ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ: ಮೂವರ ದಾರುಣ ಸಾವು!

ಭಾರೀ ಮಳೆಯ ನಡುವೆ ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ: ಮೂವರ ದಾರುಣ ಸಾವು!
Linkup
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಬೆಟ್ಟ ಹಲಸೂರು ಕ್ರಾಸ್ ಬಳಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿದ್ದಾರೆ. ಭಾರೀ ಮಳೆಯಿಂದಾಗಿ ರಸ್ತೆ ಕಾಣದೆ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಎದುರುಗಡೆ ಬರುತ್ತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಳಗಡೆ ಸಿಕ್ಕಿದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಂದು ಕಾರಿನ ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕೆಳಗಡೆ ಸಿಲುಕಿದ ಕಾರಿನಲ್ಲಿದ್ದ ಇಬ್ಬರು ಹೆಂಗಸರು ಹಾಗೂ ಒಬ್ಬ ಗಂಡಸು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಜಾಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಮಳೆ ಹಿನ್ನಲೆಯಲ್ಲಿ ರಸ್ತೆ ಕಾಣದೆ ಡಿವೈಡರ್ ಗೆ ಕಾರು ಡಿಕ್ಕಿಯಾಗಿದೆ. ಘಟನೆ ಕುರಿತಂತೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.