ಜುಲೈ 28ರಂದು ಮಮತಾ ನೇತೃತ್ವದಲ್ಲಿ ಪ್ರತಿಪಕ್ಷ ಮುಖಂಡರ ಸಭೆ; ರಾಷ್ಟ್ರದಲ್ಲಿ ಬಿಜೆಪಿ ಕಟ್ಟಿಹಾಕಲು ರಣತಂತ್ರ

ಬಿಜೆಪಿ ಎದುರಾಳಿ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಈಗಾಗಲೇ ಚಾಲನೆ ದೊರೆತಾಗಿದೆ. ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ನೇತೃತ್ವದಲ್ಲಿ ಹಲವು ಬಾರಿ ಸಭೆ ನಡೆದಿದೆ. ಹಿಂದಿನ ಆ ಎಲ್ಲಾ ಸಭೆಗಳಿಗೆ ನಾಯಕರ ನಿವಾಸಗಳೇ ವೇದಿಕೆಯಾಗಿದ್ದವು. ‘ಆದರೆ ಈ ಬಾರಿ ಮಮತಾ ನೇತೃತ್ವದ ಸಭೆ ಭಿನ್ನವಾಗಿರಲಿದೆ. ನಾಯಕರ ನಿವಾಸದ ಬದಲಿಗೆ ಬಂಗ ಭವನ ಆಯ್ಕೆ ಮಾಡಿಕೊಳ್ಳಲಾಗಿದೆ. ಪವಾರ್‌, ಚಿದಂಬರಂ, ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

ಜುಲೈ 28ರಂದು ಮಮತಾ ನೇತೃತ್ವದಲ್ಲಿ ಪ್ರತಿಪಕ್ಷ ಮುಖಂಡರ ಸಭೆ; ರಾಷ್ಟ್ರದಲ್ಲಿ ಬಿಜೆಪಿ ಕಟ್ಟಿಹಾಕಲು ರಣತಂತ್ರ
Linkup
ಕೋಲ್ಕೊತಾ: ಲೋಕಸಭೆ ಚುನಾವಣಾ ಸಮರಕ್ಕೆ ಇನ್ನೂ ಮೂರು ವರ್ಷ ಬಾಕಿ ಉಳಿದಿರುವಾಗಲೇ ಪ್ರತಿಪಕ್ಷಗಳ ಪಾಳಯದಲ್ಲಿ ಸಮರ ಸಿದ್ಧತೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವಳಿ ಹತ್ತಿಕ್ಕಲು ಸಜ್ಜಾಗುತ್ತಿರುವ ಮೈತ್ರಿಕೂಟಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸಾರಥ್ಯ ವಹಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಬರುವ ಬುಧವಾರ ದಿಲ್ಲಿಯ 'ಬಂಗ ಭವನ'ದಲ್ಲಿ ಎದುರಾಳಿ ಪಕ್ಷಗಳ ಪ್ರಮುಖರ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಂದ ಎದುರಾದ ಸವಾಲನ್ನು ಹಿಮ್ಮೆಟ್ಟಿ ಆತ್ಮವಿಶ್ವಾಸದಲ್ಲಿರುವ ದೀದಿಗೆ ರಾಷ್ಟ್ರ ರಾಜಕಾರಣದಲ್ಲೂ ಬಿಜೆಪಿಯನ್ನು ಕಟ್ಟಿ ಹಾಕುವ ಉತ್ಸಾಹ ಬಂದಿದೆ. ಸದ್ಯ ರಾಷ್ಟ್ರ ಮಟ್ಟದಲ್ಲಿ ಮೋದಿಯಂತೆ ಜನಪ್ರಿಯತೆ ಪಡೆದಿರುವ ಪಕ್ಷ ಅಥವಾ ನಾಯಕತ್ವ ಇಲ್ಲ. ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಎರಡು ಬಾರಿ ಪ್ರಯೋಗಕ್ಕೆ ಒಳಗಾಗಿ ವಿಫಲಗೊಂಡಿದ್ದಾರೆ. ಉಳಿದ ನಾಯಕರಿಗೆ ಮೋದಿ ಜನಪ್ರಿಯತೆ ಎದುರಿಸುವುದು ಅಸಾಧ್ಯ ಅನ್ನಿಸಿದೆ. ಹೀಗಾಗಿ ಈಗ ಬಂಗಾಳ ಗೆದ್ದ ದೀದಿ ಭುಜ ತಟ್ಟಿ ನಿಂತಿದ್ದಾರೆ. ರಾಜ್ಯ ಚುನಾವಣೆ ಜಯಿಸಿ, ಸತತ ಮೂರನೇ ಅವಧಿಗೆ ಸಿಎಂ ಪಟ್ಟ ಅಲಂಕರಿಸಿದ ಅವರು, ಜುಲೈ 26ರಿಂದ 30ರವರೆಗೆ ದಿಲ್ಲಿ ಪ್ರವಾಸ ಕೈಗೊಂಡಿದ್ದಾರೆ. ‘ಮೊದಲು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ, ರಾಜ್ಯದ ಅಭಿವೃದ್ಧಿ ಪೂರಕ ಅನುದಾನ ಬಿಡುಗಡೆ ಕುರಿತು ಚರ್ಚಿಸಲಿದ್ದಾರೆ. ಅದಾದ ಬಳಿಕ ಜುಲೈ 28ರಂದು ಮಧ್ಯಾಹ್ನ 3 ಗಂಟೆಗೆ ಪ್ರತಿಪಕ್ಷ ನಾಯಕರ ಸಭೆ ನಡೆಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಇದು ಭಿನ್ನ ಸಭೆ: ಬಿಜೆಪಿ ಎದುರಾಳಿ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಈಗಾಗಲೇ ಚಾಲನೆ ದೊರೆತಾಗಿದೆ. ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ನೇತೃತ್ವದಲ್ಲಿ ಹಲವು ಬಾರಿ ಸಭೆ ನಡೆದಿದೆ. ಹಿಂದಿನ ಆ ಎಲ್ಲಾ ಸಭೆಗಳಿಗೆ ನಾಯಕರ ನಿವಾಸಗಳೇ ವೇದಿಕೆಯಾಗಿದ್ದವು. ‘ಆದರೆ ಈ ಬಾರಿ ಮಮತಾ ನೇತೃತ್ವದ ಸಭೆ ಭಿನ್ನವಾಗಿರಲಿದೆ. ನಾಯಕರ ನಿವಾಸದ ಬದಲಿಗೆ ಬಂಗ ಭವನ ಆಯ್ಕೆ ಮಾಡಿಕೊಳ್ಳಲಾಗಿದೆ. ಪವಾರ್‌, ಚಿದಂಬರಂ, ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ. ಜುಲೈ 21ರಂದೇ ದೀದಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ ನಡೆದಿತ್ತು. ಹುತಾತ್ಮರ ದಿನದ ಕಾರ್ಯಕ್ರಮದ ನೆಪದಲ್ಲಿ ಅಂದು ದೀದಿ, ರಾಷ್ಟ್ರ ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದಿನ ವರ್ಚುವಲ್‌ ಕಾರ್ಯಕ್ರಮದಲ್ಲಿ ಎನ್‌ಸಿಪಿಯ ಶರದ್‌ ಪವಾರ್‌ ಮತ್ತು ಸುಪ್ರಿಯಾ ಸುಳೆ, ಕಾಂಗ್ರೆಸ್‌ನ ಪಿ.ಚಿದಂಬರಂ ಹಾಗೂ ದಿಗ್ವಿಜಯ್‌ ಸಿಂಗ್‌, ಸಮಾಜವಾದಿ ಪಾರ್ಟಿಯ ರಾಮ್‌ಗೋಪಾಲ್‌ ವರ್ಮಾ ಮತ್ತು ಜಯಾ ಬಚ್ಚನ್‌, ಡಿಎಂಕೆಯ ತಿರುಚ್ಚಿ ಶಿವ, ಟಿಆರ್‌ಎಸ್‌ನ ಕೆ.ಕೇಶವ ರಾವ್‌, ಆಪ್‌ನ ಸಂಜಯ್‌ ಸಿಂಗ್‌, ಆರ್‌ಜೆಡಿಯ ಮನೋಜ್‌ ಝಾ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಮತ್ತು ಅಕಾಲಿ ದಳದ ಬಲ್ವಿಂದರ್‌ ಸಿಂಗ್‌ ಭುಂದೇರ್‌ ಪಾಲ್ಗೊಂಡಿದ್ದರು. ಈ ಸಭೆಯ ಬಳಿಕ ಚುನಾವಣಾ ರಣತಂತ್ರ ಪರಿಣತ ಪ್ರಶಾಂತ್‌ ಕಿಶೋರ್‌ ಅವರು ಪವಾರ್‌, ರಾಹುಲ್‌ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಜುಲೈ 22ರಂದು ಪವಾರ್‌ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆದಿತ್ತು. ಇದರಲ್ಲಿ ಮೋದಿ ಕಟು ವಿಮರ್ಶಕ ಯಶವಂತ ಸಿನ್ಹಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ಎಲ್ಲಾ ಸಭೆಗಳಿಗೆ ಪ್ರಮುಖ ತಿರುವು ಒದಗಿಸುವಂತಹ ಸಭೆ ಬುಧವಾರ ನಡೆಯಲಿದೆ. ಅಂದು ಮಮತಾ ಅವರು ಪ್ರತಿಪಕ್ಷಗಳ ಒಗ್ಗೂಡಿಕೆಯ ಸೂತ್ರ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.