ವಿಧಿಯಾಟ: ದೋಣಿ ದುರಂತದಲ್ಲಿ ಹೆಣ್ಣುಮಕ್ಕಳನ್ನು ಕಳೆದುಕೊಂಡ ದಿನವೇ ಅವಳಿ ಮಕ್ಕಳನ್ನು ಪಡೆದ ದಂಪತಿ!

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ದೋಣಿ ದುರಂತದಲ್ಲಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕಳೆದುಕೊಂಡ ದಿನವೇ, ದಂಪತಿ ಅವಳಿ ಹೆಣ್ಣುಮಕ್ಕಳನ್ನು ಪಡೆದ ವಿಸ್ಮಯಕಾರಿ ಘಟನೆ ನಡೆದಿದೆ.

ವಿಧಿಯಾಟ: ದೋಣಿ ದುರಂತದಲ್ಲಿ ಹೆಣ್ಣುಮಕ್ಕಳನ್ನು ಕಳೆದುಕೊಂಡ ದಿನವೇ ಅವಳಿ ಮಕ್ಕಳನ್ನು ಪಡೆದ ದಂಪತಿ!
Linkup
ವಿಶಾಖಪಟ್ಟಣಂ: ಕೆಲವೊಂದು ವಿಧಿಯ ಆಟಗಳು ಎಷ್ಟು ಅನಿರೀಕ್ಷಿತ ಮತ್ತು ವಿಸ್ಮಯಕಾರಿಯಾಗಿರುತ್ತವೆ ಎನ್ನುವುದಕ್ಕೆ ಉದಾಹರಣೆ ಇದು. ಮಕ್ಕಳನ್ನು ಕಸಿದುಕೊಂಡಿದ್ದ ದಿನವೇ, ದಂಪತಿಗೆ ಮತ್ತೆರಡು ಮಕ್ಕಳನ್ನು ವಿಧಿ ಕರುಣಿಸಿದೆ. ಇದು ಕಾಕತಾಳೀಯವೋ ಅಥವಾ ದೈವಲೀಲೆಯೋ ಎಂಬ ಚರ್ಚೆಗೆ ಉತ್ತರ ಸಿಗುವುದು ಕಷ್ಟವಾಗಬಹುದು. ಆದರೆ ಪವಾಡವೆಂದು ಪರಿಗಣಿಸಬಹುದಾದ ಘಟನೆಯಿದು. 2019ರ ಸೆಪ್ಟೆಂಬರ್ 15ರಂದು ಆಂಧ್ರಪ್ರದೇಶದ ಗೋದಾವರಿ ನದಿಯಲ್ಲಿ ನಡೆದಿದ್ದ ಭೀಕರ ದೋಣಿ ದುರಂತದಲ್ಲಿ ವಿಶಾಖಪಟ್ಟಣಂ ನಿವಾಸಿಗಳು ಟಿ ಅಪ್ಪಲ ರಾಜು ಮತ್ತು ಭಾಗ್ಯಲಕ್ಷ್ಮಿ ದಂಪತಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕಳೆದುಕೊಂಡಿದ್ದರು. ಸುಮಾರು 50 ಮಂದಿ ಈ ಘೋರ ದುರಂತದಲ್ಲಿ ನೀರಿನಲ್ಲಿ ಮುಳುಗಿಹೋಗಿದ್ದರು. ಅವರಲ್ಲಿ ಈ ನತದೃಷ್ಟ ದಂಪತಿಯ 3 ಮತ್ತು 1 ವರ್ಷದ ಪುಟಾಣಿಗಳೂ ಸೇರಿದ್ದರು. ಈ ದುರಂತ ನಡೆದು ಸರಿಯಾಗಿ ಎರಡು ವರ್ಷಕ್ಕೆ, ಅಂದರೆ 2021ರ ಸೆಪ್ಟೆಂಬರ್ 15ರಂದೇ ಭಾಗ್ಯಲಕ್ಷ್ಮಿ ಮಕ್ಕಳಿಗೆ ಜನ್ಮನೀಡಿದ್ದಾರೆ. ವಿಧಿ ಬರಹವೆನ್ನುವುದು ಇದನ್ನೇ. ಏಕೆಂದರೆ ಈ ಅವಳಿ ಎರಡೂ . ತಮ್ಮ ಎರಡೂ ಹೆಣ್ಣುಮಕ್ಕಳನ್ನು ಕಳೆದುಕೊಂಡ ದಿನವೇ ಅವಳಿ ಹೆಣ್ಣುಮಕ್ಕಳನ್ನು ದೇವರೇ ಕರುಣಿಸಿದ್ದಾನೆ ಎಂದು ಈ ದಂಪತಿ ಭಾವುಕರಾಗಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದ ದುರಂತ, ಎಂತಹವರ ಎದೆಯನ್ನೂ ನಡುಗಿಸುವಂತಿತ್ತು. ಗಾಜು ತಯಾರಿಸುವ ಕಂಪೆನಿಯೊಂದರಲ್ಲಿ ಅಪ್ಪಲ ರಾಜು (32) ಕೆಲಸ ಮಾಡುತ್ತಿದ್ದಾರೆ. ಗೋದಾವರಿ ನದಿಯಲ್ಲಿ ಸಾಗುತ್ತಿದ್ದ ಡಬಲ್ ಡೆಕ್ಕರ್ ಲಾಂಚ್ ನಡು ನೀರಿನಲ್ಲಿ ಸುಳಿಗೆ ಸಿಲುಕಿ ಛಿದ್ರಗೊಂಡಿತ್ತು. ಅಪ್ಪಲ ರಾಜು ಹಾಗೂ ಭಾಗ್ಯಲಕ್ಷ್ಮಿ ದಂಪತಿ ಕೂಡ ಇದೇ ದೋಣಿಯಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಭಾಗ್ಯಲಕ್ಷ್ಮಿ ಅವರಲ್ಲಿ ತೀವ್ರ ಬಳಲಿಕೆ ಉಂಟಾಗಿದ್ದರಿಂದ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದುಗೊಳಿಸಿದ್ದರು. ಆದರೆ ಮಕ್ಕಳಾದ ಗೀತಾ ವೈಷ್ಣವಿ (3) ಮತ್ತು ಧಾತ್ರಿ ಅನನ್ಯಾ (1)ರನ್ನು ಅಪ್ಪಲ ರಾಜು ಅವರ ತಾಯಿಯ ಜತೆಗೆ ಭದ್ರಾಚಲಂನ ಶ್ರೀ ರಾಮ ದೇವಸ್ಥಾನಕ್ಕೆ ಯಾತ್ರೆಗೆ ಕಳುಹಿಸಿದ್ದರು. ಆ ದೋಣಿಯಲ್ಲಿ ಅವರ ಇನ್ನೂ ಅನೇಕ ಸಂಬಂಧಿಕರು ಇದ್ದರು. ತಮಗೆ ಸಾಧ್ಯವಾಗದಿದ್ದರೂ ತಮ್ಮ ಪುಟಾಣಿಗಳು ದೇವರ ಸನ್ನಿಧಾನಕ್ಕೆ ಹೋಗಿ ಬರಲಿ, ಅವರಿಗೆ ಪುಣ್ಯ ಲಭಿಸಲಿ ಎನ್ನುವುದು ಅವರ ಬಯಕೆಯಾಗಿತ್ತು. ಆದರೆ ಹಾಗೆ ಹೊರಟ ಪುಟಾಣಿಗಳು ದೇವರ ಸಾನ್ನಿಧ್ಯಕ್ಕೇ ಹೋದಂತಿತ್ತು. ಮರಳಿ ಜೀವಂತವಾಗಿ ಬರಲಿಲ್ಲ. ಅಪ್ಪಲ ರಾಜು ಅವರ ಸಂಬಂಧಿಕರಾದ ನಾಲ್ಕು ಕುಟುಂಬಗಳ 11 ಮಂದಿ ಆ ದೋಣಿಯಲ್ಲಿದ್ದರು. ಅವರಲ್ಲಿ ಬದುಕುಳಿದಿದ್ದು ಒಬ್ಬರು ಮಾತ್ರ. ಈ ಆಘಾತ ಅವರನ್ನು ಕಳೆದ ಎರಡು ವರ್ಷಗಳಿಂದಲೂ ಘೋರವಾಗಿ ಕಾಡುತ್ತಿತ್ತು. ಕೊನೆಗೂ ಆ ಭೀಕರ ದುರಂತದ ದಿನವೇ ಮನೆಯಲ್ಲಿ ಸಂಭ್ರಮ ಮೂಡಿದೆ. ಅಕ್ಕಂದಿರಂತೆಯೇ ಇದ್ದಾರೆ!'ಈ ಅವಳಿ ಮಕ್ಕಳಿಬ್ಬರೂ ಸತ್ತುಹೋದ ತಮ್ಮ ಅಕ್ಕಂದಿರಂತೆಯೇ ಇವೆ. ಎರಡೂ ಮಕ್ಕಳು ಆರೋಗ್ಯದಿಂದ ಇವೆ. ತಮ್ಮ ಮೊದಲ ಮೊಮ್ಮಗಳ ಕುರಿತು ಹೊತ್ತುಕೊಂಡಿದ್ದ ಹರಕೆ ತೀರಿಸಲು ಶ್ರೀ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ ಕಳುಹಿಸಲು ಬಯಸಿದ್ದರು. ಅದಕ್ಕಾಗಿ ಅವರನ್ನು ಆ ನತದೃಷ್ಟಕರ ದೋಣಿಯಲ್ಲಿ ಕಳುಹಿಸಲಾಗಿತ್ತು. ನಮ್ಮ 10 ಸಂಬಂಧಿಕರನ್ನು ಕೂಡ ಕಳೆದುಕೊಂಡೆವು. ಈಗ ಮಕ್ಕಳ ಆಗಮನದಿಂದ ಖುಷಿಯಾಗಿದೆ' ಎಂದು ಭಾಗ್ಯಲಕ್ಷ್ಮಿ ಹೇಳಿದ್ದಾರೆ. ವೈದ್ಯರಿಗೆ ಸವಾಲಾಗಿದ್ದ ಪ್ರಕರಣ'ಒಂದು ವರ್ಷದ ಹಿಂದೆ ಈ ದಂಪತಿ ನನ್ನ ಬಳಿ ಬಂದಾಗ ಅವರನ್ನು ಸಮಧಾನಪಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ತಾಯಿಯು ಆಗಲೇ ಟ್ಯೂಬೆಕ್ಟಮಿಗೆ ಒಳಗಾಗಿದ್ದರು. ನಾನು ಅವರಿಗೆ ಐವಿಎಫ್ ಪ್ರಕ್ರಿಯೆಯ ಬಗ್ಗೆ ವಿವರಿಸಿದ್ದೆ. ಮತ್ತು ಚಿಕಿತ್ಸೆ ಆರಂಭಿಸಿದ್ದೆ. ಅಕ್ಟೋಬರ್ 20ರಂದು ಹೆರಿಗೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಸೆ. 15ರಂದೇ ಆಕೆಯಲ್ಲಿ ನೋವು ಕಾಣಿಸಿಕೊಂಡಿತ್ತು' ಎಂದು ಪ್ರಸೂತಿ ವೈದ್ಯೆ ಡಾ. ಸುಧಾ ಪದ್ಮಶ್ರೀ ತಿಳಿಸಿದ್ದಾರೆ.