ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್‌ ರಾಜೀನಾಮೆ

ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್‌ ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳಲು ಎರಡು ತಿಂಗಳು ಇರುವಾಗಲೇ ರಾಜೀನಾಮೆ ಸಲ್ಲಿಸಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್‌ ರಾಜೀನಾಮೆ
Linkup
ಹೊಸದಿಲ್ಲಿ: ಕೇಂದ್ರ ಸರಕಾರದ ಕೆ.ವಿ. ಸುಬ್ರಮಣಿಯನ್‌ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳಲು ಎರಡು ತಿಂಗಳು ಇರುವಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ''ನನ್ನ ಮೂರು ವರ್ಷಗಳ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಮರಳಲು ಉದ್ದೇಶಿಸಿದ್ದೇನೆ,'' ಎಂದು ರಾಜೀನಾಮೆಗೆ ಕಾರಣ ತಿಳಿಸಿದ್ದಾರೆ. ಸುಬ್ರಮಣ್ಯನ್‌ ಅವರು 2018ರ ಡಿಸೆಂಬರ್‌ 7ರಂದು ಸಿಇಎ ಆಗಿ ಅಧಿಕಾರ ವಹಿಸಿದ್ದರು. ಅರವಿಂದ್‌ ಸುಬ್ರಮಣಿಯನ್‌ ಪದತ್ಯಾಗ ಮಾಡಿದ 5 ತಿಂಗಳಿನ ನಂತರ ಅವರು ಈ ಹುದ್ದೆ ವಹಿಸಿಕೊಂಡಿದ್ದರು. ಸರಕಾರ ಹೊಸ ಮುಖ್ಯ ಸಲಹೆಗಾರರನ್ನು ಘೋಷಿಸಿಲ್ಲ. 2021ರ ಡಿಸೆಂಬರ್‌ ತನಕ ಕೆ.ವಿ. ಸುಬ್ರಮಣಿಯನ್‌ ಅವರ ಅಧಿಕಾರಾವಧಿ ಇತ್ತು. 50 ವರ್ಷ ವಯಸ್ಸಿನ ಕೆ.ವಿ. ಸುಬ್ರಮಣಿಯನ್‌ ಅವರು ಐಸಿಐಸಿಐ ಬ್ಯಾಂಕ್‌, ಟಿಸಿಎಸ್‌ ಮೊದಲಾದ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅಮೆರಿಕದ ಗೋಜಿಯುಟಾ ಬಿಸಿನೆಸ್‌ ಸ್ಕೂಲ್‌ನಲ್ಲಿ ಹಣಕಾಸು ವಿಷಯದಲ್ಲಿ ಬೋಧಕರಾಗಿದ್ದರು. ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌(ಐಎಸ್‌ಬಿ) ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಸ್ಫೂರ್ತಿ ನೀಡಿದ ಪ್ರಧಾನಿ: ಸರಕಾರದಲ್ಲಿ ಹಿರಿಯ ಅಧಿಕಾರಿಗಳು ಉತ್ತಮ ಸಹಕಾರ ನೀಡಿದ್ದಾರೆ. ನನ್ನ ಮೂರು ದಶಕಗಳ ವೃತ್ತಿ ಜೀವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಷ್ಟು ಸ್ಫೂರ್ತಿ, ಪ್ರೇರಣೆ ನೀಡಿದ ಮತ್ತೊಬ್ಬ ನಾಯಕನನ್ನು ಭೇಟಿಯಾಗಿಲ್ಲ. ಆರ್ಥಿಕ ನೀತಿಗಳನ್ನು ಅರ್ಥ ಮಾಡಿಕೊಳ್ಳುತ್ತಾ, ಜನ ಸಾಮಾನ್ಯರಿಗೆ ಅದರ ಪ್ರಯೋಜನ ದೊರೆಯುವಂತೆ ಯೋಜನೆಗಳನ್ನು ರೂಪಿಸುವುದು ಅವರ ವಿಶೇಷತೆ. ಜನಪ್ರಿಯ ಯೋಜನೆಗಳಿಗೆ ಮಾರುಹೋಗದೆ, ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಪ್ರಧಾನಿಯವರ ಆಲೋಚನೆ, ಅನುಷ್ಠಾನಗಳಿಗೆ ನಾನು ಸಾಕ್ಷಿಯಾಗಿದ್ದೇನೆ ಎಂದು ಸುಬ್ರಮಣಿಯನ್‌ ತಿಳಿಸಿದ್ದಾರೆ. ಮೋದಿ ಅವಧಿಯಲ್ಲಿ ನಿರ್ಗಮನ ಹೊಸತೇನಲ್ಲ ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್‌ ಅಧಿಕಾರಾವಧಿ ಮುಗಿಯಲು 2 ತಿಂಗಳಿರುವಾಗ ರಾಜೀನಾಮೆ ನೀಡಿದ್ದಾರೆ. ಈ ಹಿಂದಿನ ಸಿಇಎ ಅರವಿಂದ್‌ ಸುಬ್ರಮಣಿಯನ್‌ ಕೂಡ ಅಧಿಕಾರಾವಧಿ ಪೂರ್ಣಗೊಳ್ಳಲು 5 ತಿಂಗಳು ಇರುವಾಗಲೇ ರಾಜೀನಾಮೆ ನೀಡಿದ್ದರು. ಆರ್‌ಬಿಐ ಗವರ್ನರ್‌ ಆಗಿದ್ದ ಉರ್ಜಿತ್‌ ಪಟೇಲ್‌ 2018ರ ಡಿಸೆಂಬರ್‌ನಲ್ಲಿ ಅವಧಿಗೆ ಮುನ್ನ ರಾಜೀನಾಮೆ ನೀಡಿದ್ದರು. ಡೆಪ್ಯುಟಿ ಗವರ್ನರ್‌ ವಿರಳ್‌ ಆಚಾರ್ಯ 6 ತಿಂಗಳು ಮುನ್ನ ಪದತ್ಯಾಗ ಮಾಡಿದ್ದರು. ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದ ಅರವಿಂದ್‌ ಪನಗಾರಿಯಾ ಕೂಡ ಎರಡೂವರೆ ವರ್ಷ ಸೇವೆ ಸಲ್ಲಿಸಿದ ನಂತರ ಅವಧಿಗೆ ಮುನ್ನ ರಾಜೀನಾಮೆ ನೀಡಿದ್ದರು.