ಅಸ್ಸಾಂ: ಎರಡು ಜೈಲುಗಳಲ್ಲಿನ 85 ಕೈದಿಗಳಲ್ಲಿ ಎಚ್‌ಐವಿ ಪಾಸಿಟಿವ್!

ಅಸ್ಸಾಂನ ನಾಗಾನ್ ಜಿಲ್ಲೆಯ ಎರಡು ಜೈಲುಗಳಲ್ಲಿ ಕಳೆದ 30 ದಿನಗಳಲ್ಲಿ ಒಟ್ಟು 85 ಕೈದಿಗಳಲ್ಲಿ ಎಚ್‌ಐವಿ ಪಾಸಿಟಿವ್ ಪತ್ತೆಯಾಗಿದ್ದು, ಇದು ಅಧಿಕಾರಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಾದಕ ವಸ್ತು ಸೇವನೆ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.

ಅಸ್ಸಾಂ: ಎರಡು ಜೈಲುಗಳಲ್ಲಿನ 85 ಕೈದಿಗಳಲ್ಲಿ ಎಚ್‌ಐವಿ ಪಾಸಿಟಿವ್!
Linkup
ಗುವಾಹಟಿ: ಅಸ್ಸಾಂನ ಎರಡು ಜೈಲುಗಳಲ್ಲಿನ 85 ಕೈದಿಗಳಲ್ಲಿ ಕಂಡುಬಂದಿದೆ. ಕಳೆದ ಒಂದೇ ತಿಂಗಳ ಅವಧಿಯಲ್ಲಿ ಇಷ್ಟು ಮಂದಿಯಲ್ಲಿ ಎಚ್‌ಐವಿ ಪಾಸಿಟಿವ್ ಪತ್ತೆಯಾಗಿರುವುದು ಅಧಿಕಾರಿಗಳಲ್ಲಿ ಕಳವಳ ಮೂಡಿಸಿದೆ. ನಾಗಾನ್‌ನ ಕೇಂದ್ರ ಕಾರಾಗೃಹ ಮತ್ತು ವಿಶೇಷ ಕಾರಾಗೃಹಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಅತಿ ಹೆಚ್ಚು ವ್ಯಸನಕ್ಕೆ ತುತ್ತಾದ ಜಿಲ್ಲೆಗಳಲ್ಲಿ ನಾಗಾನ್ ಕೂಡ ಒಂದು. ಆದರೆ ಜೈಲಿನಲ್ಲಿರುವ ಕೈದಿಗಳಲ್ಲಿ ಎಚ್‌ಐವಿ ಸೋಂಕು ತಗುಲಿದ್ದು ಹೇಗೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೈದಿಗಳನ್ನು ಕಾರಾಗೃಹದಲ್ಲಿ ಬಂಧಿಸುವ ಮೊದಲೇ ಅವರಲ್ಲಿ ಎಚ್‌ಐವಿ ಪಾಸಿಟಿವ್ ತಗುಲಿತ್ತು ಎಂದು ನಾಗಾನ್ ಆರೋಗ್ಯ ಸೇವೆಗಳ ಜಂಟಿ ನಿರ್ದೇಶಕ ಡಾ. ಅತುಲ್ ಪ್ಯಾಟೊರ್ ಹೇಳಿದ್ದಾರೆ. 'ಜೈಲಿಗೆ ಅನೇಕ ಮಾದಕ ವಸ್ತು ವ್ಯಸನಿಗಳು ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಲ್ಲಿ ಎಚ್‌ಐವಿ ಪತ್ತೆಯಾಗಿದೆ' ಎಂದು ಅವರು ಹೇಳಿದ್ದಾರೆ. ಈ ರೋಗಿಗಳಲ್ಲಿ ಹೆಚ್ಚಿನವರು ಸ್ವತಃ ಮಾದಕ ವಸ್ತುಗಳನ್ನು ದೇಹಕ್ಕೆ ಚುಚ್ಚಿಕೊಳ್ಳುವವರಾಗಿದ್ದಾರೆ. ಅವರನ್ನು ನಾರ್ಕೋಟಿಕ್ ಡ್ರಗ್ಸ್ ಆಂಡ್ ಸೈಕೋಥೆರಪಿಸ್ಟ್ ಸಬ್‌ಸ್ಟಾನ್ಸಸ್ ಆಕ್ಟ್ 1985ರ ಅಡಿ ಪೊಲೀಸರು ಬಂಧಿಸಿದ್ದರು. ಕೇಂದ್ರ ಕಾರಾಗೃಹದಲ್ಲಿ 40 ಮಂದಿ ಕೈದಿಗಳಲ್ಲಿ ಎಚ್‌ಐವಿ ಪತ್ತೆಯಾಗಿದೆ ಎಂದು ಜೈಲರ್ ಪ್ರವೀಣ್ ಹಜಾರಿಕಾ ತಿಳಿಸಿದ್ದಾರೆ. ಜೈಲಿನಲ್ಲಿ ಕೈದಿಗಳಿಗೆ ಮಾದಕ ವಸ್ತು ದೊರಕಲು ಯಾವುದೇ ಅವಕಾಶವಿಲ್ಲ. ಹಾಗೆಯೇ ಪಾಸಿಟಿವ್ ಕಂಡುಬಂದವರಿಂದಲೂ ಇತರರಿಗೆ ಸೋಂಕು ಹರಡಿಲ್ಲ ಎಂದು ಅವರು ಹೇಳಿದ್ದಾರೆ. ರೋಗಿಗಳಿಗೆ ನಾಗಾನ್‌ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಬಿಡುಗಡೆ ಬಳಿಕವೂ ಅವರ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿ ಇರಲಾಗುವುದು. ಅವರು ಚಿಕಿತ್ಸೆ ಮುಂದುವರಿಸಲು ಅನುಕೂಲವಾಗುವಂತೆ ಅವರಿಗೆ ಅಗತ್ಯ ಬೆಂಬಲ ಹಾಗೂ ಸಲಹೆ ನೀಡಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಮಾದಕವಸ್ತು ಹಾವಳಿ ಬಗ್ಗೆ ಪೊಲೀಸರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮಾದಕ ವಸ್ತುಗಳು ಹಾಗೂ ಅಕ್ರಮ ಲೈಂಗಿಕ ಚಟುವಟಿಕೆಗಳು ಸೋಂಕು ಹರಡಲು ಕಾರಣವಾಗುತ್ತಿವೆ ಎಂದು ನಾಗಾನ್ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಮಿಶ್ರಾ ತಿಳಿಸಿದ್ದಾರೆ. 'ಅವರು ಕೆಲಸ ಹುಡುಕಿಕೊಂಡು ವಿವಿಧ ಸ್ಥಳಗಳಿಗೆ ತೆರಳುತ್ತಾರೆ. ಅಲ್ಲಿ ಅನೈತಿಕ ರೀತಿಯಲ್ಲಿ ಲೈಂಗಿಕ ಸಂಬಂಧಗಳನ್ನು ಹೊಂದುತ್ತಾರೆ. ಮಾದಕ ವಸ್ತು ಇನ್ನೊಂದು ಕಾರಣ. ಮನೆಗೆ ಮರಳಿದ ಬಳಿಕ ಅವರು ಕಾಯಿಲೆಯನ್ನು ಹರಡುತ್ತಾರೆ. ಇದು ಅನೇಕ ವರ್ಷಗಳಿಂದಲೂ ನಡೆಯುತ್ತಿದೆ' ಎಂದು ಅವರು ಹೇಳಿದ್ದಾರೆ. ಕೈದಿಗಳಿಗೆ ಜೈಲಿನಲ್ಲಿ ಮಾದಕ ವಸ್ತು ಲಭ್ಯವಾಗುತ್ತಿದೆಯೇ ಎಂಬುದನ್ನು ಪತ್ತೆ ಹಚ್ಚಬೇಕು. ಜೈಲಿನ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸೂಚಿಸಿದ್ದಾರೆ. ಹಣ ಪಡೆದು ಕೈದಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಔಷಧ ವ್ಯಾಪಾರಿಯೊಬ್ಬನನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಮಾದಕ ವಸ್ತು ಬಳಕೆಯನ್ನು ನಿಯಂತ್ರಿಸಲು ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾತ ಅವರ ಅಸ್ಸಾಂ ಬಿಜೆಪಿ ಸರ್ಕಾರ ಈಗಾಗಲೇ ಸಮರ ಆರಂಭಿಸಿದೆ. ಕಳೆದ ಐದು ತಿಂಗಳಲ್ಲಿ 200 ಕೋಟಿಗೂ ಅಧಿಕ ಮೊತ್ತದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನೇಕ ಕಳ್ಳಸಾಗಣೆದಾರರು, ಮಾರಾಟಗಾರರು ಹಾಗೂ ವ್ಯಸನಿಗಳನ್ನು ಬಂಧಿಸಲಾಗಿದೆ.