
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ದಿನಗಳಲ್ಲಿ ಕಾಶ್ಮೀರಿ ಪಂಡಿತರು, ಸಿಖ್ ಹಾಗೂ ಮುಸ್ಲಿಂ ಸಮುದಾಯದವರು ಸೇರಿದಂತೆ ಏಳು ನಾಗರಿಕರನ್ನು ಮಾಡಿದ ಸರಣಿ ದಾಳಿಗಳ ಬೆನ್ನಲ್ಲೇ, ತೀವ್ರ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ಈವರೆಗೂ 700ಕ್ಕೂ ಹೆಚ್ಚು ಜನರನ್ನು ಬಂಧಿಸಿವೆ.
ಬಂಧಿತ ಜನರಲ್ಲಿ ಕೆಲವರು ನಿಷೇಧಿತ ಜಮಾತ್-ಇ-ಇಸ್ಲಾಮಿ ಜತೆ ನಂಟು ಹೊಂದಿರುವ ಅಥವಾ ಸಂಘಟನೆಯ ಹಿನ್ನೆಲೆಯಲ್ಲಿ ಕೆಲಸ ಮಾಡುವವಾಗಿದ್ದಾರೆ ಎಂದು ಶಂಕಿಸಲಾಗಿದೆ. ಶ್ರೀನಗರ, ಬುದ್ಗಾಮ್ ಮತ್ತು ದಕ್ಷಿಣ ಕಾಶ್ಮೀರದ ವಿವಿಧ ಪ್ರದೇಶಗಳಿಂದ ಇವರನ್ನು ಬಂಧಿಸಲಾಗಿದೆ.
ಕಾಶ್ಮೀರ ಕಣಿವೆಯಲ್ಲಿನ ದಾಳಿಗಳ ಸರಪಣಿಯನ್ನು ತುಂಡರಿಸಲು ಈ ಬಂಧನಗಳನ್ನು ನಡೆಸಲಾಗಿದೆ. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಉಗ್ರವಾದ ಹೆಚ್ಚಲು ಪ್ರಚೋದನೆ ದೊರಕಿದೆ. ಹೀಗಾಗಿ ಕಣಿವೆಯಲ್ಲಿ ದಾಳಿಗಳು ನಡೆಯುತ್ತಿವೆ. ಉಗ್ರರು ಸುಲಭದ ಗುರಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿವೆ. ನೇರವಾಗಿ ಇಲ್ಲಿ ಕಾರ್ಯಾಚರಣೆ ನಡೆಸದೆ, ಸ್ಥಳೀಯ ಯುವಕರನ್ನು ದಾಳಿಗೆ ಬಳಸಿಕೊಳ್ಳುತ್ತಿವೆ. ಅವರಿಗೆ ಯಾರನ್ನು ಗುರಿ ಮಾಡಿ ನಡೆಸಬೇಕು ಎಂಬ ಸೂಚನೆ ನೀಡುತ್ತಿವೆ. ಹತ್ಯೆ ನಡೆಸಿದ ಕೂಡಲೇ ಅವರಿಂದ ಶಸ್ತ್ರಾಸ್ತ್ರಗಳನ್ನು ವಾಪಸ್ ಪಡೆದುಕೊಳ್ಳುತ್ತಿವೆ. ಹೀಗಾಗಿ ದಾಳಿ ನಡೆಸಿದವರನ್ನು ಪತ್ತೆ ಹಚ್ಚುವುದು ಸವಾಲಾಗಿದೆ.
ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಬಗ್ಗೆ ಅನುಮಾನ ಇರುವ ಎಲ್ಲರನ್ನೂ ಬಂಧಿಸಲಾಗುತ್ತಿದೆ. ಭಾನುವಾರ ಕೂಡ 70 ಯುವಕರನ್ನು ಬಂಧಿಸಲಾಗಿದೆ. ಈ ಹಿಂದೆ ಕಲ್ಲು ತೂರಾಟದಲ್ಲಿ ತೊಡಗುತ್ತಿದ್ದವರು ಮತ್ತು ಸಮಾಜ ದ್ರೋಹಿ ಶಕ್ತಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಜಮ್ಮು ಮತ್ತು ಕಾಶ್ಮೀರದ 15 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ. ದಿ ರೆಸಿಸ್ಟನ್ಸ್ ಫ್ರಂಟ್‌ನ (ಟಿಆರ್‌ಎಫ್) ಇಬ್ಬರು ಉಗ್ರರನ್ನು ಬಂಧಿಸಿದೆ.