ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಪ್ರಮುಖ ನಾಯಕಿ ಸುಶ್ಮಿತಾ ದೇವ್‌..! ಟಿಎಂಸಿ ಸೇರ್ಪಡೆ ಸಾಧ್ಯತೆ

ಅಸ್ಸಾಂನ ಪ್ರಮುಖ ನಾಯಕಿ ಸುಶ್ಮಿತಾ ದೇವ್‌ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದು, ಶೀಘ್ರದಲ್ಲಿಯೇ ತೃಣಮೂಲಕ ಕಾಂಗ್ರೆಸ್‌ ಸೇರಲಿದ್ದಾರೆ ಎನ್ನಲಾಗಿದೆ. ಅಸ್ಸಾಂನಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಸುಶ್ಮಿತಾ ದೇವ್‌ ರಾಜೀನಾಮೆ ಕಾಂಗ್ರೆಸ್‌ಗೆ ಬಹುದೊಡ್ಡ ಹೊಡೆತ ನೀಡಿದೆ. ಮಾಜಿ ಸಂಸದೆ, ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಪ್ರಮುಖ ನಾಯಕಿ ಸುಶ್ಮಿತಾ ದೇವ್‌..! ಟಿಎಂಸಿ ಸೇರ್ಪಡೆ ಸಾಧ್ಯತೆ
Linkup
ಹೊಸದಿಲ್ಲಿ: ಅಸ್ಸಾಂನ ಪ್ರಮುಖ ನಾಯಕಿ ಹಾಗೂ ಮಾಜಿ ಸಂಸದೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ. ಸುಶ್ಮಿತಾ ದೇವ್‌ ಶೀಘ್ರದಲ್ಲಿಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಸೇರಲಿದ್ದಾರೆ ಎನ್ನಲಾಗಿದೆ. ಸುಶ್ಮಿತಾ ದೇವ್‌ ಸೇರಿದರೆ ಅಸ್ಸಾಂನಲ್ಲಿ ಪಕ್ಷ ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಎಐಸಿಸಿ ಅಧ್ಯಕ್ಷೆ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಸುಶ್ಮಿತಾ ದೇವ್‌, ಕಾಂಗ್ರೆಸ್‌ನಿಂದ ಹೊರಬರುತ್ತಿರುವುದಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ. ಆದರೆ, ಸಾರ್ವಜನಿಕ ಸೇವೆಯಲ್ಲಿ ಹೊಸ ಅಧ್ಯಾಯ ಶುರುವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ತಮ್ಮ ಟ್ವಿಟರ್‌ ಬಯೋ ಬದಲಾಯಿಸಿರುವ ಸುಶ್ಮಿತಾ ದೇವ್‌, ಕಾಂಗ್ರೆಸ್‌ನ ಮಾಜಿ ಸದಸ್ಯೆ ಎಂದು ಬರೆದುಕೊಂಡಿದ್ದಾರೆ. ಸೋಮವಾರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್‌ ಬ್ಯಾನರ್ಜಿ ಅವರನ್ನು ಸುಶ್ಮಿತಾ ದೇವ್‌ ಕೋಲ್ಕತ್ತಾದಲ್ಲಿ ಭೇಟಿ ಮಾಡಲಿದ್ದಾರೆ. ಅಸ್ಸಾಂನ ಕಾಂಗ್ರೆಸ್‌ನ ಪ್ರಭಾವಿ ನಾಯಕ ಸಂತೋಷ್‌ ಮೋಹನ್‌ ದೇವ್‌ ಅವರ ಪುತ್ರಿಯಾಗಿರುವ ಸುಶ್ಮೀತಾ ದೇವ್‌ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದ್ದರು. ಸಂತೋಷ್‌ ಮೋಹನ್‌ ದೇವ್‌ ಪ್ರಾಬಲ್ಯ ಹೊಂದಿದ್ದ ಸಿಲ್ಚಾರ್‌ ಲೋಕಸಭಾ ಕ್ಷೇತ್ರದಿಂದ ಸುಶ್ಮಿತಾ ದೇವ್‌ ಸಂಸದರಾಗಿಯೂ ಆಯ್ಕೆಯಾಗಿದ್ದರು. ಇತ್ತೀಚೆಗೆ ದಿಲ್ಲಿಯಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಪೋಷಕರ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಕ್ಕೆ ಟ್ವಿಟರ್‌ನಿಂದ ನಿರ್ಬಂಧಿಸಲ್ಪಟ್ಟ ಕಾಂಗ್ರೆಸ್‌ ನಾಯಕರ ಖಾತೆಗಳಲ್ಲಿ ಸುಶ್ಮಿತಾ ದೇವ್‌ ಅವರ ಖಾತೆಯೂ ಸೇರಿತ್ತು. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಪ್ರಾಬಲ್ಯ ಸಾಧಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಪಕ್ಷವನ್ನು ಇತರೆ ರಾಜ್ಯಗಳಿಗೂ ವಿಸ್ತರಿಸಲು ಮುಂದಾಗಿದೆ. ಪಶ್ಚಿಮ ಬಂಗಾಳದ ನೆರೆ ರಾಜ್ಯ ಅಸ್ಸಾಂನಲ್ಲಿ ಸುಶ್ಮಿತಾ ದೇವ್‌ ಮೂಲಕ ನೆಲೆ ಕಂಡುಕೊಳ್ಳುವ ಯೋಚನೆಯಲ್ಲಿ ಟಿಎಂಸಿ ಇದೆ.