ತಿರುಪತಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡ ಕರ್ನಾಟಕದ ಮಾಜಿ ಸಿಎಸ್‌ ರತ್ನಪ್ರಭಾ

ಆಂಧ್ರ ಪ್ರದೇಶದ ತಿರುಪತಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಸೋಲಾಗಿದೆ. ರತ್ನಪ್ರಭಾ ಕೇವಲ ಶೇ.5.16ರಷ್ಟು (57080) ಮತಗಳಷ್ಟೆ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ತಿರುಪತಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡ ಕರ್ನಾಟಕದ ಮಾಜಿ ಸಿಎಸ್‌ ರತ್ನಪ್ರಭಾ
Linkup
ಹೊಸದಿಲ್ಲಿ: ಕರ್ನಾಟಕ, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡಿನ ತಲಾ ಒಂದು ಲೋಕಸಭೆ ಕ್ಷೇತ್ರ ಹಾಗೂ 11 ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶ ಕೂಡ ಭಾನುವಾರ ಹೊರಬಿದ್ದಿದೆ. ಇದರಲ್ಲಿ ಪ್ರಮುಖವಾಗಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಸೋಲಾಗಿದೆ. ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮಡ್ಡಿಲಾ ಗುರುಮೂರ್ತಿ ಇಲ್ಲಿ 6,26,108 ಮತ ಪಡೆದು 2,71,592 ಮತಗಳ ಅಂತರದಿಂದ ಟಿಡಿಪಿ ಅಭ್ಯರ್ಥಿ ವಿರುದ್ಧ ಜಯ ಗಳಿಸಿದ್ದಾರೆ. ರತ್ನಪ್ರಭಾ ಕೇವಲ ಶೇ.5.16ರಷ್ಟು (57080) ಮತಗಳಷ್ಟೆ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿಜಯ್‌ ವಸಂತ್‌ ಗೆಲುವು ಸಾಧಿಸಿದ್ದಾರೆ. ಕೇರಳದ ಮಲಪ್ಪುರಂ ಲೋಕಸಭೆ ಉಪ ಚುನಾವಣೆಯಲ್ಲಿ ಐಯುಎಂಎಲ್‌ನ ಅಬ್ದುಸ್ಸಾಮದ್‌ ಸಾಮದನಿ ಬಿಜೆಪಿಯ ಎ.ಪಿ. ಅಬ್ದುಲ್ಲಾಕುಟ್ಟಿ ಅವರನ್ನು ಸೋಲಿಸಿದ್ದಾರೆ. ಮಧ್ಯಪ್ರದೇಶದ ದಾಮ್ಹೊ ವಿಧಾನಸಭೆ ಉಪಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಅಭ್ಯರ್ಥಿ ಅಜಯ್‌ ಕುಮಾರ್‌ ಟಂಡನ್‌ ಜಯಗಳಿಸಿದ್ದಾರೆ. ಮಹಾರಾಷ್ಟ್ರದ ಪಂಡರಾಪುರ, ರಾಜಸ್ಥಾನದ ರಾಜ್‌ಸಮಂದ್‌, ಉತ್ತರಾಖಂಡದ ಸಾಲ್ಟ್‌ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ರಾಜಸ್ಥಾನದ ಸಹಾರಾ ಮತ್ತು ಸುನಜ್‌ಗಢ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಕೈಪಾಳಯ ಕ್ಷೇತ್ರಗಳನ್ನು ತನ್ನ ತೆಕ್ಕೆಯಿಂದ ಜಾರದಂತೆ ರಕ್ಷಿಸಿಕೊಂಡಿದೆ.