ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಮಾಡಲು ಹಣಕಾಸು ಸಚಿವಾಲಯದ ಜತೆ ಕೇಂದ್ರ ಚರ್ಚೆ

ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಪ್ರತಿದಿನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದರ ಇಳಿಕೆ ಮಾಡಲು ಕೇಂದ್ರ ಸರಕಾರ ಮುಂದಾಗಿದ್ದು, ಹಣಕಾಸು ಸಚಿವಾಲಯದ ಜತೆ ನಿರಂತರ ಸಂಪರ್ಕದಲ್ಲಿದೆ ಎಂದು ಮೂಲಗಳು ಹೇಳಿವೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಮಾಡಲು ಹಣಕಾಸು ಸಚಿವಾಲಯದ ಜತೆ ಕೇಂದ್ರ ಚರ್ಚೆ
Linkup
ಹೊಸದಿಲ್ಲಿ: ದೇಶದಲ್ಲಿ ಪ್ರತಿದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದರ ಇಳಿಕೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಈ ಸಂಬಂಧ ಹಣಕಾಸು ಸಚಿವಾಲಯದ ಜತೆ ನಿರಂತರ ಸಂಪರ್ಕದಲ್ಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಇಂಧನ ದರ ಇಳಿಕೆ ಮಾಡಬೇಕಾಗಿದೆ. ಸೌದಿ ಅರೇಬಿಯಾದಿಂದ ಆರಂಭಿಸಿ ರಷ್ಯಾದವರೆಗೆ ಎಲ್ಲಾ ತೈಲ ಉತ್ಪಾದಕ ದೇಶಗಳ ಜತೆ ಪೆಟ್ರೋಲಿಯಂ ಸಚಿವಾಲಯ ಸಂಪರ್ಕದಲ್ಲಿದ್ದು, ದರ ಇಳಿಕೆ ಮಾಡಲು ಯತ್ನಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರತಿ ಬ್ಯಾರಲ್‌ ಕಚ್ಚಾ ತೈಲದ ದರ ಮುಂದಿನ ಮೂರು ತಿಂಗಳು 70 ಡಾಲರ್‌ನ ಒಳಗಿರಬೇಕು, ಇದಕ್ಕಾಗಿ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲೆಡೆ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ದಾಖಲೆಯ ಮಟ್ಟದಲ್ಲಿವೆ. ದಿಲ್ಲಿಯಲ್ಲಿ ಲೀಟರ್‌ 105.84 ರೂ. ಇದ್ದರೆ, ಲೀಟರ್‌ಗೆ 94.57 ರೂ. ಇದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 109.53 ರೂ. ಇದೆ. ಡೀಸೆಲ್‌ ಲೀಟರ್‌ಗೆ 100.37 ರೂ.ಗೆ ಮಾರಾಟವಾಗುತ್ತಿದೆ. ವಿಮಾನ ಇಂಧನಕ್ಕಿಂತ ಶೇ. 33ರಷ್ಟು ಹೆಚ್ಚಿನ ದರಕ್ಕೆ ಸದ್ಯ ಲೀಟರ್‌ ಪೆಟ್ರೋಲ್‌ ಮಾರಾಟವಾಗುತ್ತಿದೆ. ವಿಮಾನ ಇಂಧನ ಅಥವಾ ಎಟಿಎಫ್‌ ದರ ದಿಲ್ಲಿಯಲ್ಲಿ ಪ್ರತಿ ಕಿಲೋ ಲೀಟರ್‌ಗೆ ಸದ್ಯ 79,020.16 ರೂ. ಇದೆ. ಅಂದರೆ ಲೀಟರ್‌ಗೆ 79 ರೂ. ದರವಿದೆ. ಆದರೆ ದರ ಇಳಿಕೆಗೆ ಮುಂದಾಗಿರುವ ಕೇಂದ್ರ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲು ಸಿದ್ಧವಿಲ್ಲ ಎಂಬುದನ್ನು ಮೂಲಗಳು ಸ್ಪಷ್ಟಪಡಿಸಿವೆ. ಸದ್ಯ ದೇಶದಲ್ಲಿ 90 ದಿನಗಳಿಗೆ ಬೇಕಾದಷ್ಟು ತೈಲ ಸಂಗ್ರಹವಿದೆ. ಇದೇ ವೇಳೆ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಗೆ ಮಾಜಿ ಹಣಕಾಸು ಸಚಿವ, ತೃಣಮೂಲ ಕಾಂಗ್ರೆಸ್‌ ನಾಯಕ ಯಶವಂತ್‌ ಸಿನ್ಹಾ ಕಿಡಿಕಾರಿದ್ದಾರೆ. ಈಗಿನ ದರವನ್ನು 2014ರ ದರಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ಟ್ಟೀಟ್‌ ಮಾಡಿರುವ ಯಶವಂತ್‌ ಸಿನ್ಹಾ, "ನಮ್ಮದು ಸತ್ತ ಜನರ ದೇಶವಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳ ದೈನಂದಿನ ಮತ್ತು ನ್ಯಾಯಸಮ್ಮತವಲ್ಲದ ಏರಿಕೆಯನ್ನು ಎಲ್ಲಿಯೂ ಜನ ಸಹಿಸುವುದಿಲ್ಲ. ತೆರಿಗೆ ರೂಪದಲ್ಲಿ 2014 ರಲ್ಲಿ ಸರ್ಕಾರವು 75,000 ಕೋಟಿ ರೂ. ಸಂಗ್ರಹಿಸಿದರೆ, ಅದು ಇಂದು 3.50 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುತ್ತಿದೆ. ಇದು ಹಗಲು ದರೋಡೆ ಅಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.