿಯೇ ಓದಿದ್ದು ಎಂದು ಮೆಹ್ತಾ ತಿಳಿಸಿದರು. 'ನಾವಿಬ್ಬರೂ ಒಂದೇ ದೋಣಿಯಲ್ಲಿ ಸಾಗುತ್ತಿದ್ದೇವೆ. ನಾನು ಕಾನೂನು ಕಲಿತಿದ್ದು ಇಂಗ್ಲಿಷ್ ಮಾಧ್ಯಮದಲ್ಲಿ' ಎಂದು ಹೇಳಿದರು. ದಿಲ್ಲಿಯ ವಾಯು ಮಾಲಿನ್ಯ ಪರಿಸ್ಥಿತಿ ಬಗ್ಗೆ ಸುಪ್ರೀಂಕೋರ್ಟ್ ಶನಿವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೂಳೆ ಸುಡುವ ಸಮಸ್ಯೆಯನ್ನು ಸಾಲಿಸಿಟರ್ ಜನರಲ್ ಪ್ರಸ್ತಾಪಿಸಿದಾಗ, 'ರೈತರು ಹೊಣೆಗಾರರು ಎಂದು ನೀವು ಬಿಂಬಿಸುತ್ತಿದ್ದೀರಿ. ಹಾಗಾದರೆ ದಿಲ್ಲಿ ಜನರ ಬಗ್ಗೆ ಏನು? ಪಟಾಕಿ ಮಾಲಿನ್ಯ, ವಾಹನಗಳ ಹೊಗೆಯನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ?' ಎಂದು ಸಿಜೆಐ ಎನ್‌ವಿ ರಮಣ ಅವರು ಪ್ರಶ್ನಿಸಿದ್ದರು.