ಪೆಗಾಸಸ್‌ ಹಗರಣ: ಆರೋಪಗಳನ್ನು ಅಲ್ಲಗಳೆದ ಕೇಂದ್ರ..! ತನಿಖೆಗೆ ತಜ್ಞರ ಸಮಿತಿ ನೇಮಕ

ಪೆಗಾಸಸ್‌ ಹಗರಣದಲ್ಲಿ ಕೇಳಿಬಂದಿರುವ ಆರೋಪಗಳನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಕೇಳಿಬಂದಿರುವ ಆರೋಪಗಳ ತನಿಖೆಗೆ ತಜ್ಞರ ಸಮಿತಿ ನೇಮಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅರ್ಜಿಗಳು ಅಪೂರ್ಣ ಹಾಗೂ ದೃಢೀಕರಿಸದ ಮಾಧ್ಯಮ ವರದಿಗಳನ್ನು ಆಧರಿಸಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಪೆಗಾಸಸ್‌ ಹಗರಣ: ಆರೋಪಗಳನ್ನು ಅಲ್ಲಗಳೆದ ಕೇಂದ್ರ..! ತನಿಖೆಗೆ ತಜ್ಞರ ಸಮಿತಿ ನೇಮಕ
Linkup
ಹೊಸದಿಲ್ಲಿ: ದೇಶದಲ್ಲಿ ವಿವಾದ ಸೃಷ್ಟಿಸಿದ್ದ ಪೆಗಾಸಸ್‌ ಫೋನ್‌ ಕದ್ದಾಲಿಕೆ ಹಗರಣದ ತನಿಖೆಗಾಗಿ ತಜ್ಞರ ಸಮಿತಿಯನ್ನು ರಚಿಸುವುದಾಗಿ ತಿಳಿಸಿದೆ. ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವ ಕೇಂದ್ರ ಪೆಗಾಸಸ್‌ನಿಂದ ಫೋನ್‌ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪಗಳನ್ನು ಅಲ್ಲಗಳೆದಿದ್ದು, ಎಲ್ಲ ಆರೋಪಗಳನ್ನು ಪರಿಶೀಲಿಸಲು ರಚಿಸುತ್ತೇವೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಬ್ಬಿಸಿರುವ ತಪ್ಪು ವಿಚಾರಗಳನ್ನು ಹೊಗಲಾಡಿಸುವ ದೃಷ್ಟಿಯಿಂದ ಹಾಗೂ ಅದರಿಂದ ಉದ್ಭವಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಭಾರತ ಸರ್ಕಾರ ತಜ್ಞರ ಸಮಿತಿಯನ್ನು ರಚಿಸುತ್ತದೆ ಎಂದು ತಿಳಿಸಿದೆ. ಈ ಮೂಲಕ ಫೋನ್‌ ಕದ್ದಾಲಿಕೆ ಆರೋಪಗಳನ್ನು ಕೇಂದ್ರ ಸ್ಪಷ್ಟವಾಗಿ ತಳ್ಳಿಹಾಕಿದೆ. ಅಷ್ಟೇ ಅಲ್ಲದೇ ಮಾಧ್ಯಮಗಳ ಸುದ್ದಿಗಳ ಆಧಾರದಲ್ಲಿ ಪೆಗಾಸಸ್‌ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿದ ಅರ್ಜಿಗಳನ್ನು ಕೂಡ ಕೇಂದ್ರ ಸರ್ಕಾರ ಪ್ರಶ್ನಿಸಿದ್ದು, ಆಧಾರ ರಹಿತ ಮಾಧ್ಯಮ ವರದಿಗಳನ್ನು ಹಾಗೂ ದೃಢೀಕರಿಸದ ಅಂಶಗಳನ್ನು ಆಧರಿಸಿ ಅರ್ಜಿ ಸಲ್ಲಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಐಟಿ ಸಚಿವ ಈಗಾಗಲೇ ಸಂಸತ್ತಿನಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಅಫಿಡವಿಟ್‌ ತಿಳಿಸಿದೆ. ಪ್ರತಿಪಕ್ಷದ ನಾಯಕರು, ಪತ್ರಕರ್ತರು ಮುಂತಾದವರ ಫೋನ್‌ಗಳನ್ನು ಪೆಗಾಸಸ್‌ ಸ್ಪೈವೇರ್‌ ಮೂಲಕ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪವನ್ನು ಅಶ್ವಿನಿ ವೈಷ್ಣವ್‌ ತಳ್ಳಿಹಾಕಿದ್ದರು. ಅಮ್ನೆಸ್ಟಿ ವರದಿ ತಪ್ಪುದಾರಿಗೆಳೆಯುವಂತದ್ದು, ಸ್ವತಃ ಎನ್ಎಸ್ಒ ಆರೋಪಗಳನ್ನು ನಿರಾಕರಿಸಿದೆ ಎಂದು ಐಟಿ ಸಚಿವ ಸದನಕ್ಕೆ ಮಾಹಿತಿ ನೀಡಿದ್ದರು. ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಪೆಗಾಸಸ್‌ ಬಗ್ಗೆ ವರದಿ ಪ್ರಕಟಿಸಿದ ನಂತರ ದೇಶದಲ್ಲಿ ಪೆಗಾಸಸ್‌ ಫೋನ್‌ ಕದ್ದಾಲಿಕೆ ಪ್ರಕರಣ ಭಾರೀ ವಿವಾದ ಪಡೆದುಕೊಂಡಿತ್ತು. ರಾಹುಲ್‌ ಗಾಂಧಿ, ಪ್ರಶಾಂತ್‌ ಕಿಶೋರ್‌, ಮಾಜಿ ಇಸಿಐ ಸದಸ್ಯ ಅಶೋಕ್‌ ಲವಾಸ್ಸಾ ಸೇರಿ ಅನೇಕ ಪತ್ರಕರ್ತರು, ರಾಜಕೀಯ ನಾಯಕರ ಮೇಲೆ ಕೇಂದ್ರ ಸರ್ಕಾರ ಪೆಗಾಸಸ್‌ ಸ್ಪೈವೇರ್‌ ಮೂಲಕ ಕದ್ದಾಲಿಕೆ ಮಾಡಿತ್ತು ಎಂದು ಆರೋಪಿಸಲಾಗಿತ್ತು. ಹಗರಣದ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿ ವಕೀಲ ಎಂಎಲ್‌ ಶರ್ಮಾ, ಪತ್ರಕರ್ತರಾದ ಎನ್‌ ರಾಮ್‌ ಮತ್ತು ಶಶಿಕುಮಾರ್‌, ಸಿಪಿಐಎಂ ರಾಜ್ಯಸಭಾ ಸಂಸದ ಜಾನ್‌ ಬ್ರಿಟ್ಟಾಸ್‌ ಸೇರಿ ಅನೇಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಮಾಹಿತಿ ಕೇಳಿ ನೋಟಿಸ್‌ ಜಾರಿ ಮಾಡಿತ್ತು.