ಪೆಗಾಸಸ್‌ ಬೇಹುಗಾರಿಕೆ ಆರೋಪ, ಸರ್ವಪಕ್ಷ ಸಭೆಗೆ ಮಮತಾ ಆಗ್ರಹ

ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿದ ಮಮತಾ ಬ್ಯಾನರ್ಜಿ, "ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿಯೇ ಪೆಗಾಸಸ್‌ ತನಿಖೆ ನಡೆಸಬೇಕು," ಎಂದು ಒತ್ತಾಯಿಸಿದ್ದಾರೆ.

ಪೆಗಾಸಸ್‌ ಬೇಹುಗಾರಿಕೆ ಆರೋಪ, ಸರ್ವಪಕ್ಷ ಸಭೆಗೆ ಮಮತಾ ಆಗ್ರಹ
Linkup
ಹೊಸದಿಲ್ಲಿ: ಬೇಹುಗಾರಿಕೆ ಆರೋಪದ ಕುರಿತು ಚರ್ಚಿಸಲು ಪ್ರಧಾನಿ ಅವರು ಸರ್ವಪಕ್ಷ ಸಭೆ ಕರೆಯಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ಅವರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿದ್ದ ಮಮತಾ, ''ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿಯೇ ಪೆಗಾಸಸ್‌ ತನಿಖೆ ನಡೆಸಬೇಕು,'' ಎಂದೂ ಒತ್ತಾಯಿಸಿದರು. ಪ್ರಧಾನಿ ಭೇಟಿ ಜತೆ ಈ ಎರಡು ವಿಷಯಗಳ ಜತೆ, ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ನಿರೋಧಕ ಲಸಿಕೆ ಪೂರೈಸುವಂತೆ ಆಗ್ರಹಿಸಿದ್ದಾಗಿಯೂ ತಿಳಿಸಿದರು. ಕಮಲ್‌ನಾಥ್‌, ಆನಂದ್‌ ಶರ್ಮಾ ಭೇಟಿಕಾಂಗ್ರೆಸ್‌ ನಾಯಕರಾದ ಕಮಲ್‌ನಾಥ್‌ ಮತ್ತು ಆನಂದ್‌ ಶರ್ಮಾ ಅವರ ಜತೆಗೂ ಮಮತಾ ಪ್ರತ್ಯೇಕವಾಗಿ ಸಭೆ ನಡೆಸಿದರು. "ರಾಜಕೀಯ ತಂತ್ರಗಾರಿಕೆ ಕುರಿತು ಚರ್ಚಿಸಿಲ್ಲ, ವಿಧಾನಸಭೆ ಚುನಾವಣೆ ಗೆಲುವಿಗಾಗಿ ಮಮತಾರನ್ನು ಅಭಿನಂದಿಸಿದೆ," ಎಂದು ಕಮಲ್‌ನಾಥ್‌ ಹೇಳಿದರೆ, "ದೇಶಾದ್ಯಂತ ಅಸ್ತಿತ್ವ ಹೊಂದಿರುವ ಕಾಂಗ್ರೆಸ್‌ ಅನ್ನು ಹೊರಗಿಟ್ಟು ಬಿಜೆಪಿ ವಿರುದ್ಧ ಮೈತ್ರಿಕೂಟ ರಚಿಸಲು ಸಾಧ್ಯವೇ ಇಲ್ಲ," ಎಂದು ಆನಂದ್‌ ಶರ್ಮ ಹೇಳಿದರು. ಮಮತಾ ಅವರು ಬುಧವಾರ ಸಂಜೆ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವರು. ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಸಹ ತಾವು ಬುಧವಾರ ಮಮತಾರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಜುಲೈ 28ರಂದು ಮಧ್ಯಾಹ್ನ ಪ್ರತಿಪಕ್ಷ ನಾಯಕರ ಜತೆ ಸಭೆ ನಿಗದಿಯಾಗಿದೆ ಎಂದು ಟಿಎಂಸಿ ತಿಳಿಸಿತ್ತಾದರೂ, ಆ ಕುರಿತು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಮೂರನೇ ಅವಧಿಗೆ ಮುಖ್ಯಮಂತ್ರಿಯಾದ ಬಳಿಕ ಸೋಮವಾರ ಮೊದಲ ಬಾರಿ ಹೊಸದಿಲ್ಲಿಗೆ ಭೇಟಿ ನೀಡಿರುವ ಮಮತಾ ಬ್ಯಾನರ್ಜಿ ಅವರು 2024ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಪರ್ಯಾಯವಾಗಿ ಪ್ರತಿಪಕ್ಷಗಳ ಪ್ರಬಲ ಮೈತ್ರಿಕೂಟ ರಚಿಸುವ ಪ್ರಯತ್ನ ನಡೆಸಲಿದ್ದಾರೆ. ಜುಲೈ 30ರವರೆಗೂ ಅವರು ದಿಲ್ಲಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.