'ಒಬ್ಬ ಮಹಿಳೆಯಾಗಿ ನೀವು ಹೀಗೆ ಮಾಡಬಹುದೇ?' ಸೋನಿಯಾಗೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಶ್ನೆ

ಮಿಟೂ ಆರೋಪ ಎದುರಿಸುತ್ತಿರುವ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವ ಕ್ರಮ ನಾಚಿಕೆಗೇಡು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಟೀಕಿಸಿದ್ದಾರೆ.

'ಒಬ್ಬ ಮಹಿಳೆಯಾಗಿ ನೀವು ಹೀಗೆ ಮಾಡಬಹುದೇ?' ಸೋನಿಯಾಗೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಶ್ನೆ
Linkup
ಹೊಸದಿಲ್ಲಿ: ನೂತನವಾಗಿ ನೇಮಕಗೊಂಡ ಮುಖ್ಯಮಂತ್ರಿ ಅವರ ರಾಜೀನಾಮೆಗೆ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಅಧ್ಯಕ್ಷೆ ಒತ್ತಾಯಿಸಿದ್ದಾರೆ. ಮೀ ಟೂ ಆರೋಪ ಇರುವಾಗಲೇ ಅಂತಹ ವ್ಯಕ್ತಿಯನ್ನು ಮುಖ್ಯಮಂತ್ರಿ ಹುದ್ದೆಗೆ ನೇಮಕ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಕಿಡಿಕಾರಿದ್ದಾರೆ. 'ಅಂತಹ ವ್ಯಕ್ತಿಯನ್ನು ಪಂಜಾಬ್ ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದು ನಾಚಿಕೆಗೇಡು ಹಾಗೂ ತೀವ್ರ ಆಕ್ಷೇಪಾರ್ಹವಾಗಿದೆ. ಮಹಿಳಾ ಐಎಎಸ್ ಅಧಿಕಾರಿ ಅನುಭವಿಸಿದಂತಹ ಅನುಭವ ಮತ್ತು ಕಿರುಕುಳವನ್ನು ಮತ್ತೊಬ್ಬ ಮಹಿಳೆ ಎದುರಿಸುವುದನ್ನು ನಾವು ಬಯಸುವುದಿಲ್ಲ. ಚನ್ನಿ ಹೊಣೆಗಾರಿಕೆ ಹೊತ್ತುಕೊಳ್ಳಬೇಕು ಮತ್ತು ಸಿಎಂ ಹುದ್ದೆಯಿಂದ ಕೆಳಕ್ಕಿಳಿಯಬೇಕು' ಎಂದು ಆಗ್ರಹಿಸಿದ್ದಾರೆ. 'ಪಂಜಾಬ್ ಮಹಿಳಾ ಆಯೋಗವು ಈ ಪ್ರಕರಣವನ್ನು ಸ್ವಯಂ ಪ್ರೇರಣೆಯಿಂದ ಪರಿಗಣಿಸಿದ್ದರೂ, ರಾಜ್ಯ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. 2018ರಲ್ಲಿ ಮಹಿಳಾ ಐಎಎಸ್ ಅಧಿಕಾರಿಗೆ ಅನುಚಿತ ಸಂದೇಶ ರವಾನಿಸಿದ ಮೀ ಟೂ ಆರೋಪಿಯಾಗಿರುವ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್ ಸಿಎಂ ಆಗಿ ನೇಮಿಸಿರುವುದು ನನಗೆ ಆಘಾತ ಮೂಡಿಸಿದೆ' ಎಂದು ರೇಖಾ ಶರ್ಮಾ ಹೇಳಿದ್ದಾರೆ. 'ಮಹಿಳಾ ಭದ್ರತೆಗೆ ಬೆದರಿಕೆ ಹಾಕಿರುವವರೇ ರಾಜ್ಯದ ಅಧಿಕಾರ ಹಿಡಿಯುವ ಸ್ಥಾನದಲ್ಲಿ ಕುಳಿತಿರುವಾಗ ರಾಜ್ಯದಲ್ಲಿನ ಮಹಿಳೆಯರ ಸುರಕ್ಷತೆ ಹೇಗಿರಬಹುದು ಎಂದು ಕಲ್ಪನೆ ಮಾಡಿಕೊಳ್ಳಲೂ ಆಗುವುದಿಲ್ಲ. ರಾಜ್ಯದಲ್ಲಿ ಐಎಎಸ್ ಅಧಿಕಾರಿಗೇ ನ್ಯಾಯ ನಿರಾಕರಿಸಲಾಗಿದೆ ಎಂದರೆ, ಪಂಜಾಬ್‌ನ ಸಾಮಾನ್ಯ ಮಹಿಳೆಯರು ಸುರಕ್ಷಿತರಾಗಿದ್ದಾರೆಂಬ ಖಾತರಿಯನ್ನು ಹೇಗೆ ತಾನೆ ನೀಡಲಿದೆ?' ಎಂದು ಪ್ರಶ್ನಿಸಿದ್ದಾರೆ. 'ಒಬ್ಬ ಮಹಿಳೆಯಾಗಿ, ಕಾಂಗ್ರೆಸ್ ಅಧ್ಯಕ್ಷರು ಚನ್ನಿ ವಿರುದ್ಧ ಮಾಡಲಾದ ಆರೋಪಗಳನ್ನು ಪರಿಗಣಿಸಿಲ್ಲ ಮತ್ತು ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ' ಎಂದು ಸೋನಿಯಾ ಗಾಂಧಿ ವಿರುದ್ಧ ಟೀಕಿಸಿದ್ದಾರೆ. ಚನ್ನಿ ಪ್ರಮಾಣವಚನಅಮರಿಂದರ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಸುಖ್ಜಿಂದರ್ ಸಿಂಗ್ ರಾಂಧವ ಮತ್ತು ಓಂ ಪ್ರಕಾಶ್ ಸೋನಿ ಅವರು ಉಪ ಮುಖ್ಯಮಂತ್ರಿಗಳಾಗಿ ಇದೇ ವೇಳೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.