ಪೆಟ್ರೋಲ್‌ಗಿಂತಲೂ ಟೊಮೆಟೋ ದುಬಾರಿ: ತರಕಾರಿ ದರ ಏರಿಕೆಗೆ ಇಲ್ಲ ಲಗಾಮು!

ದಕ್ಷಿಣ ಭಾರತದೆಲ್ಲೆಡೆ ಭಾರಿ ಮಳೆ ಮತ್ತು ಪ್ರವಾಹದಿಂದ ಅಪಾರ ಪ್ರಮಾಣದ ತರಕಾರಿ ಬೆಳೆ ನಾಶ ಹೊಂದಿದೆ. ಇದರಿಂದ ಉತ್ಪಾದನೆ ನೆಲಕಚ್ಚಿದ್ದು, ಬೆಲೆ ಏರಿಕೆಯಾಗುತ್ತಿದೆ. ದೇಶದ ಅತಿ ದೊಡ್ಡ ಟೊಮೆಟೋ ಉತ್ಪಾದಕ ರಾಜ್ಯ ಆಂಧ್ರಪ್ರದೇಶದಲ್ಲಿಯೂ ಕೆಜಿಗೆ 100 ರೂ ದಾಟಿದೆ.

ಪೆಟ್ರೋಲ್‌ಗಿಂತಲೂ ಟೊಮೆಟೋ ದುಬಾರಿ: ತರಕಾರಿ ದರ ಏರಿಕೆಗೆ ಇಲ್ಲ ಲಗಾಮು!
Linkup
ಹೊಸದಿಲ್ಲಿ: ಪ್ರತಿ ಚಳಿಗಾಲದ ಅವಧಿ ಬರುವಾಗ ಮಳೆಗಾಲದಲ್ಲಿನ ಒಳ್ಳೆ ಇಳುವರಿಯೊಂದಿಗೆ ಪ್ರತಿ ಕೆಜಿಗೆ 10-20 ರೂಪಾಯಿ ದರಕ್ಕೆ ಮಾರಾಟವಾಗುತ್ತದೆ. ಆದರೆ ಈಗ ಋತುಮಾನದ ಪ್ರಕಾರ ಚಳಿಗಾಲವಾಗಿದ್ದರೂ, ಮಳೆಗಾಲವೇ ಮುಗಿದಿಲ್ಲ. ಸತತ ಚಂಡಮಾರುತದ ಪರಿಣಾಮ ಹಾಗೂ ಪ್ರವಾಹ ರೈತರ ಬೆಳೆಗಳನ್ನು ಕೊಚ್ಚಿಕೊಂಡು ಹೋಗುತ್ತಿದೆ. , ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆಯಿಂದ ಟೊಮೆಟೋ ಬೆಳೆ ನಾಶವಾಗಿದೆ. ಇದರಿಂದ ಅದರ ದರ ಏರಿಕೆಯಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾದಂತೆ ಈಗ ತರಕಾರಿಗಳ ಬೆಲೆಯೂ ಗಗನಕ್ಕೇರುತ್ತಿದೆ. ಮುಖ್ಯವಾಗಿ ಟೊಮೆಟೋ ಈಗ ಪೆಟ್ರೋಲ್ ದರವನ್ನೂ ಮೀರಿಸಿದೆ. ದೇಶದ ಅನೇಕ ಭಾಗಗಳಲ್ಲಿ ಈಗಾಗಲೇ ಒಂದು ಕೆಜಿ ಟೊಮೆಟೋ ದರ ನೂರು ರೂಪಾಯಿ ದಾಟಿದೆ. ಚೆನ್ನೈನಲ್ಲಿ ಈ ತಿಂಗಳ ಆರಂಭದಲ್ಲಿ 40 ರೂಪಾಯಿ ಇದ್ದ ಒಂದು ಕೆಜಿ ಟೊಮೆಟೋ ದರ ಈಗ 140 ರೂ.ಗೆ ತಲುಪಿದೆ. ಕ್ಯಾಪ್ಸಿಕಂ ಮತ್ತು ಬೆಲೆ ಕೂಡ ನಾಗಾಲೋಟದಲ್ಲಿದೆ. ಬಹಳ ಅಗತ್ಯವಿರುವ ಈರುಳ್ಳಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಮುಂದಿನ ಎರಡು ಮೂರು ತಿಂಗಳು ಈರುಳ್ಳಿ ಕಣ್ಣೀರು ಹೆಚ್ಚಿಸುವ ಅಪಾಯವಿದೆ. ದೇಶದಲ್ಲಿಯೇ ಅತಿ ಹೆಚ್ಚು ಟೊಮೆಟೋ ಉತ್ಪಾದಿಸುವ ಆಂಧ್ರಪ್ರದೇಶ ಚಂಡಮಾರುತದ ಪರಿಣಾಮ ಸುರಿದ ಮಳೆಯಿಂದ ತತ್ತರಿಸಿದೆ. ಇಲ್ಲಿ ಈಗಾಗಲೇ ಟೊಮೆಟೋ ದರ ಕೆಜಿಗೆ 100 ರೂ ಇದೆ. ಇದು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಮಳೆಯಿಂದಾಗಿ ಬೃಹತ್ ಪ್ರಮಾಣದ ಟೊಮೆಟೋ ಬೆಳೆಯುವ ಪ್ರದೇಶಗಳು ಹಾನಿಗೊಳಗಾಗಿವೆ. ಇನ್ನೊಂದೆಡೆ ಡೀಸೆಲ್ ದರದ ಏರಿಕೆಯೂ ಟೊಮೆಟೋ ಬೆಲೆ ಹೆಚ್ಚಳಕ್ಕೆ ಮತ್ತೊಂದು ಕಾರಣ. ಆಂಧ್ರದಲ್ಲಿ ಸುಮಾರು 58,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆಯಲಾಗುತ್ತದೆ. 26.67 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತದೆ. ಚಿತ್ತೂರಿನ ಮದನಪಲ್ಲಿ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಯಾಗಿದೆ. ಆದರೆ ಅತಿ ದೊಡ್ಡ ಟೊಮೆಟೋ ಉತ್ಪಾದನಾ ಜಿಲ್ಲೆಗಳಾದ ಚಿತ್ತೂರು ಮತ್ತು ಅನಂತಪುರ ಪ್ರವಾಹದಿಂದ ವ್ಯಾಪಕ ಬೆಳೆ ನಷ್ಟ ಅನುಭವಿಸುತ್ತಿವೆ. ಈಗ ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಮಹಾರಾಷ್ಟ್ರದ ಸೋಲಾಪುರದಿಂದ ಹೆಚ್ಚಿನ ಟೊಮೆಟೋ ಪೂರೈಕೆಯಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿಯೂ ಕೆಲವು ದಿನಗಳ ಹಿಂದೆ ಮಳೆ ಅನಾಹುತ ಸೃಷ್ಟಿಸಿದೆ. ಚೆನ್ನೈನಲ್ಲಿ ಟೊಮೆಟೋ ಬಳಕೆ ಅವ್ಯಾಹತವಾಗಿದೆ. ಆದರೆ ಅಲ್ಲಿನ ಮಾರುಕಟ್ಟೆ ದರ ಗ್ರಾಹಕರ ಜೇಬು ಸುಡುತ್ತಿದೆ. ಅಲ್ಲಿ ಪೂರೈಕೆ ಕೊರತೆಯಾಗುತ್ತಿದೆ ಹಾಗೂ ಎಲ್ಲ ಉತ್ಪನ್ನಗಳೂ ಆನ್‌ಲೈನ್ ಮಾರಾಟಗಾರರ ವಶವಾಗುತ್ತಿವೆ ಎಂದು ಹೋಲ್‌ಸೇಲ್ ಮಾರಾಟಗಾರರು ಆರೋಪಿಸುತ್ತಿದ್ದಾರೆ. ಸ್ಥಳೀಯ ಬೆಳೆಗಾರರಲ್ಲದೆ ಇಲ್ಲಿಗೆ ಆಂಧ್ರ ಮತ್ತು ಕರ್ನಾಟಕದಿಂದ ಹೆಚ್ಚಿನ ಟೊಮೆಟೋ ಆಮದಾಗುತ್ತದೆ. ಸರ್ಕಾರದ ವಿರುದ್ಧ ವಿಪಕ್ಷಗಳಿಗೆ ಅಸ್ತ್ರತರಕಾರಿಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿವೆ. 'ಮೋದಿ ಅವರು ದೇಶದಲ್ಲಿ ಸೃಷ್ಟಿಸಿರುವ ಪರಿಸ್ಥಿತಿಯಿಂದ ಅಡುಗೆ ಮನೆಗಳಲ್ಲಿ ಟೊಮೆಟೋ ಮತ್ತು ಈರುಳ್ಳಿ ಮೇಲೆ ಸೆಕ್ಷನ್ 144 ವಿಧಿಸಲಾಗಿದೆ.. ಕ್ಯಾಪ್ಸಿಕಂ ಕೆಜಿಗೆ 100-120 ರೂ ಇದೆ. ಈರುಳ್ಳಿ ಕೂಡ 50 ರೂ ದರವಿದೆ' ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ. ಡೀಸೆಲ್ ಹಾಗೂ ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ಹೇರಿಕೆ ಬಳಿಕ ಕೃಷಿ ಹೂಡಿಕೆ ವೆಚ್ಚ ಅಧಿಕವಾಗಿದೆ. ತಿಂಗಳ ಅಂತ್ಯಕ್ಕೆ ಸಾಮಾನ್ಯ ಜನರ ಬಳಿ ಎಷ್ಟು ಹಣ ಇರುತ್ತದೆ ಎಂಬುದನ್ನು ಸರ್ಕಾರ ಮೊದಲು ಮೌಲ್ಯಮಾಪನ ಮಾಡಬೇಕು. ಸರ್ಕಾರವು ಕೋವಿಡ್ ನಂತರದ ಅವಧಿ ಬಗ್ಗೆ ಯಾವುದೇ ಸಿದ್ಧತೆ ನಡೆಸಿರಲಿಲ್ಲ. ಈಗ ನವೆಂಬರ್ ಅಂತ್ಯದಿಂದ ಉಚಿತ ಪಡಿತರ ಕೂಡ ರದ್ದಾಗುತ್ತಿದೆ ಎಂದು ಆರೋಪಿಸಿದ್ದಾರೆ. ಟೊಮೆಟೋ ದರ ಏರಿಕೆ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಮೀಮ್‌ಗಳಿಗೆ ಆಹಾರವಾಗಿದೆ. ಈ ನೋವಿನಲ್ಲಿಯೂ ಅನೇಕ ತಮಾಷೆಯ ಚರ್ಚೆಗಳು ನಡೆಯುತ್ತಿವೆ.