ಕೋವಿಡ್ ಬಿಸಿಗೆ ಕರಗಿದ ಐಸ್‌ಕ್ರೀಂ, 1,200 ಕೋಟಿ ರೂ. ವಹಿವಾಟಿನ ಉದ್ಯಮದಲ್ಲಿ ತಲ್ಲಣ
ಕೋವಿಡ್ ಬಿಸಿಗೆ ಕರಗಿದ ಐಸ್‌ಕ್ರೀಂ, 1,200 ಕೋಟಿ ರೂ. ವಹಿವಾಟಿನ ಉದ್ಯಮದಲ್ಲಿ ತಲ್ಲಣ
ಐಸ್ ಕ್ರೀಂ ಉದ್ಯಮದಲ್ಲಿ ಇಡೀ ವರ್ಷದ ಶೇ. 30ರಷ್ಟು ವ್ಯವಹಾರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಯುತ್ತದೆ. ಆದರೆ ಕೋವಿಡ್ ಲಾಕ್‌ಡೌನ್, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂನಿಂದಾಗಿ ಉದ್ಯಮದಲ್ಲಿ ತಲ್ಲಣಗಳು ಆರಂಭವಾಗಿವೆ.
ವಾರ್ಷಿಕ 20 ಸಾವಿರ ಕೋಟಿ ರೂ.ಗಳ ಐಸ್‌ಕ್ರೀಂ ಉದ್ಯಮ ನೀರಿನಂತೆ ಕರಗುವ ಸ್ಥಿತಿಗೆ ಬಂದು ಮುಟ್ಟಿದೆ. ಐಸ್‌ಕ್ರೀಂ ಉದ್ಯಮಕ್ಕೆ ಕೋವಿಡ್ ನಿರಂತರ ಪ್ರಹಾರ ನಡೆಸುವ ಮೂಲಕ ದೊಡ್ಡ ಉದ್ದಿಮೆದಾರರ ಜತೆಗೆ ಸಣ್ಣ ಉದ್ದಿಮೆದಾರರನ್ನು ಕೂಡ ಕಂಗಾಲು ಮಾಡಿದೆ.
ಇಡೀ ವರ್ಷದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಶೇ.30ರಷ್ಟು ವ್ಯವಹಾರ ನಡೆಯುತ್ತದೆ. ಆದರೆ ಇಂದಿನ ಕೋವಿಡ್ ಲಾಕ್‌ಡೌನ್, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂನಿಂದಾಗಿ ಉದ್ಯಮದಲ್ಲಿ ತಲ್ಲಣಗಳು ಆರಂಭವಾಗಿವೆ.
ರಾಜ್ಯದ್ದೇ 1,200 ಕೋಟಿ ವಹಿವಾಟು
ಅಮೂಲ್, ವಾಲ್ಸ್, ಡೈರಿ ಡೇ, ಹಾಂಗ್ಯೋ, ಅರುಣ್, ನ್ಯಾಚುರಲ್, ಐಡಿಯಲ್, ಜೋಯ್, ಡೈರಿ ರಿಚ್, ಫಾಬ್, ಜಿಆರ್‌ಬಿಯಂತಹ ಕಂಪನಿಗಳು ದೇಶದ ಐಸ್‌ಕ್ರೀಂ ಉದ್ಯಮದಲ್ಲಿ ವಾರ್ಷಿಕ 1,200 ಕೋಟಿ ರೂ.ನಷ್ಟು ವ್ಯವಹಾರ ನಡೆಸುತ್ತವೆ. ಇದರಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಬೇಸಿಗೆ, ಸೆಕೆಗೆ ಐಸ್‌ಕ್ರೀಂ ಬಳಕೆ ಕೂಡ ಜಾಸ್ತಿ. ಸಾಮಾನ್ಯವಾಗಿ ಶೇ.30ರಷ್ಟು ವ್ಯವಹಾರ ಈ ಎರಡು ತಿಂಗಳಲ್ಲಿ ನಡೆಯುತ್ತದೆ. ಈ ಬಾರಿ ಏಪ್ರಿಲ್ ಆರಂಭದಿಂದಲ್ಲೇ ಉದ್ಯಮಕ್ಕೆ ಶನಿದೆಸೆ ವಕ್ಕರಿಸಿದೆ ಎನ್ನುತ್ತಾರೆ ಐಸ್‌ಕ್ರೀಂ ಉದ್ಯಮಿಗಳು.
"ಮಾರ್ಚ್‌ನಲ್ಲಿ ಎಲ್ಲ ಐಸ್‌ಕ್ರೀಂ ಉದ್ಯಮಕ್ಕೆ ಉತ್ತಮ ಬಿಸಿನೆಸ್ ಇತ್ತು. ಆದರೆ ಕಳೆದ 15 ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವ್ಯವಹಾರ ಕುಸಿದಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲ. ಹೀಗೆ ಸುಮಾರು 7 ತಿಂಗಳು ಯಾವುದೇ ವಹಿವಾಟಿಲ್ಲದೆ ಉದ್ಯಮ ಮುನ್ನಡೆಯಬೇಕಿದೆ," ಎನ್ನುತ್ತಾರೆ ಹಾಂಗ್ಯೋ ಐಸ್‌ಕ್ರೀಂನ ಎಂಡಿ ಹಾಗೂ ಭಾರತೀಯ ಐಸ್‌ಕ್ರೀಂ ಉತ್ಪಾದಕ ಸಂಘ (ಐಐಸಿಎಂಎ) ಖಜಾಂಚಿ ಪ್ರದೀಪ್ ಜಿ. ಪೈ.
"ಹೈನುಗಾರಿಕೆಯಲ್ಲಿ ಹಾಲು, ಮೊಸರು, ತುಪ್ಪ ಬಿಟ್ಟರೆ ಐಸ್‌ಕ್ರೀಂ ಉದ್ಯಮ ದೇಶದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ತಂದು ಕೊಡುವ ಮೂಲ. ಭಾರತೀಯ ಐಸ್‌ಕ್ರೀಂ ಮಾರುಕಟ್ಟೆ 20 ಸಾವಿರ ಕೋಟಿ ರೂ.ವಹಿವಾಟು ನಡೆಸಿದೆ. 2021ರಿಂದ 2026ರ ಅವಧಿಯಲ್ಲಿ ಶೇ.14ರಷ್ಟು ಪ್ರಗತಿ ಕಾಣುತ್ತದೆ ಎನ್ನುವ ಲೆಕ್ಕಾಚಾರವಿತ್ತು," ಎಂದು ವಿವರಿಸುತ್ತಾರೆ ಡೈರಿ ಡೇ ಮಾಲಿಕರು ಹಾಗೂ ಐಐಸಿಎಂಎ ಉಪಾಧ್ಯಕ್ಷರಾದ ಎ. ಬಾಲರಾಜು.