ಬೀದಿ ವ್ಯಾಪಾರಿ ಆಪರೇಷನ್‌ಗೆ ಕೂಡಿಟ್ಟಿದ್ದ 2 ಲಕ್ಷ ರೂ. ಹಣವನ್ನು ತಿಂದು ತೇಗಿದ ಇಲಿಗಳು..!

ಇಲಿ ಕಚ್ಚಿದ ನೋಟುಗಳನ್ನು ಬ್ಯಾಂಕ್‌ನವರು ತೆಗೆದುಕೊಳ್ಳಲಿಲ್ಲ. ಹೀಗಾಗಿ, ಆರ್‌ಬಿಐಗೆ ಮನವಿ ಮಾಡಿದಾಗ 'ಹರಿದ ನೋಟು ತೆಗೆದುಕೊಳ್ಳಿ' ಎಂದು ರಿಸರ್ವ್ ಬ್ಯಾಂಕ್ ತನ್ನ ಅಧೀನ ಬ್ಯಾಂಕ್‌ಗಳಿಗೆ ಸೂಚನೆ ನೀಡಿತು. ಆದ್ರೆ, ಇಲಿ ಕಚ್ಚಿದ ನೋಟಿನ ಬಗ್ಗೆ ಪ್ರಸ್ತಾಪಿಸಲಿಲ್ಲ.

ಬೀದಿ ವ್ಯಾಪಾರಿ ಆಪರೇಷನ್‌ಗೆ ಕೂಡಿಟ್ಟಿದ್ದ 2 ಲಕ್ಷ ರೂ. ಹಣವನ್ನು ತಿಂದು ತೇಗಿದ ಇಲಿಗಳು..!
Linkup
ಹೈದರಾಬಾದ್‌ (): ತೆಲಂಗಾಣ ರಾಜ್ಯದ ಬೀದಿ ವ್ಯಾಪಾರಿಯೊಬ್ಬ ಹೊಟ್ಟೆ ನೋವಿಗೆ ಸರ್ಜರಿ ಮಾಡಿಸಲೆಂದು ಸಾಲಸೋಲ ಮಾಡಿ ತಂದು ಕಬೋರ್ಡ್‌ನಲ್ಲಿ ಕೂಡಿಟ್ಟಿದ್ದ 2 ಲಕ್ಷ ರೂ. ನಗದು ಹಣದ ನೋಟುಗಳನ್ನು ಇಲಿಗಳು ತಿಂದಿರುವ ನೋವಿನ ಘಟನೆ ಬೆಳಕಿಗೆ ಬಂದಿದೆ. ಮೆಹಬೂಬಾಬಾದ್‌ ಜಿಲ್ಲೆಯ ವೇಮುನೂರು ಗ್ರಾಮದ ರೆಡ್ಯ ನಾಯ್ಕ್, ತಳ್ಳು ಬಂಡಿಯಲ್ಲಿ ತರಕಾರಿ ಮಾರಿ ಜೀವನ ನಡೆಸುತ್ತಾರೆ. 'ಹೊಟ್ಟೆನೋವಿಗೆ ಸರ್ಜರಿ ಅನಿವಾರ್ಯ, 4 ಲಕ್ಷ ರೂ. ಆಗುತ್ತದೆ' ಎಂದು ನಾಯ್ಕ್‌ ಅವರಿಗೆ ವೈದ್ಯರು ತಿಳಿಸಿದ್ದರು. ಹೀಗಾಗಿ, ನೆಂಟರ ಬಳಿ 2 ಲಕ್ಷ ರೂ. ಸಾಲ ತಂದಿದ್ದ ನಾಯ್ಕ್, ತನ್ನ ಮನೆಯ ಕಬೋರ್ಡ್‌ನಲ್ಲಿ ಕೂಡಿಟ್ಟಿದ್ದರು. ಕೆಲ ದಿನಗಳ ಬಳಿಕ ಇನ್ನೂ ಎರಡು ಲಕ್ಷ ಹೊಂದಿಸಿಕೊಂಡು ಆಸ್ಪತ್ರೆಗೆ ಹೋಗಲು ಕಬೋರ್ಡ್‌ ತೆರೆದು ನೋಡಿದಾಗ ಹರಿದ ನೋಟುಗಳ ರಾಶಿ ಇತ್ತು..! ಈ ನೋಟುಗಳನ್ನು ನೋಡಿ ಕಂಗಾಲಾದ ನಾಯ್ಕ್, ಬ್ಯಾಂಕ್‌ಗೆ ದೌಡಾಯಿಸಿದ. ಆದ್ರೆ, ಬ್ಯಾಂಕ್‌ ಅಧಿಕಾರಿಗಳು ಕಚ್ಚಿದ ನೋಟುಗಳನ್ನು ತೆಗೆದುಕೊಳ್ಳಲಿಲ್ಲ. ಈ ಕುರಿತಂತೆ ಆರ್‌ಬಿಐಗೆ ಮನವಿ ಮಾಡಿದಾಗ 'ಹರಿದ ನೋಟು ತೆಗೆದುಕೊಳ್ಳಿ' ಎಂದು ಸೂಚನೆ ನೀಡಿತೇ ವಿನಾ ಇಲಿ ಕಚ್ಚಿದ ನನ್ನ ನೋಟಿನ ಬಗ್ಗೆ ಪ್ರಸ್ತಾಪಿಸಲಿಲ್ಲ ಎಂದು ರೆಡ್ಯ ನಾಯ್ಕ್ ನೋವು ತೋಡಿಕೊಂಡಿದ್ದಾರೆ. ಕೊನೆಗೆ ರೆಡ್ಯ ನಾಯ್ಕ್ ಅವರ ನೆರವಿಗೆ ತೆಲಂಗಾಣದ ಬುಡಕಟ್ಟು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಠೋಡ್‌ ಧಾವಿಸಿದ್ದು, ಶಸ್ತ್ರ ಚಿಕಿತ್ಸೆ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ.