ಚಂಡೀಗಢ: ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ದಲಿತ ಸಮುದಾಯದ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಆಯ್ಕೆ ಮಾಡಲಾಗಿದೆ.
ನಿರ್ಗಮಿತ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಜತೆಗಿನ ಸಂಘರ್ಷದಲ್ಲಿ ಸಿಂಗ್ 'ಪದತ್ಯಾಗ'ದಿಂದಾಗಿ ಗೆದ್ದು ಬೀಗಿದ್ದ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಚರಣ್‌ಜಿತ್ ಆಯ್ಕೆಯಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವುದು ಸಾಬೀತಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿರುವ ಚರಣ್‌ಜಿತ್ ಅವರು, ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಎಐಸಿಸಿಯಲ್ಲಿ ಪಂಜಾಬ್ ಉಸ್ತುವಾರಿಯಾಗಿರುವ ಹರೀಶ್ ರಾವತ್, ರಾಜ್ಯದ ವೀಕ್ಷಕರಾಗಿದ್ದ ಅಜಯ್ ಮಾಕೇನ್ ಮತ್ತು ಹರೀಶ್ ಚೌಧರಿ ಅವರು ದಿನವಿಡೀ ಹೊಸ ಮುಖ್ಯಮಂತ್ರಿ ಆಯ್ಕೆಗೆ ಕಸರತ್ತು ನಡೆಸಿದರು. ಒಮ್ಮತದ ಅಭ್ಯರ್ಥಿ ಆಯ್ಕೆ ಸಾಧ್ಯವಾಗದ ಕಾರಣ ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಯಿತು.
ಸಾಕಷ್ಟು ಚರ್ಚೆ, ಲೆಕ್ಕಾಚಾರ, ಜಾತಿ ಸಮೀಕರಣ, ಪ್ರತಿಪಕ್ಷಗಳ 'ದಲಿತ ನಡೆ' ಪರಿಣಾಮಗಳ ಬಗ್ಗೆ ವಿಶ್ಲೇಷಣೆ ನಡೆಸಿದ ಬಳಿಕ ಸರ್ವಸಮ್ಮತ ಅಭ್ಯರ್ಥಿಯಾಗಿ 49 ವರ್ಷದ ಚರಣ್‌ಜಿತ್ ಅವರನ್ನು ಆಯ್ಕೆ ಮಾಡಲಾಯಿತು. ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಪಿಪಿಸಿಸಿ ನಿಕಟಪೂರ್ವ ಅಧ್ಯಕ್ಷ ಸುನೀಲ್ ಜಾಖಡ್, ಹಾಲಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಕ್ಯಾ.ಅಮರೀಂದರ್ ಸಂಪುಟದಲ್ಲಿ ಸಚಿವರಾಗಿದ್ದ ಸುಖ್‌ಜಿಂದರ್ ಸಿಂಗ್ ರಾಂಧ್ವಾ ಕುರಿತು ಪಕ್ಷದ ವೀಕ್ಷಕರು ಪ್ರತಿ ಶಾಸಕರು, ಸಂಸದರು, ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದರು. ಒಂದು ಹಂತದಲ್ಲಿ ಸುಖಜಿಂದರ್ ಆಯ್ಕೆ ಖಚಿತ ಎನ್ನುವ ವಾತಾವರಣವೂ ನಿರ್ಮಾಣವಾಯಿತು. ನಡುವೆ ಹಿರಿಯ ನಾಯಕಿ ಅಂಬಿಕಾ ಸೋನಿ ಹೆಸರೂ ಪ್ರಸ್ತಾಪವಾಯಿತು. ಆದರೆ ಖುದ್ದು ಅಂಬಿಕಾ ಮುಖ್ಯಮಂತ್ರಿಯಾಗಲು ನಿರಾಕರಿಸಿದ್ದರಿಂದ ಸಂಜೆ ವೇಳೆಗೆ ಅಚ್ಚರಿಯ ಅಭ್ಯರ್ಥಿಯಾಗಿ ಚರಣ್‌ಜಿತ್ ಹೆಸರು ಘೋಷಿಸಲಾಯಿತು. ಅದಕ್ಕೆ ಸಿಧು ಸಹ ಒಪ್ಪಿಗೆ ಸೂಚಿಸಿದರು.
ಕೊನೆ ಕ್ಷಣದ ಆಯ್ಕೆ: ಕಾಂಗ್ರೆಸ್‌ನಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಜಟಿಲವಾಗುತ್ತಿದ್ದಂತೆಯೇ ಪ್ರತಿಪಕ್ಷಗಳಾದ ಬಿಜೆಪಿ, ಶಿರೋಮಣಿ ಅಕಾಲಿದಳ ಮತ್ತು ಆಮ್ ಆದ್ಮಿ ಪಾರ್ಟಿ 'ದಲಿತ ದಾಳ' ಉರುಳಿಸಿದವು. ಪಕ್ಷ ಅಧಿಕಾರಕ್ಕೆ ಬಂದರೆ ದಲಿತರನ್ನೇ ಮುಖ್ಯಮಂತ್ರಿ ಮಾಡುವುದಾಗಿ ಬಿಜೆಪಿ ಘೋಷಿಸಿದರೆ, ಉಪ ಮುಖ್ಯಮಂತ್ರಿ ಪದವಿಗೆ ದಲಿತರನ್ನೇ ಆಯ್ಕೆ ಮಾಡಲಾಗುವುದು ಎಂದು ಅಕಾಲಿದಳ, ಆಪ್ ಪ್ರಕಟಿಸಿದವು. ಅಕಾಲಿದಳ- ಬಿಎಸ್ಪಿ ಜತೆ ಈಗಾಗಲೇ ಮೈತ್ರಿ ಏರ್ಪಟ್ಟಿದೆ. ಈ ಅನಿರೀಕ್ಷಿತ ನಡೆಯಿಂದಾಗಿ ಕಾಂಗ್ರೆಸ್ ಸಹ ಕೊನೆಕ್ಷಣದಲ್ಲಿ ನಿರ್ಧಾರ ಬದಲಿಸಿ ದಲಿತ ನಾಯಕನನ್ನೇ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ತೀರ್ಮಾನ ಕೈಗೊಂಡಿತು.
ಸಿಧು ಲೆಕ್ಕಾಚಾರವೇನು?: ಸುಖಜಿಂದರ್ ಸಿಂಗ್ ಬಗ್ಗೆ ಹೈಕಮಾಂಡ್ ಒಲವು ತೋರಿಸುತ್ತಿದ್ದಂತೆಯೇ ಖುದ್ದು ಸಿಧು ಅವರೇ ವಿರೋಧಿಸಿದರು ಎಂದು ಹೇಳಲಾಗಿದೆ. ನಾಲ್ಕೈದು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಆಗ ತಮ್ಮನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷ ಘೋಷಿಸಿದರೆ, ಅದಕ್ಕೆ ಸುಖಜಿಂದರ್ ಆಕ್ಷೇಪ ವ್ಯಕ್ತಪಡಿಸಬಹುದು ಎಂಬ ಲೆಕ್ಕಾಚಾರವೂ ಸಿಧು ನಡೆಯ ಹಿಂದೆ ಇದೆ. ಮಿಗಿಲಾಗಿ ಸುಖಜಿಂದರ್ ಒಂದು ಕಾಲದಲ್ಲಿ ಕ್ಯಾ.ಅಮರೀಂದರ್ ಸಿಂಗ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಕ್ಯಾ.ಅಮರೀಂದರ್-ಸಿಧು ಸಂಘರ್ಷದಲ್ಲಿ ಸಿಧು ಮೇಲುಗೈ ಸಾಧಿಸುತ್ತಿರುವುದು ಸ್ಪಷ್ಟವಾಗುತ್ತಿದ್ದಂತೆಯೇ ಪಾಳಯ ಬದಲಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ 'ತ್ಯಾಗ' ಮಾಡುವಂತೆ ಚರಣ್‌ಜಿತ್ ಮನವೊಲಿಸುವುದು ಸುಲಭ. ಅಲ್ಲದೆ, ಕ್ಯಾ.ಅಮರೀಂದರ್ ಸಿಂಗ್ ಬದಲಾವಣೆಗೆ ಶುರುವಿನಿಂದಲೂ ಒತ್ತಾಯಿಸುತ್ತಿದ್ದವರಲ್ಲಿ ಚರಣ್‌ಜಿತ್ ಪ್ರಮುಖರು. ಈ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಚರಣ್‌ಜಿತ್ ಆಯ್ಕೆಗೆ ಸಿಧು ಒಪ್ಪಿಗೆ ಸೂಚಿಸಿದರು ಎಂದು ಹೇಳಲಾಗಿದೆ.