![](https://vijaykarnataka.com/photo/87759116/photo-87759116.jpg)
ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಹಗರಣದ ತನಿಖೆ ಚುರುಕುಗೊಂಡಿದೆ. ಅಂತಾರಾಷ್ಟ್ರೀಯ ಹ್ಯಾಕರ್ ಅಲಿಯಾಸ್ ಶ್ರೀಕಿ ಲ್ಯಾಪ್‌ಟಾಪ್‌ನಲ್ಲಿ 76 ಲಕ್ಷ ಪ್ರೈವೆಟ್ ಕೀಗಳು, ವಿವಿಧ ಡಿಜಿಟಲ್ ವ್ಯಾಲೆಟ್‌ಗಳ ವಿಳಾಸ ಮತ್ತು ಮಾಹಿತಿ ಪತ್ತೆಯಾಗಿವೆ ಎಂಬ ಸ್ಫೋಟಕ ಮಾಹಿತಿ ವಿಧಿ ವಿಜ್ಞಾನ ವಿಶ್ಲೇಷಣಾ ವರದಿಯಲ್ಲಿ ತಿಳಿದುಬಂದಿದೆ.
ಖಾತೆಯ ಪಾಸ್‌ವರ್ಡ್‌ಗಳನ್ನು ಪ್ರೈವೆಟ್ ಕೀಗಳೆಂದು ಹೇಳಲಾಗಿದ್ದು, ಖಾತೆಯನ್ನು ತೆರಯಲು ಈ ಪ್ರೈವೆಟ್ ಕೀಗಳು ಅವಶ್ಯವಾಗಿವೆ. ಡಿಜಿಟಲ್ ಆಸ್ತಿಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ವ್ಯಾಲೆಟ್ ವಿಳಾಸ ಅಗತ್ಯವಾಗಿದೆ. ಶ್ರೀಕಿ ಬಿಟ್ ಕಾಯಿನ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಬಳಸುವ ಬಿಟ್ ಕಾಯಿನ್ ಕೋರ್ ಎಂಬ ಸಾಫ್ಟ್‌ವೇರ್ ಅನ್ನೇ ತಿರುಚಿರುವ ಬಗ್ಗೆ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ.
ಶ್ರೀಕಿ ಕ್ಲೌಡ್ ಅಕೌಂಟ್‌ನ್ನು ತಜ್ಞರು ಪರಿಶೀಲಿಸಿದಾಗ 27 ಇ-ವ್ಯಾಲೆಟ್ ಸೇರಿ, ಖಾಸಗಿ ಕೀಗಳು ಮತ್ತು ವ್ಯಾಲೆಟ್ ವಿಳಾಸಗಳು ಸೇರಿ ವಿವಿಧ ಫೈಲ್‌ಗಳು ಸಿಕ್ಕಿವೆ ಎನ್ನಲಾಗಿದೆ. ಹ್ಯಾಕಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರ ಕೋರಿಕೆಯಂತೆ ಸೈಬರ್ ತಂತ್ರಜ್ಞರು ಶ್ರೀಕಿಯ ಲ್ಯಾಪ್‌ಟಾಪ್ ಅನ್ನು ಪರಿಶೀಲನೆಗೆ ಒಳಪಡಿಸಿದ್ದರು.
ಶ್ರೀಕಿಯ ಅಮೆಜಾನ್ ವೆಬ್ ಸರ್ವೀಸಸ್ ಖಾತೆ ಸೇರಿ ಕೆಲವು ಕ್ಲೌಡ್ ಅಕೌಂಟ್‌ಗಳ ವಿಶ್ಲೇಷಣೆ ಮಾಡಲಾಗಿದೆ. ಇಂತಹ ಐದು ಪ್ರಕರಣಗಳಲ್ಲಿ 27 ಇ–ವ್ಯಾಲೆಟ್‌ಗಳು ಹಾಗೂ ಬೃಹತ್ ಸಂಖ್ಯೆಯ ಪ್ರೈವೇಟ್ ಕೀ ಮತ್ತು ವಿಳಾಸಗಳು ಪತ್ತೆಯಾಗಿದ್ದವು. ಸಾರ್ವಜನಿಕ ಇ– ವ್ಯಾಲೆಟ್ ವಿಳಾಸಗಳು, ಪ್ರೈವೇಟ್ ಕೀಗಳು ಮತ್ತು ಬಿಟ್‌ಕಾಯಿನ್ ವಹಿವಾಟಿಗೆ ಬಳಸಿದ ಹಲವು ಐಡಿಗಳನ್ನು ಪತ್ತೆಮಾಡಲಾಗಿತ್ತು ಎಂದು ವರದಿ ಹೇಳಿದೆ.
ಸೈಬರ್ ಐಡಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಆರೋಪಿಯ ಲ್ಯಾಪ್‌ಟಾಪ್ ಅನ್ನು ವಿಶ್ಲೇಷಣೆ ನಡೆಸಿತ್ತು. ಅದರಲ್ಲಿ ಬಿಟ್‌ಕಾಯಿನ್ ವಹಿವಾಟಿಗೆ ಬಳಸಿದ ಐಪಿ ವಿಳಾಸಗಳು, ವ್ಯಾಲೆಟ್ ವಿಳಾಸಗಳು ಇದ್ದವು. ಹೊಸದಾಗಿ ಸೃಷ್ಟಿಸಿದ ಖಾಸಗಿ ಕೀಗಳು ಮತ್ತು ಐಡಿಗಳೂ ಇದ್ದವು ಎಂದು ವರದಿ ತಿಳಿಸಿದೆ.
ಐದು ಐಪಿ ವಿಳಾಸಗಳಲ್ಲಿ 27 ಬಿಟ್‌ಕಾಯಿನ್ ವ್ಯಾಲೆಟ್‌ಗಳಿಗೆ ಸಂಬಂಧಿಸಿದ ಒಟ್ಟು 76,13,984 ಪ್ರೈವೇಟ್ ಕೀಗಳಿದ್ದವು. ಒಂದು ಐಪಿ ವಿಳಾಸದಲ್ಲಿ 53.37 ಲಕ್ಷ ಪ್ರೈವೇಟ್ ಕೀಗಳಿದ್ದರೆ, ಉಳಿದಂತೆ ಇತರ ಐಪಿ ವಿಳಾಸಗಳಲ್ಲಿ 10.17 ಲಕ್ಷ, 12.11 ಲಕ್ಷ, 27,218 ಮತ್ತು 19,996 ಕೀಗಳು ಕಂಡುಬಂದಿದ್ದವು. ಆತನ ಡಿಜಿಟಲ್ ವ್ಯಾಲೆಟ್‌ಗಳಿಗೆ ಸಂಬಂಧಿಸಿದ 1,15,018 ವಿಳಾಸಗಳಿದ್ದವು ಎಂಬ ಅಂಶವನ್ನು ವರದಿ ಬಹಿರಂಗಪಡಿಸಿತ್ತು.
ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಭಾರೀ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದ್ದು, ರಾಜಕೀಯ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಪ್ರಕರಣದ ತನಿಖೆಗೆ ಇಡಿ ಮತ್ತು ಇಂಟರ್‌ಪೋಲ್‌ಗೆ ಪತ್ರ ಬರೆಯಲಾಗಿದ್ದು, ಕೇಂದ್ರ ಸರ್ಕಾರ ಕೂಡ ತನಿಖೆಯ ಮೇಲುಸ್ತುವಾರಿ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ.