ಬೆಂಗಳೂರು ಹೊರ ವಲಯದ ರಿಂಗ್‌ ರಸ್ತೆಗಳಲ್ಲಿ ಶೇ. 60ರಷ್ಟು ಬೀದಿ ದೀಪಗಳು ಉರಿಯುವುದೇ ಇಲ್ಲ..!

ರಸ್ತೆಯಲ್ಲಿ ಪ್ರತಿ ನಿತ್ಯ ರಾತ್ರಿ ಸಮಯಲ್ಲಿ ನೂರಾರು ಪಾದಚಾರಿಗಳು ಒಂದು ಬದಿಯಿಂದ ಇನ್ನೊಂದು ಬದಿಗೆ ರಸ್ತೆ ದಾಟುತ್ತಿರುತ್ತಾರೆ. ಹೀಗಾಗಿ ಬೀದಿ ದೀಪಗಳು ಸೂಕ್ತವಾಗಿ ಕಾರ್ಯ ನಿರ್ವಹಿಸುವುದು ತುಂಬ ಅಗತ್ಯ.

ಬೆಂಗಳೂರು ಹೊರ ವಲಯದ ರಿಂಗ್‌ ರಸ್ತೆಗಳಲ್ಲಿ ಶೇ. 60ರಷ್ಟು ಬೀದಿ ದೀಪಗಳು ಉರಿಯುವುದೇ ಇಲ್ಲ..!
Linkup
: ನಗರದಲ್ಲಿ ಕೋವಿಡ್‌ ಪ್ರಕರಣಗಳು ತಗ್ಗಿರುವ ಹಿನ್ನೆಲೆಯಲ್ಲಿ ಬಹುತೇಕ ಕಚೇರಿಗಳು, ಕೈಗಾರಿಕೆಗಳು ಪುನಾರಂಭವಾಗಿದ್ದು, ಹೆಚ್ಚಿನ ಉದ್ಯೋಗಿಗಳು ಕಚೇರಿಗಳಿಗೆ ತೆರಳುತ್ತಿದ್ದಾರೆ. ನಗರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ನಗರದ ಹೊರ ವರ್ತುಲ ರಸ್ತೆಯಲ್ಲಿ ಸುಮಾರು 600 ಟೆಕ್‌ ಕಂಪನಿಗಳು ಮತ್ತು ಸ್ಟಾರ್ಟ್‌ ಅಪ್‌ ಕಂಪನಿಗಳು ಇವೆ. ಪ್ರತಿನಿತ್ಯ ಸಾವಿರಾರು ಉದ್ಯೋಗಿಗಳು ಹೊರ ವರ್ತುಲ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೆ ಈ ರಸ್ತೆಯಲ್ಲಿ ಶೇ.60ರಷ್ಟು ಬೀದಿ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇತ್ತೀಚಿಗೆ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದ 10 ಮಂದಿ ಸದಸ್ಯರು ಸಿಲ್ಕ್‌ ಬೋರ್ಡ್‌ ಮತ್ತು ಕೆ. ಆರ್‌. ಪುರಂ ನಡುವಿನ 17 ಕಿ.ಮೀ ಮಾರ್ಗದ ಹೊರ ವರ್ತುಲ ರಸ್ತೆಯಲ್ಲಿ ಸರ್ವೆ ನಡೆಸಿದ್ದು, ಈ ಮಾರ್ಗದಲ್ಲಿಒಟ್ಟು 1,650 ಬೀದಿ ದೀಪಗಳಿವೆ. ಈ ಪೈಕಿ 978 ಬೀದಿ ದೀಪಗಳು ಅಂದರೆ ಶೇ.60ರಷ್ಟು ಬೀದಿ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ. ಉಳಿದ ಹಲವು ಬೀದಿ ದೀಪಗಳು ಮಂದ ಬೆಳಕಿನಲ್ಲಿ ಉರಿಯುತ್ತಿದ್ದು, ಇದ್ದೂ ಇಲ್ಲದಂತಾಗಿವೆ. 'ಈ ರಸ್ತೆಯಲ್ಲಿ ಪ್ರತಿ ನಿತ್ಯ ರಾತ್ರಿ ಸಮಯಲ್ಲಿ ನೂರಾರು ಪಾದಚಾರಿಗಳು ಒಂದು ಬದಿಯಿಂದ ಇನ್ನೊಂದು ಬದಿಗೆ ರಸ್ತೆ ದಾಟುತ್ತಿರುತ್ತಾರೆ. ಹೀಗಾಗಿ ಬೀದಿ ದೀಪಗಳು ಸೂಕ್ತವಾಗಿ ಕಾರ್ಯ ನಿರ್ವಹಿಸುವುದು ತುಂಬ ಅಗತ್ಯ. ಹೊರ ವರ್ತುಲ ರಸ್ತೆಯಲ್ಲಿ ಅತಿ ವೇಗವಾಗಿ ವಾಹನಗಳು ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳ ಸುರಕ್ಷತೆ ಅತಿ ಮುಖ್ಯ. ಆದರೆ ಈ ನಿಟ್ಟಿನಲ್ಲಿ ಅಗತ್ಯ ಮೂಲ ಸೌಕರ್ಯಗಳು ಇಲ್ಲ. ಸರಕಾರಿ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಶೀಘ್ರ ಬೀದಿ ದೀಪಗಳನ್ನು ಸರಿಪಡಿಸಬೇಕು' ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದ ಕಾರ್ಯನಿರ್ವಾಹಕ ವ್ಯವಸ್ಥಾಪಕ ಕೃಷ್ಣ ಕುಮಾರ್‌ ಗೌಡ ಒತ್ತಾಯಿಸಿದರು. 'ಪ್ರತಿ ನಿತ್ಯ ಹೊರ ವರ್ತುಲ ರಸ್ತೆಯಲ್ಲಿ ಸಂಚರಿಸುತ್ತೇನೆ. ಇತ್ತೀಚಿಗೆ ಕಾರಿನಲ್ಲಿ ತೆರಳುತ್ತಿರುವಾಗ ಮಂದ ಬೆಳಕು ಮತ್ತು ಕತ್ತಲೆಯ ಕಾರಣ ಇನ್ನೇನು ಪಾದಚಾರಿಗೆ ಡಿಕ್ಕಿ ಹೊಡೆಯುವವನಿದ್ದೆ. ಆದರೆ ಅದೃಷ್ಟವಶಾತ್‌ ಅಪಘಾತ ತಪ್ಪಿತು. ಎಲ್ಲೋ ಅಲ್ಲೊಂದು ಇಲ್ಲೊಂದು ಬೀದಿ ದೀಪಗಳು ಮಾತ್ರ ಉರಿಯುತ್ತವೆ. ಬಹುತೇಕ ಬೀದಿ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸಂಬಂಧಪಟ್ಟವರು ಶೀಘ್ರ ಇದನ್ನು ಸರಿಪಡಿಸಬೇಕು' ಎಂದು ಟೆಕ್ಕಿ ರಮೇಶ್‌ ನಂದಿ ತಮ್ಮ ಅನುಭವ ಹಂಚಿಕೊಂಡರು. 'ಶನಿವಾರ ಸಂಜೆ ಕಚೇರಿಯಿಂದ ವಾಪಸ್‌ ಮನೆಗೆ ಕಾರಿನಲ್ಲಿ ತೆರಳುತ್ತಿದ್ದೆ. ಕತ್ತಲಿನಲ್ಲಿ ರಸ್ತೆ ಉಬ್ಬು ಕಾಣಿಸಲಿಲ್ಲ. ಹಂಪ್‌ ದಾಟಿ ಮುಂದಕ್ಕೆ ಚಲಿಸಿದ ಕಾರು, ಪಾದಚಾರಿ ಒಬ್ಬರನ್ನು ಡಿಕ್ಕಿ ಹೊಡೆಯುವುದರಲ್ಲಿತ್ತು. ಅಷ್ಟರಲ್ಲಿ ಹ್ಯಾಂಡ್‌ ಬ್ರೇಕ್‌ ಹಾಕಿದರಿಂದ ಆಗಬೇಕಿರುವ ಅನಾಹುತ ತಪ್ಪಿತು' ಎಂದು ಖಾಸಗಿ ಕಂಪನಿ ಉದ್ಯೋಗಿ ಸುರೇಶ್‌ ತಿಳಿಸಿದರು. 'ಹೊರ ವರ್ತುಲ ರಸ್ತೆಯಲ್ಲಿ ಬೀದಿ ದೀಪಗಳ ಸಮಸ್ಯೆ ಕುರಿತು ನಮ್ಮ ಗಮನಕ್ಕೆ ಬಂದಿದ್ದು, ಈಗಾಗಲೇ ಬೀದಿ ದೀಪಗಳನ್ನು ದುರಸ್ತಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು' ಎಂದು ಬಿಬಿಎಂಪಿ ಹಿರಿಯ ಅಧಿಕಾರಿ ಭರವಸೆ ನೀಡಿದರು.