ಬೆಂಗಳೂರಿನಲ್ಲಿ ಬೆಂಕಿ ಅವಘಡ : ಸಿಲಿಂಡರ್‌ ಬ್ಲಾಸ್ಟ್‌ ಆಗಿಲ್ಲ, ದೇವರ ಮನೆ ದೀಪದಿಂದ ಬೆಂಕಿ?

ಅನಾಹುತ ನಡೆದ ಫ್ಲ್ಯಾಟ್‌ನಲ್ಲಿ ಎರಡು ಸಿಲಿಂಡರ್‌ ಇತ್ತು. ಒಂದು ಸಿಲಿಂಡರ್‌ ಸಂಪೂರ್ಣ ಭರ್ತಿಯಾಗಿದ್ದರೆ, ಮತ್ತೊಂದರಲ್ಲಿ ಸುಮಾರು 4 ಕೆ.ಜಿ.ಯಷ್ಟು ಎಲ್‌ಪಿಜಿ ಇತ್ತು. ಸಿಲಿಂಡರ್‌ ಬ್ಲಾಸ್ಟ್‌ ಆಗಿರುವುದು ಕಂಡು ಬಂದಿಲ್ಲ. ಸಿಲಿಂಡರ್‌ನ ರೆಗ್ಯುಲೇಟರ್‌ ವಾಲ್‌ಗೆ ಹಾನಿಯಾಗಿರುವುದು ಕಂಡು ಬಂದಿದೆ. ಇದರಿಂದ ಗ್ಯಾಸ್‌ ಸೋರಿಕೆ ಆಗಿ, ಬೆಂಕಿಯ ತೀವ್ರತೆ ಹೆಚ್ಚಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಬೆಂಕಿ ಅವಘಡ : ಸಿಲಿಂಡರ್‌ ಬ್ಲಾಸ್ಟ್‌ ಆಗಿಲ್ಲ, ದೇವರ ಮನೆ ದೀಪದಿಂದ ಬೆಂಕಿ?
Linkup

ಬೆಂಗಳೂರು:ನಗರದ ದೇವರಚಿಕ್ಕನಹಳ್ಳಿಯ 'ಆಶ್ರಿತ್‌ ಆಸ್ಪೈರ್‌' ಅಪಾರ್ಟ್‌ಮೆಂಟ್‌ನಲ್ಲಿ ತಾಯಿ, ಮಗಳನ್ನು ಬಲಿಪಡೆದ ಅಗ್ನಿ ಅನಾಹುತಕ್ಕೆ ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಬೆಂಕಿ ಹೊತ್ತಿಕೊಂಡು ಮನೆಯ ಒಳಾಂಗಣ ಅಲಂಕಾರಕ್ಕೆ ಬಳಸಿದ್ದ ಪ್ಲೈವುಡ್‌ ಶೀಟ್‌ಗಳಿಗೆ ತಗುಲಿ ಬಹುಬೇಗನೆ ವ್ಯಾಪಿಸಿದ್ದೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಅನಾಹುತ ನಡೆದಿರುವ ಫ್ಲ್ಯಾಟ್‌ ನಂಬರ್‌ 210 ಆರು ತಿಂಗಳಿನಿಂದ ಖಾಲಿ ಇತ್ತು. ಭಾಗ್ಯರೇಖಾ ಅವರು ಅಮೆರಿಕದಲ್ಲಿದ್ದ ಪುತ್ರಿ ಮನೆಗೆ ತೆರಳಿ ಅನಾಹುತ ಸಂಭವಿಸುವ ಹಿಂದಿನ ದಿನವಷ್ಟೇ ಬೆಂಗಳೂರಿಗೆ ವಾಪಸ್‌ ಆಗಿದ್ದರು. ಮಗಳು ಪ್ರೀತಿ ಹಾಗೂ ಅಳಿಯ ಸಂದೀಪ್‌ಗೆ ಸೇರಿದ ಫ್ಲ್ಯಾಟ್‌ ನಂ.211ರಲ್ಲಿ ಮಂಗಳವಾರ ಮಧ್ಯಾಹ್ನ ಊಟ ಮುಗಿಸಿ ಭಾಗ್ಯರೇಖಾ, ತಾಯಿ ಲಕ್ಷ್ಮೇದೇವಿ ಜತೆ 210 ನಂಬರಿನ ಫ್ಲ್ಯಾಟ್‌ಗೆ ಬಂದಿದ್ದರು.

ಮನೆಯೊಳಗೆ ಬಂದವರೇ ದೇವರಿಗೆ ದೀಪ ಹಚ್ಚಿಟ್ಟು ನಿದ್ದೆ ಮಾಡಿರಬಹುದು. ದೇವರ ದೀಪ ಉರುಳಿದ್ದರಿಂದ ಅಥವಾ ಇತರೆ ವಸ್ತುಗಳಿಗೆ ತಗಲಿ ಪ್ಲೈವುಡ್‌ಗೆ ಬೆಂಕಿ ಹೊತ್ತಿಕೊಂಡಿರಬಹುದು. ಬೆಂಕಿ ಆವರಿಸಿಕೊಂಡ ನಂತರ ಎಚ್ಚರವಾಗಿರಬಹುದು. ಅಷ್ಟು ಹೊತ್ತಿಗಾಗಲೇ ಪರಿಸ್ಥಿತಿ ಕೈಮೀರಿರುವ ಸಾಧ್ಯತೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಹಾಲ್‌ನಲ್ಲಿ ದೇವರ ದೀಪಗಳು ಕಂಡು ಬಂದಿವೆ.

ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದ ತಕ್ಷಣ ಭಾಗ್ಯರೇಖಾ, ಅಳಿಯ ಸಂದೀಪ್‌ಗೆ ಕರೆ ಮಾಡಿದ್ದಾರೆ. ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದಿದ್ದರು. ತಕ್ಷಣ ಸಂದೀಪ್‌ ಹಾಗೂ ಭಾಗ್ಯರೇಖಾ ಅವರ ಪತಿ ಭೀಮಸೇನರಾವ್‌ ನೆರವಿಗೆ ಧಾವಿಸಲು ಮುಂದಾಗಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿಯ ಆರ್ಭಟ ಹಿಡಿತಕ್ಕೆ ಬಾರದಂತೆ ಜೋರಾಗಿತ್ತು. ರಕ್ಷಣೆ ಮಾಡಲು ಬಾಗಿಲು ತೆರೆದಾಗ ಬೆಂಕಿ ಅಪ್ಪಳಿಸುವಂತೆ ಹೊರಚಾಚುತ್ತಿತ್ತು. ನಮಗೆ ಮನೆಯೊಳಗೆ ಹೋಗಲು ಸಾಧ್ಯವಾಗದಷ್ಟು ಬೆಂಕಿಯ ಕೆನ್ನಾಲಿಗೆ ನುಗ್ಗಿ ಬಂತು ಎಂದು ಅಳಿಯ ಸಂದೀಪ್‌ ಮಾಹಿತಿ ನೀಡಿದ್ದಾರೆ.

ಸಿಲಿಂಡರ್‌ ಸ್ಫೋಟವಾಗಿಲ್ಲ: