ಬೆಂಗಳೂರಿನಲ್ಲಿ ಚಿಣ್ಣರನ್ನು ಕಟ್ಟಿ ಹಾಕಿ ಚಿತ್ರಹಿಂಸೆ ಕೊಟ್ಟ ಪುಂಡರು; 6 ಮಂದಿ ಬಂಧನ!

ಶಾಲೆ ಅವಧಿ ಮುಗಿದ ನಂತರ ಮಕ್ಕಳು ಎಂದಿನಂತೆ ಆಡಲು ಮೈದಾನಕ್ಕೆ ಬಂದಿದ್ದರು. ಇದೇ ವೇಳೆ ಕಾಂಪೌಂಡ್‌ ಪ್ರವೇಶಿಸಿದ ಪುಂಡರ ಗುಂಪು ಮಕ್ಕಳನ್ನು ಸುತ್ತುವರಿದಿದೆ. ಯಾರೊಬ್ಬರನ್ನೂ ಹೊರಗೆ ತೆರಳಲು ಬಿಟ್ಟಿಲ್ಲ. ಸುಮಾರು ಒಂದು ಗಂಟೆ ಕಾಲ ನಾನಾ ರೀತಿಯಲ್ಲಿ ಕಾಟ ಕೊಟ್ಟು ವಿಕೃತಿ ಮೆರೆದಿದ್ದಾರೆ.

ಬೆಂಗಳೂರಿನಲ್ಲಿ ಚಿಣ್ಣರನ್ನು ಕಟ್ಟಿ ಹಾಕಿ ಚಿತ್ರಹಿಂಸೆ ಕೊಟ್ಟ ಪುಂಡರು; 6 ಮಂದಿ ಬಂಧನ!
Linkup
ಕೆ.ಆರ್‌.ಪುರ: ಪುಂಡರ ಗುಂಪೊಂದು ಶಾಲಾ ಆಟದ ಮೈದಾನಕ್ಕೆ ಆಡಲು ಬಂದ ಬಾಲಕರನ್ನು ಮರಕ್ಕೆ ಕಟ್ಟಿಹಾಕಿ, ಬೀಡಿ ಸೇದಿಸಿ ವಿಕೃತವಾಗಿ ವರ್ತಿಸಿದ ಘಟನೆ ಕೆ.ಆರ್‌. ಪುರದ ಬಿ.ನಾರಾಯಣಪುರದಲ್ಲಿ ನಡೆದಿದೆ. ಈ ಸಂಬಂಧ ಆರು ಮಂದಿಯನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಐದು ಮಂದಿಗೆ ಇನ್ನೂ 18 ವರ್ಷ ತುಂಬಿಲ್ಲ, ಗಾಂಜಾ ವ್ಯಸನ ಅಂಟಿಸಿಕೊಂಡಿದ್ದರು. ಇವರ ಜತೆ ರಾಜು ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆ ಅವಧಿ ಮುಗಿದ ನಂತರ ಮಕ್ಕಳು ಎಂದಿನಂತೆ ಆಡಲು ಮೈದಾನಕ್ಕೆ ಬಂದಿದ್ದರು. ಇದೇ ವೇಳೆ ಕಾಂಪೌಂಡ್‌ ಪ್ರವೇಶಿಸಿದ ಪುಂಡರ ಗುಂಪು ಮಕ್ಕಳನ್ನು ಸುತ್ತುವರಿದಿದೆ. ಯಾರೊಬ್ಬರನ್ನೂ ಹೊರಗೆ ತೆರಳಲು ಬಿಟ್ಟಿಲ್ಲ. ಸುಮಾರು ಒಂದು ಗಂಟೆ ಕಾಲ ನಾನಾ ರೀತಿಯಲ್ಲಿ ಕಾಟ ಕೊಟ್ಟು ವಿಕೃತಿ ಮೆರೆದಿದ್ದಾರೆ. ಮಕ್ಕಳನ್ನು ಮರಕ್ಕೆ ಕಟ್ಟಿ ಹಾಕಿ, ಬೀಡಿ, ಸಿಗರೇಟು ಕೊಟ್ಟು ಸೇದುವಂತೆ ಮಾಡಿದ್ದಾರೆ. ನಿರಾಕರಿಸಿದ್ದಕ್ಕೆ ಬೆಂಕಿ ಹೊತ್ತಿಸಿದ ಬೀಡಿ, ಸಿಗರೇಟು ತಾಗಿಸಿ ಗಾಯಗೊಳಿಸಿದ್ದಾರೆ. ಮಕ್ಕಳು ಪರಿಪರಿಯಾಗಿ ಬೇಡಿಕೊಂಡರೂ ಪುಂಡರು ಬಿಡುವ ಮನಸ್ಸು ಮಾಡಿಲ್ಲ. ಒಂದು ಗಂಟೆ ನಾನಾ ರೀತಿ ಹಿಂಸೆ ಕೊಟ್ಟು ಬಿಡುಗಡೆ ಮಾಡಿದ್ದಾರೆ. ಪೋಷಕರಿಗೆ ಹೇಳದಂತೆ ಬೆದರಿಸಿ ಕಳುಹಿಸಿದ್ದರು. ವಿಡಿಯೊ ಮಾಡಿ ಸಿಕ್ಕಿ ಬಿದ್ದರು ಕಿಡಿಗೇಡಿ ಕೃತ್ಯವನ್ನು ಆರೋಪಿಗಳು ವಿಡಿಯೊ ಮಾಡಿಕೊಂಡಿದ್ದರು. ಈ ವಿಡಿಯೊ ಬೇರೆಯವರಿಗೆ ರವಾನೆಯಾಗಿ ಬಳಿಕ ವೈರಲ್‌ ಆಗಿತ್ತು. ದೇವಸಂದ್ರ ವಾರ್ಡ್‌ನ ಪಾಲಿಕೆ ಮಾಜಿ ಸದಸ್ಯ ಎಂ.ಎನ್‌.ಶ್ರೀಕಾಂತ್‌ ಅವರನ್ನೂ ತಲುಪಿತ್ತು. ಪಾಲಕರಿಂದಲೂ ಶ್ರೀಕಾಂತ್‌ ಅವರಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಶ್ರೀಕಾಂತ್‌ ಅವರು ಪೊಲೀಸರ ಗಮನಕ್ಕೆ ತಂದಿದ್ದರು. ಬಳಿಕ ಪೊಲೀಸರು ಪರಿಶೀಲಿಸಿದಾಗ ಆರೋಪಿಗಳೆಲ್ಲರೂ ಸ್ಥಳೀಯರೇ ಆಗಿರುವುದು ದೃಢಪಟ್ಟಿದೆ. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಹೇಳಿದಂತೆ ಕೇಳದಿದ್ದರೆ ಹಿಂಸೆ ಪುಂಡರು ಈ ಹಿಂದೆಯೂ ಮಕ್ಕಳನ್ನು ಹಿಂಸಿಸಿದ ಬಗ್ಗೆ ಪಾಲಕರು ಮಾಹಿತಿ ನೀಡಿದ್ದಾರೆ. ''ಅಂಗಡಿಯಿಂದ ಸಿಗರೇಟು, ಬೆಂಕಿ ಪೊಟ್ಟಣ ತರುವಂತೆ ಹೇಳುತ್ತಿದ್ದರು. ಮನೆಯಿಂದ ಕುಡಿಯಲು ಗ್ಲಾಸ್‌ ತರಲು ಹೇಳುತ್ತಿದ್ದರು. ಅವರು ಹೇಳಿದ್ದನ್ನು ಕೇಳಿದಿದ್ದರೆ ಹಿಂಸೆ ಕೊಡುತ್ತಿದ್ದರು. ನಮ್ಮ ಮಕ್ಕಳ ಕೈಗೆ ಹಾಗೂ ಕೆನ್ನೆಯ ಮೇಲೆ ಸುಟ್ಟಿದ್ದಾರೆ. ಒಬ್ಬ ಹುಡುಗನಿಗೆ ಜ್ವರ ಕೂಡಾ ಬಂದಿದೆ,'' ಎಂದು ಪಾಲಕರಾದ ತಾರಾ ವಿವರಿಸಿದ್ದಾರೆ. ಕಿಡಿಗೇಡಿ ಕೃತ್ಯ ಇದೇ ಮೊದಲಲ್ಲ ಶಾಲೆ ಮೈದಾನವನ್ನು ಪುಂಡರು ಅಡ್ಡೆಯಾಗಿಸಿಕೊಂಡಿದ್ದರು. ಶಾಲಾ ಮೈದಾನದಲ್ಲಿ ಕೂರಬೇಡಿ ಎಂದು ಈ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರು ಪುಂಡರಿಗೆ ಎಚ್ಚರಿಕೆ ನೀಡಿದ್ದರು. ಆಗ ಇದೇ ಪುಂಡರ ಗುಂಪು ರಾತ್ರಿ ವೇಳೆ ಖಾಲಿ ಬಾಟಲಿಗಳನ್ನು ಕಚೇರಿಯತ್ತ ಎಸೆದು ದಾಂಧಲೆ ಮಾಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟಿದ್ದರು. ಇದೀಗ ಮತ್ತೆ ಕಿಡಿಗೇಡಿ ಕೃತ್ಯವೆಸಗಿದ್ದಾರೆ.