ಕೋವಿಡ್‌ಗಿಂತಲೂ ಬೆಂಗಳೂರಿಗರು ಎದುರಿಸುತ್ತಿರುವ ಅತಿ ದೊಡ್ಡ ಅಪಾಯವಿದು!

ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸ್ಫೋಟದ ಆತಂಕದ ನಡುವೆಯೇ ಮತ್ತೊಂದು ಭಯ ತೀವ್ರಗೊಂಡಿದೆ. ಕರ್ನಾಟಕದ ರಾಜಧಾನಿಯು, ಮಧುಮೇಹಿಗಳ ರಾಜಧಾನಿಯೂ ಆಗುತ್ತಿದೆ ಎಂದು ಬಿಬಿಎಂಪಿ ಸಮೀಕ್ಷೆ ಹೇಳಿದೆ.

ಕೋವಿಡ್‌ಗಿಂತಲೂ ಬೆಂಗಳೂರಿಗರು ಎದುರಿಸುತ್ತಿರುವ ಅತಿ ದೊಡ್ಡ ಅಪಾಯವಿದು!
Linkup
ಬೆಂಗಳೂರು: ರಾಜಧಾನಿ ಈಗ ಸಿಲಿಕಾನ್ ಸಿಟಿ, ಉದ್ಯಾನ ನಗರ, ಐಟಿ ಬಿಟಿ ನಗರವಾಗಿ ಉಳಿದಿಲ್ಲ. ಅದು ಆರೋಗ್ಯ ಸಮಸ್ಯೆಗಳ ಬೀಡೂ ಕೂಡ ಹೌದು. ಒಂದೆಡೆ ಭೀತಿ ನಗರವನ್ನು ಸುತ್ತುತ್ತಲೇ ಇದ್ದರೆ, ಇನ್ನೊಂದೆಡೆ ಜನರ ಜೀವ ಹಿಂಡುತ್ತಿದೆ. ಈ ಮೂಲಕ ಬೆಂಗಳೂರು ಮಧುಮೇಹಿಗಳ ರಾಜಧಾನಿಯಾಗಿ ಬೆಳೆಯುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ, ಬೆಂಗಳೂರು ನಗರವು ಕರ್ನಾಟಕದ ಮಧುಮೇಹ ರಾಜಧಾನಿಯಾಗಿ ಪರಿವರ್ತನೆಯಾಗುತ್ತಿದೆ. ಸಮೀಕ್ಷೆಯ ಪ್ರಕಾರ, ನಗರದ ಶೇ 50.86ರಷ್ಟು ಜನರು ಮಧುಮೇಹಿಗಳಾಗಿದ್ದಾರೆ. ಮತ್ತೊಂದು ಆಘಾತ ಮೂಡಿಸುವ ಸಂಗತಿಯೆಂದರೆ, ಕೋವಿಡ್ 19 ಮೊದಲು ಮತ್ತು ಎರಡನೆಯ ಅಲೆಯ ವೇಳೆ ಅನೇಕ ಮಧುಮೇಹಿಗಳು ಜೀವ ಕಳೆದುಕೊಂಡಿದ್ದಾರೆ. ಮನೆಯಿಂದ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರುವ ಬಿಬಿಎಂಪಿ, ಕಳೆದ 21 ದಿನಗಳಲ್ಲಿ 2,48,280 ಮನೆಗಳಿಗೆ ಭೇಟಿ ನೀಡಿದ್ದು, 7,11,648 ಮಂದಿಯನ್ನು ತಪಾಸಣೆ ಮಾಡಿದೆ. 57,528 ಮಂದಿ ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ಕೂಡ ಹೊಂದಿದ್ದಾರೆ. ಅವರಲ್ಲಿ ಶೇ 38.82ರಷ್ಟು ಮಂದಿಗೆ ಅಧಿಕ ರಕ್ತದೊತ್ತಡ ಇದ್ದರೆ, ಶೇ 2.99ರಷ್ಟು ಮಂದಿ ಅಧಿಕ ಥೈರಾಯ್ಡ್ ಸಮಸ್ಯೆ ಮತ್ತು ಶೇ 2.48 ಮಂದಿ ಹೃದ್ರೋಗ ಸಮಸ್ಯೆ ಹೊಂದಿದ್ದಾರೆ. 22,313 ಮಧುಮೇಹಿಗಳು ಇದುವರೆಗೆ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿಸಿದೆ. 'ಸಾಂಕ್ರಾಮಿಕದ ಸಂದರ್ಭದಲ್ಲಿ, ಮಕ್ಕಳಲ್ಲಿ ಟೈಪ್ 1 ಮಧುಮೇಹ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ. ಟೈಪ್ 1 ಮಧುಮೇಹವು ಆಟೋಇಮ್ಯೂನ್ ಸ್ಥಿತಿಯಾಗಿದೆ. ಅಂದರೆ, ನಮ್ಮದೇ ಪ್ರತಿರಕ್ಷಣಾ ವ್ಯವಸ್ಥೆಯು ನಮ್ಮ ದೇಹದ ಕೋಶಗಳ ಮೇಲೆಯೇ ದಾಳಿ ನಡೆಸುತ್ತದೆ. ಟೈಪ್ 1 ಮಧುಮೇಹದಲ್ಲಿ ದೇಹದಲ್ಲಿನ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ಅದು ನಾಶಪಡಿಸುತ್ತದೆ' ಎಂದು ಅಸ್ಟರ್ ಆರ್‌ವಿ ಆಸ್ಪತ್ರೆಯ ಶಿಶುವೈದ್ಯೆ ಡಾ. ಎನ್. ಕವಿತಾ ಭಟ್ ತಿಳಿಸಿದ್ದಾರೆ.