ತಗ್ಗಿತು ಆಂಬ್ಯುಲೆನ್ಸ್‌ ಸೈರನ್‌ ಮೊರೆತ: ಬೆಂಗಳೂರಿನಲ್ಲಿ ಬೇಡಿಕೆ ಶೇ. 80ರಷ್ಟು ಕುಸಿತ

ಪ್ರತಿ ದಿನ ಒಬ್ಬೊಬ್ಬ ಚಾಲಕರಿಗೆ ಸೋಂಕಿತರ ಕಡೆಯಿಂದ ಆಸ್ಪತ್ರೆಗೆ ಸೇರಿಸಲು ಕನಿಷ್ಠ 10 ಕರೆಗಳು ಬರುತ್ತಿದ್ದವು. ಇದೀಗ ಒಂದು ಕರೆ ಬಂದರೆ ಹೆಚ್ಚು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ಸೌಲಭ್ಯ ಇಲ್ಲದವರು ಆಂಬ್ಯುಲೆನ್ಸ್‌ಗೆ ಕರೆ ಮಾಡುತ್ತಾರೆ.

ತಗ್ಗಿತು ಆಂಬ್ಯುಲೆನ್ಸ್‌ ಸೈರನ್‌ ಮೊರೆತ: ಬೆಂಗಳೂರಿನಲ್ಲಿ ಬೇಡಿಕೆ ಶೇ. 80ರಷ್ಟು ಕುಸಿತ
Linkup
ಶಿವರಾಮ್‌ : ಕೆಲವೇ ದಿನಗಳ ಹಿಂದೆ ನಡು ರಾತ್ರಿಯ ನಿದ್ದೆಯಿಂದಲೂ ಬಡಿದೆಬ್ಬಿಸುತ್ತಿದ್ದ ಆಂಬ್ಯುಲೆನ್ಸ್‌ಗಳ ಸದ್ದು ಈಗ ಸ್ವಲ್ಪ ಕಡಿಮೆಯಾಗಿದೆ. ದಿನವಿಡೀ ಎಲ್ಲಿ ನೋಡಿದರಲ್ಲಿ ಕಾಣುತ್ತಿದ್ದ ಈ ವಾಹನಗಳು, ಈಗ ಅಪರೂಪಕ್ಕಷ್ಟೇ ಕಾಣಿಸಿಕೊಳ್ಳುತ್ತಿವೆ. ಅಂಬ್ಯುಲೆನ್ಸ್‌ ಸಿಕ್ಕಿಲ್ಲ ಎಂಬ ಕಣ್ಣೀರ ಕೋಡಿ, ಸಕಾಲದಲ್ಲಿ ವಾಹನ ಸಿಗದೆ ದಾರಿಯಲ್ಲೇ ಪ್ರಾಣ ಬಿಡುವ ಪ್ರಕರಣಗಳು ಇಲ್ಲವಾಗಿವೆ. ಅಲ್ಲಿಗೆ ರಾಜಧಾನಿಯಲ್ಲಿ ನಿರ್ಮಾಣಗೊಂಡಿದ್ದ ಭಯಾನಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾಗಿರುವ ಸೂಚನೆ ದೊರೆಯುತ್ತಿದೆ. ನಗರದಲ್ಲಿ ಮೇ ಆರಂಭದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಉತ್ತುಂಗಕೇರಿತ್ತು. ಗರಿಷ್ಠ 21,126 ಸೋಂಕಿತರು ನಗರದಲ್ಲೇ ಪತ್ತೆಯಾಗುತ್ತಿದ್ದರು. ಇದು ರಾಜ್ಯದ ಸೋಂಕಿತರಿಗೆ ಹೋಲಿಸಿದರೆ ಶೇ. 70ರಷ್ಟಿತ್ತು. ಹೀಗಾಗಿ, ಸೋಂಕಿತರನ್ನು ಆಸ್ಪತ್ರೆಗಳಿಗೆ ಸೇರಿಸಲು ಆಂಬ್ಯುಲ್ಸೆನ್‌ಗಳು ಒಂದರ ಹಿಂದೊಂದರಂತೆ ಓಡುತ್ತಿದ್ದವು. ಒಂದೊಂದು ಚಿತಾಗಾರಗಳ ಮುಂದೆ ಶವಗಳನ್ನು ಹೊತ್ತ ನೂರಕ್ಕೂ ಅಧಿಕ ಆ್ಯಂಬುಲೆನ್ಸ್‌ಗಳು 'ಕ್ಯೂ'ನಲ್ಲಿ ನಿಂತ ಮನಕಲಕುವ ದೃಶ್ಯ ಕೊರೊನಾ ಎರಡನೇ ಅಲೆ ಸೃಷ್ಟಿಸಿದ ಆರ್ಭಟಕ್ಕೆ ಸಾಕ್ಷಿಯಾಗಿತ್ತು. ಈಗಲೂ ಸಾವಿನ ಸಂಖ್ಯೆ ಹೆಚ್ಚೇ ಇದೆಯಾದರೂ ಪರಿಸ್ಥಿತಿ ಒಂದಿಷ್ಟು ತಹಬದಿಗೆ ಬಂದಿದೆ. 'ನಗರದಲ್ಲಿ ಎರಡು ಸಾವಿರಕ್ಕೂ ಅಧಿಕ ಖಾಸಗಿ (ಪರಿವರ್ತಿತ ಟಿಟಿಗಳೂ ಸೇರಿ) ಆಂಬ್ಯುಲೆನ್ಸ್‌ಗಳಿವೆ. ಪ್ರತಿ ದಿನ ಒಬ್ಬೊಬ್ಬ ಚಾಲಕರಿಗೆ ಸೋಂಕಿತರ ಕಡೆಯಿಂದ ಆಸ್ಪತ್ರೆಗೆ ಸೇರಿಸಲು ಕನಿಷ್ಠ 10 ಕರೆಗಳು ಬರುತ್ತಿದ್ದವು. ಇದೀಗ ಒಂದು ಕರೆ ಬಂದರೆ ಹೆಚ್ಚು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ಸೌಲಭ್ಯ ಇಲ್ಲದವರು ಆಂಬ್ಯುಲೆನ್ಸ್‌ಗೆ ಕರೆ ಮಾಡುತ್ತಾರೆ. ಈ ಪೈಕಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವವರೇ ಹೆಚ್ಚು' ಎನ್ನುತ್ತಾರೆ ಚಾಲಕರ ಸಂಘದ ಸದಸ್ಯ ಬಿ.ಆರ್‌. ವೆಂಕಟೇಶ್‌. 'ಕೋವಿಡ್‌ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿರುವುದರಿಂದ ಆಂಬ್ಯುಲೆನ್ಸ್‌ಗಳಿಗೆ ಶೇ 80ರಷ್ಟು ಬೇಡಿಕೆ ಕಡಿಮೆಯಾಗಿದೆ. ಬಹುಶಃ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಲು ಪ್ರಮುಖ ಕಾರಣ ಇರಬಹುದು' ಎನ್ನುತ್ತಾರೆ, ಅಖಿಲ ಕರ್ನಾಟಕ ಆಂಬ್ಯುಲೆನ್ಸ್‌ ಚಾಲಕರು ಹಾಗೂ ಮಾಲೀಕರ ಸಂಘದ ಗೌರವಾಧ್ಯಕ್ಷೆ ಲಕ್ಷ್ಮಿ ಕೆ.