
ಬೆಂಗಳೂರು: ಬಿಟ್ಟು ಬಿಡದೇ ಸುರಿದ ಮಳೆಯಿಂದ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕರ ದೀಪಾವಿ ಸಂಭ್ರಮಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಕಳೆದ ಎರಡು ದಿನಗಳಿಂದ ಕೊಂಚ ಬಿಡುವು ಪಡೆದುಕೊಂಡಿದ್ದು, ಜನರಿಗೆ ನೆಮ್ಮದಿ ತಂದಿತ್ತು.
ಆದರೆ ಇಂದು(ನ.8-ಸೋಮವಾರ) ಬೆಳಗ್ಗೆ ಬೆಂಗಳೂರಿನಲ್ಲಿ ಮತ್ತೆ ಜಿಟಿಜಿಟಿ ಮಳೆ ಆರಂಭವಾಗಿದ್ದು, ಬೆಳಗ್ಗೆ ಎದು ಕೆಲಸಕ್ಕೆ ಹೋಗುವವರು ಚಳಿಯಲ್ಲೇ ಹೊರಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ವಯಭಾರ ಕುಸಿತ ಉಂಟಾಗಿರುವುದರಿಂದ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಈಗಾಗಲೇ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಭಾರೀ ಮಳೆಯಾಗಿದ್ದು, ವರುಣನ ಆರ್ಭಟಕ್ಕೆ ರಾಜಧಾನಿ ಜನ ಬೆಚ್ಚಿ ಬಿದ್ದಿದ್ದಾರೆ. ಇದು 2015ರ ಬಳಿಕ ಚೆನ್ನೈ ಕಂಡ ಮಹಾ ಮಳೆ ಎಂದು ಖಾಸಗಿ ಹವಾಮಾನ ಸಂಸ್ಥೆಗಳು ಹೇಳಿವೆ.
ಇದೀಗ ಬೆಂಗಳೂರಿನಲ್ಲೂ ಮಳೆಯಾಗುತ್ತಿದ್ದು, ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದೆ. ಆದರೆ ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ದೀಪಾವಳಿ ಸಮಯದಲ್ಲ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ಅವಾಂತರಗಳು ಸಂಭವಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡದಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಂಗಾಳ ಕೊಲ್ಲಿಯ ಆಗ್ನೇಯ ಭಾಗ ಮತ್ತು ಸಮೀಪದ ಸುಮಾತ್ರ ಕರಾವಳಿಯ ಹಿಂದೂ ಮಹಾಸಾಗರದ ಭಾಗದಲ್ಲಿನ ಸಮುದ್ರ ಮಟ್ಟಕ್ಕಿಂತ 3.1 ಕಿಮೀ ಎತ್ತರದವರೆಗೂ ಚಂಡಮಾರುತ ಸನ್ನಿವೇಶ ರೂಪುಗೊಂಡಿದೆ. ಅದರ ಪ್ರಭಾವದಿಂದ ನವೆಂಬರ್ 9ರ ವೇಳೆಗೆ ಬಂಗಾಳ ಕೊಲ್ಲಿಯ ಆಗ್ನೇಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಬಹುದು. ಇದರಿಂದ ನವೆಂಬರ್ 9 ರಿಂದ 12ರವರೆಗೆ ವ್ಯಾಪಕ ಗಾಳಿ ಹಾಗೂ ಮಳೆ ಉಂಟಾಗಬಹುದು ಎಂದು ಐಎಂಡಿ ತಿಳಿಸಿದೆ.