ವಿದೇಶಿಗರಿಗೆ ವಿನಾಯಿತಿ ಕೊಡುವುದಾದರೆ ನಮಗೂ ಕೊಡಿ: ಎಲ್ಲರಿಗೂ ಒಂದೇ ನಿಯಮ ಎಂದ ಸೀರಮ್ ಸಂಸ್ಥೆ

ವಿದೇಶಿ ಲಸಿಕೆ ಕಂಪೆನಿಗಳಿಗೆ ಭಾರತದಲ್ಲಿ ಕಾನೂನಾತ್ಮಕ ರಕ್ಷಣೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ. ನಮಗೂ ಕಾನೂನಿನ ರಕ್ಷಣೆ ನೀಡಬೇಕೆಂದು ಸೀರಂ ಸಂಸ್ಥೆ ಬೇಡಿಕೆ ಇರಿಸಿದೆ.

ವಿದೇಶಿಗರಿಗೆ ವಿನಾಯಿತಿ ಕೊಡುವುದಾದರೆ ನಮಗೂ ಕೊಡಿ: ಎಲ್ಲರಿಗೂ ಒಂದೇ ನಿಯಮ ಎಂದ ಸೀರಮ್ ಸಂಸ್ಥೆ
Linkup
ಹೊಸದಿಲ್ಲಿ: ಫೈಜರ್ ಮತ್ತು ಮಾಡೆರ್ನಾ ಕಂಪೆನಿಗಳು ಭಾರತದಲ್ಲಿ ಕಾನೂನು ಕಟ್ಟಳೆಗಳ ಹೊಣೆಗಳಿಂದ ವಿನಾಯಿತಿ ನೀಡಲು ಮನವಿ ಮಾಡಿದ ಬೆನ್ನಲ್ಲೇ, ಕೋವಿಶೀಲ್ಡ್ ಲಸಿಕೆ ಉತ್ಪಾದಕ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ, ತನಗೂ ಇಂತಹ ರಕ್ಷಣೆ ಬೇಕು ಎಂಬ ಬೇಡಿಕೆ ಮುಂದಿಟ್ಟಿದೆ. ಭಾರತದ್ದೇ ಆಗಿರಲಿ ಅಥವಾ ವಿದೇಶದ್ದೇ ಆಗಿರಲಿ ಎಲ್ಲ ಲಸಿಕೆ ತಯಾರಕರಿಗೂ ಒಂದೇ ರೀತಿಯ ರಕ್ಷಣೆ ನೀಡಬೇಕು ಎಂದು ವಾದ ಮುಂದಿಟ್ಟಿದೆ. 'ವಿದೇಶಿ ಕಂಪೆನಿಗಳಿಗೆ ಕಾನೂನಾತ್ಮಕ ಪರಿಹಾರದ ರಕ್ಷಣೆ (ಇಂಡೆಮ್ನಿಟಿ) ನೀಡುವುದಾದರೆ, ಸೀರಂ ಸಂಸ್ಥೆ ಮಾತ್ರವಲ್ಲದೆ ಎಲ್ಲ ಲಸಿಕೆ ಕಂಪೆನಿಗಳಿಗೂ ಅದನ್ನು ಕೊಡಬೇಕು. ಎಲ್ಲರಿಗೂ ನಿಯಮಗಳು ಒಂದೇ ರೀತಿಯಲ್ಲಿರುತ್ತವೆ ಎಂದು ಸೀರಂ ಆಶಿಸುತ್ತದೆ' ಎಂಬುದಾಗಿ ಸಂಸ್ಥೆಯ ಮೂಲಗಳು ತಿಳಿಸಿವೆ. ಭಾರತದಲ್ಲಿ ಪ್ರಸ್ತುತ ಎರಡು ಕಂಪೆನಿಗಳು ಲಸಿಕೆ ನೀಡುತ್ತಿದ್ದು, ಇತ್ತೀಚೆಗೆ ರಷ್ಯಾದ ಸ್ಪುಟ್ನಿಕ್ ಕೂಡ ಸೇರ್ಪಡೆಯಾಗಿವೆ. ಈ ಯಾವ ಕಂಪೆನಿಗೂ ಲಸಿಕೆಗಳಿಂದ ಅಡ್ಡಪರಿಣಾಮ ಅಥವಾ ಬೇರೆ ತೊಂದರೆಗಳಾದ ಸಂದರ್ಭದಲ್ಲಿ ಪರಿಹಾರೋಪಾಯಗಳನ್ನು ನೀಡುವ ಕಾನೂನಿನಿಂದ ವಿನಾಯಿತಿ ನೀಡಿಲ್ಲ. ಆದರೆ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿರುವ ಮಾಡೆರ್ನಾ ಮತ್ತು ಫೈಜರ್‌ನಂತಹ ಅಮೆರಿಕನ್ ಕಂಪೆನಿಗಳು ತಮಗೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿವೆ. ಇದಕ್ಕೆ ಅನುಮೋದನೆ ನೀಡಿರುವುದಾಗಿಯೂ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಎ) ತಿಳಿಸಿದೆ. ಕಂಪೆನಿಯೊಂದರ ಲಸಿಕೆ ಬಳಸಿದ್ದಕ್ಕೆ ಸಂಬಂಧಿಸಿದಂತೆ ಯಾವುದೇ ಆರೋಪ ಅಥವಾ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕಂಪೆನಿಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವ ವಿಚಾರದಲ್ಲಿ ತನಗೆ ಯಾವುದೇ ಸಮಸ್ಯೆಯಿಲ್ಲ. ಇತರೆ ಕೆಲವು ದೇಶಗಳು ಈ ವಿನಾಯಿತಿಗಳನ್ನು ನೀಡಿವೆ ಎಂದು ಬುಧವಾರ ಆರೋಗ್ಯ ಸಚಿವಾಲಯ ತಿಳಿಸಿತ್ತು. 'ಈ ಕಂಪೆನಿಗಳು ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರೆ, ನಾವು ಇಂಡೆಮ್ನಿಟಿ ನೀಡಲು ಸಿದ್ಧರಿದ್ದೇವೆ' ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು. ಸೀರಂ ಸಂಸ್ಥೆ ಪ್ರಸ್ತುತ ಆಕ್ಸ್‌ಫರ್ಡ್-ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುತ್ತಿದೆ. ಅಲ್ಲದೆ, ಇದರೊಂದಿಗೆ ಇನ್ನೂ ಮೂರು ಕೋವಿಡ್ ಲಸಿಕೆಗಳ ಪ್ರಯೋಗಗಳಲ್ಲಿ ಭಾಗಿಯಾಗಿದೆ. ನೋವೊವ್ಯಾಕ್ಸ್ ಔಷಧ ಕಂಪೆನಿ ಜತೆಗೂಡಿ ಅಭಿವೃದ್ಧಿಪಡಿಸಲಾದ ಕೋವೊವ್ಯಾಕ್ಸ್ ಲಸಿಕೆಯ ಪ್ರಯೋಗಗಳನ್ನು ನಡೆಸುತ್ತಿದೆ. ಮೂಗಿನ ಮೂಲಕ ನೀಡಲಾಗುವ ಸಿಂಗಲ್ ಡೋಸ್ ಕೊಡಜೆನಿಕ್ಸ್ ಲಸಿಕೆಯ 1 ಮತ್ತು 2ನೇ ಹಂತದ ಪ್ರಯೋಗವು ಬ್ರಿಟನ್‌ನಲ್ಲಿ ನಡೆಯುತ್ತಿದೆ. ಇನ್ನು ಸ್ಪೈಬಯೋಟೆಕ್ ಲಸಿಕೆಯ ಪ್ರಯೋಗ ಕೂಡ ನಡೆಯುತ್ತಿದೆ.