ನವೆಂಬರ್‌ನಿಂದ ಎಲ್ಲ ಕಂಪನಿಗಳಲ್ಲಿ 50:50 ಅವಕಾಶ? ಹೋಟೆಲ್‌, ಸಾರಿಗೆ, ಪ್ರವಾಸೋದ್ಯಮಕ್ಕೆ ರಿಲೀಫ್..?

ಭಾರತೀಯ ದೈತ್ಯ ಐಟಿ ಕಂಪನಿಗಳಾದ ವಿಪ್ರೋ, ಇನ್ಫೋಸಿಸ್‌, ಟಿಸಿಎಸ್‌ ಕಂಪನಿಗಳು ವರ್ಕ್ ಫ್ರಮ್‌ ಹೋಮ್‌ ತೆಗೆಯುವುದಕ್ಕೆ ಹೆಚ್ಚು ಉತ್ಸಾಹ ತೋರಿಸುತ್ತಿದ್ದರೆ, ವಿದೇಶಿ ಕಂಪನಿಗಳು ಅಷ್ಟೊಂದು ಉತ್ಸಾಹ ತೋರಿಸುತ್ತಿಲ್ಲ.

ನವೆಂಬರ್‌ನಿಂದ ಎಲ್ಲ ಕಂಪನಿಗಳಲ್ಲಿ 50:50 ಅವಕಾಶ? ಹೋಟೆಲ್‌, ಸಾರಿಗೆ, ಪ್ರವಾಸೋದ್ಯಮಕ್ಕೆ ರಿಲೀಫ್..?
Linkup
ಮಹಾಬಲೇಶ್ವರ ಕಲ್ಕಣಿ : ಕೋವಿಡ್‌ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆ ಮತ್ತು ಕಾರ್ಯಕ್ಷಮತೆ ಹೆಚ್ಚಳಕ್ಕಾಗಿ ಬಹುತೇಕ ಐಟಿ ಕಂಪನಿಗಳು ವರ್ಕ್ ಫ್ರಮ್‌ ಹೋಮ್‌ ಪದ್ಧತಿ ಕೊನೆಗೊಳಿಸಲು ಆಲೋಚಿಸುತ್ತಿವೆ. ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಕಚೇರಿಯಿಂದಲೇ ಕೆಲಸ ಮಾಡಲು ಉದ್ಯೋಗಿಗಳಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಈಗಾಗಲೇ ವಿಪ್ರೋ ಕಂಪನಿಯ ಉನ್ನತ ಹುದ್ದೆಯಲ್ಲಿರುವ ಸಿಬ್ಬಂದಿ ಸೋಮವಾರದಿಂದ ಕಚೇರಿಗೆ ಆರಂಭಿಸಿದ್ದು, ಈ ನಿಟ್ಟಿನಲ್ಲಿ ಮುನ್ಸೂಚನೆ ನೀಡಿದೆ. 'ನಮ್ಮ ಸಂಸ್ಥೆಯ ಉದ್ಯೋಗಿಗಳು ವಾರದಲ್ಲಿ 2 ದಿನ ಕಚೇರಿಗೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಲಾಗುವುದು' ಎಂದು ವಿಪ್ರೋ ಮುಖ್ಯಸ್ಥ ರಿಶಾದ್‌ ಪ್ರೇಮ್‌ಜೀ ಟ್ವೀಟ್‌ ಮಾಡಿದ್ದಾರೆ. ಉಳಿದ ಸಂಸ್ಥೆಗಳು ಕೂಡಾ ನಿಧಾನಕ್ಕೆ ಈ ವಿಧಾನವನ್ನು ಅನುಸರಿಸುವ ಸಾಧ್ಯತೆ ಕಂಡುಬಂದಿದೆ. 'ಶೇ.90ರಷ್ಟು ಉದ್ಯೋಗಿಗಳು ಈಗಾಗಲೇ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಉದ್ಯೋಗಿಗಳನ್ನು ಪುನಃ ಕಚೇರಿಗೆ ಕರೆಸಿಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ 3ನೇ ಅಲೆಯ ಆಧಾರದ ಮೇಲೆ ಈ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುವುದು' ಎಂದು ಟಿಸಿಎಸ್‌ ಸಿಇಒ ರಾಜೇಶ್‌ ಗೋಪಿನಾಥನ್‌ ಹೇಳಿದ್ದಾರೆ. ಅದೇ ರೀತಿ, ಎಚ್‌ಸಿಎಲ್‌, ನಸ್ಕಾಂ, ಆ್ಯಪಲ್‌ ಕಂಪನಿಗಳು ಕೂಡ ಉದ್ಯೋಗಿಗಳನ್ನು ಹೈಬ್ರಿಡ್‌ ಮಾದರಿಯಲ್ಲಿ ಕಚೇರಿಗೆ ಕರೆಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಂಡಿವೆ. ಭಾರತೀಯ ದೈತ್ಯ ಐಟಿ ಕಂಪನಿಗಳಾದ ವಿಪ್ರೋ, ಇನ್ಫೋಸಿಸ್‌, ಟಿಸಿಎಸ್‌ ಕಂಪನಿಗಳು ವರ್ಕ್ ಫ್ರಮ್‌ ಹೋಮ್‌ ತೆಗೆಯುವುದಕ್ಕೆ ಹೆಚ್ಚು ಉತ್ಸಾಹ ತೋರಿಸುತ್ತಿದ್ದರೆ, ವಿದೇಶಿ ಕಂಪನಿಗಳು ಅಷ್ಟೊಂದು ಉತ್ಸಾಹ ತೋರಿಸುತ್ತಿಲ್ಲ. ವಿದೇಶಿ ಕಂಪನಿಗಳು ಡಿಸೆಂಬರ್‌ ಅಂತ್ಯ ಅಥವಾ ಮಾರ್ಚ್ ನಂತರ ಕಚೇರಿಗೆ ಉದ್ಯೋಗಿಗಳನ್ನು ಕರೆಸಿಕೊಳ್ಳುವ ಇರಾದೆ ಹೊಂದಿವೆ. ರಾಜ್ಯದಲ್ಲಿ ಮೃತರ ಪ್ರಮಾಣ ಒಂದಂಕಿಗೆ ಇಳಿಕೆ ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಮೃತರ ಪ್ರಮಾಣ ಒಂದಂಕಿಗೆ ಇಳಿಕೆಯಾಗಿದೆ. ಎರಡನೇ ಅಲೆ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಸೋಂಕಿನಿಂದ ಒಂದೇ ದಿನ ಮೃತರಾದವರ ಸಂಖ್ಯೆ ಸಿಂಗಲ್‌ ಡಿಜಿಟ್‌ಗೆ ಇಳಿಕೆಯಾಗಿದೆ. ಬುಧವಾರ ರಾಜ್ಯದಲ್ಲಿ 1,116 ಹೊಸ ಪ್ರಕರಣಗಳು ವರದಿಯಾಗಿದ್ದು, 8 ಜನರು ಮೃತರಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 29,64,083ಕ್ಕೆ ಏರಿಕೆಯಾದರೆ, ಮೃತರ ಸಂಖ್ಯೆ 37,537ಕ್ಕೇರಿದೆ. 970 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 29,10,626ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 15,892 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಶೇ. 0.65ರಷ್ಟಿದ್ದು, ಮೃತರ ಪ್ರಮಾಣ ಶೇ. 0.71ರಷ್ಟಿದೆ. ಬೆಂಗಳೂರು ನಗರ 462, ದಕ್ಷಿಣ ಕನ್ನಡ 102, ಮೈಸೂರು 76, ಉಡುಪಿಯಲ್ಲಿ 89 ಹೊಸ ಸೋಂಕಿತ ಪ್ರಕರಣಗಳು ವರದಿಯಾದರೆ, ಯಾದಗಿರಿ, ವಿಜಯಪುರ, ರಾಮನಗರ, ರಾಯಚೂರು, ಗದಗ, ಬೀದರ್‌, ಬಾಗಲಕೋಟೆಯಲ್ಲಿ ಯಾವುದೇ ಸೋಂಕಿತ ಪ್ರಕರಣಗಳು ದಾಖಲಾಗಿಲ್ಲ. ಇದೇ ವೇಳೆ 26 ಜಿಲ್ಲೆಗಳಲ್ಲಿ ಸೋಂಕಿನಿಂದ ಮೃತಪಟ್ಟ ಬಗ್ಗೆ ಯಾವುದೇ ವರದಿಯಾಗಿಲ್ಲ. ಸೆಪ್ಟೆಂಬರ್ 15ರಂದು ರಾಜ್ಯದಲ್ಲಿ 1,70,306 ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 35,790 ರಾಪಿಡ್‌ ಹಾಗೂ 1,34,516 ಆರ್‌ಟಿ ಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ.