ಲಖಿಮ್‌ಪುರ್ ಹಿಂಸಾಚಾರ| ಏನೇ ಕೇಳಿದ್ರೂ ‘ ನಾನು ಅಲ್ಲಿರಲಿಲ್ಲ’ ಎಂದಷ್ಟೇ ಉತ್ತರಿಸಿದ ಆಶಿಶ್ ಮಿಶ್ರಾ!

ಆರೋಪಿ ಆಶಿಶ್‌ ಮಿಶ್ರಾನನ್ನು ಭಾನುವಾರ ಬೆಳಗ್ಗೆ ವೈದ್ಯಕೀಯ ತಪಾಸಣೆ ಬಳಿಕ ಕೋರ್ಟ್‌ಗೆ ಪೊಲೀಸರು ಹಾಜರು ಪಡಿಸಿದರು. ಹೆಚ್ಚಿನ ವಾದ ಆಲಿಸದ ಕೋರ್ಟ್‌, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಆಶಿಶ್‌ನನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಅಕ್ಟೋಬರ್‌ 3ರಂದು ಟಿಕೋನಿಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಸಂಘರ್ಷದಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಆಶಿಶ್‌ ಮಿಶ್ರಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು.

ಲಖಿಮ್‌ಪುರ್ ಹಿಂಸಾಚಾರ| ಏನೇ ಕೇಳಿದ್ರೂ ‘ ನಾನು ಅಲ್ಲಿರಲಿಲ್ಲ’ ಎಂದಷ್ಟೇ ಉತ್ತರಿಸಿದ ಆಶಿಶ್ ಮಿಶ್ರಾ!
Linkup
ಲಖನೌ: ಲಖೀಮ್‌ಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್‌ ಮಿಶ್ರಾಪುತ್ರ ಆಶಿಶ್‌ ಮಿಶ್ರಾನನ್ನು ಪೊಲೀಸರು ಯಾವ ಪ್ರಶ್ನೆ ಕೇಳಿದರೂ, ‘ನಾನು ಅಲ್ಲಿರಲಿಲ್ಲ’ ಎಂಬ ಎರಡು ಪದಗಳ ಉತ್ತರವನ್ನೇ ನೀಡಿರುವುದು ಬೆಳಕಿಗೆ ಬಂದಿದೆ. ಶನಿವಾರ ಸುಮಾರು 12 ತಾಸುಗಳ ಕಾಲ ಪೊಲೀಸರು ಲಖಿಂಪುರ್ ಖೇರಿ ಹಿಂಸಾಚಾರ ಆರೋಪಿ ಆಶಿಶ್‌ನನ್ನು ವಿಚಾರಣೆಗೆ ಒಳಪಡಿಸಿದರು. ಎಸ್‌ಯುವಿ ಚಾಲನೆ ಮಾಡುತ್ತಿದ್ದವರು ಯಾರು, ಅದರಲ್ಲಿ ಎಷ್ಟು ಜನರಿದ್ದರು, ಬೆಂಗಾವಲು ಪಡೆಯಲ್ಲಿ ಎಷ್ಟು ವಾಹನಗಳಿದ್ದವು ಇತ್ಯಾದಿ ಪ್ರಶ್ನೆ ಕೇಳಿದರೂ ಆತ ನೀಡುತ್ತಿದ್ದುದು, ‘ನಾನು ಅಲ್ಲಿರಲಿಲ್ಲ’ ಎಂಬ ಒಂದೇ ಉತ್ತರವಾಗಿತ್ತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಆತ ‘ನೀವು ಲಕ್ಷ ಸಲ ಕೇಳಿದರೂ ನನ್ನ ಉತ್ತರದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಕಿರುಚಿದ್ದಾನೆ. ಇನ್ನು ಈತನನ್ನು ಪ್ರಶ್ನೆ ಮಾಡುತ್ತ ಕೂರುವುದರಲ್ಲಿ ಅರ್ಥವಿಲ್ಲ ಎಂಬ ತೀರ್ಮಾನಕ್ಕೆ ಬಂದ ಪೊಲೀಸರು, ತನಿಖೆಗೆ ಅಸಹಕಾರ ಮತ್ತು ಹಾರಿಕೆ ಉತ್ತರ ನೀಡಿದ ಕಾರಣ ಕೊಟ್ಟು ತಡರಾತ್ರಿ ಬಂಧಿಸಿದರು ಎಂದು ಮೂಲಗಳು ತಿಳಿಸಿವೆ. ನ್ಯಾಯಾಂಗ ಬಂಧನಆರೋಪಿ ಆಶಿಶ್‌ ಮಿಶ್ರಾನನ್ನು ಭಾನುವಾರ ಬೆಳಗ್ಗೆ ವೈದ್ಯಕೀಯ ತಪಾಸಣೆ ಬಳಿಕ ಕೋರ್ಟ್‌ಗೆ ಪೊಲೀಸರು ಹಾಜರು ಪಡಿಸಿದರು. ಹೆಚ್ಚಿನ ವಾದ ಆಲಿಸದ ಕೋರ್ಟ್‌, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಆಶಿಶ್‌ನನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಅಕ್ಟೋಬರ್‌ 3ರಂದು ಟಿಕೋನಿಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಸಂಘರ್ಷದಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಆಶಿಶ್‌ ಮಿಶ್ರಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. ಶಾಂತಿಯುತವಾಗಿ ಪ್ರತಿಭಟನೆಯಲ್ಲಿದ್ದ ರೈತರ ಮೇಲೆ ಕಾರ್‌ ಹರಿಸಿ ಎಂಟು ಮಂದಿಯ ಕೊಲೆಗೆ ಕಾರಣವಾಗಿದ್ದಾನೆ ಎಂಬ ಗಂಭೀರ ಆರೋಪದಡಿ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಎರಡು ಬಾರಿ ಸಮನ್ಸ್‌ ಕಳಿಸಿದ ನಂತರ ಶನಿವಾರ ಎಸ್‌ಐಟಿ ಮುಂದೆ ಆಶಿಶ್ ಹಾಜರಾಗಿದ್ದಾನೆ. ಕೇಂದ್ರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರು ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಪಾಲ್ಗೊಳ್ಳಲಿದ್ದ ಕಾರ್ಯಕ್ರಮವೊಂದಕ್ಕೆ ಮುತ್ತಿಗೆ ಹಾಕಲು ಆಗಮಿಸಿದ್ದರು. ಈ ಹಿನ್ನೆಲೆ ಟಿಕೋನಿಯಾ ಬಳಿ ರಸ್ತೆ ತಡೆದು ಧರಣಿ ನಡೆಸುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಬಂದ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಖಾಸಗಿ ಹಾಗೂ ಬೆಂಗಾವಲು ಪಡೆ ವಾಹನಗಳು ಪ್ರತಿಭಟನಾಕಾರರ ಮೇಲೆ ಹರಿದು ಹೋಗಿ ಅನಾಹುತ ಉಂಟಾಗಿತ್ತು. ಪ್ರತಿಭಟನಾಕಾರ ಮೇಲೆ ನುಗ್ಗಿದ ಕಾರನ್ನು ಸಚಿವರ ಪುತ್ರ ಆಶಿಶ್‌ ಚಾಲನೆ ಮಾಡುತ್ತಿದ್ದ ಎಂದು ರೈತ ಸಂಘಟನೆಗಳು ಆರೋಪಿಸಿವೆ. ತೀವ್ರ ರಾಜಕೀಯ ವಾಗ್ವಾದಕ್ಕೆ ಎಡೆಮಾಡಿಕೊಟ್ಟ ಈ ಘಟನೆ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ತಲುಪಿದ ಬಳಿಕ ರಾಜ್ಯ ಸರಕಾರ ಪೇಚಾಟಕ್ಕೆ ಸಿಲುಕಿತ್ತು. ಅಲ್ಲಿಯವರೆಗೆ ಘಟನೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಬಳಿಕ ದಿಢೀರ್‌ ಚುರುಕುಗೊಂಡ ಎಸ್‌ಐಟಿ, ಆರೋಪಿ ಆಶಿಶ್‌ ಮಿಶ್ರಾನನ್ನು ವಿಚಾರಣೆ ನಡೆಸಿ ಬಂಧಿಸಿತು. ತನ್ನ ತಂದೆ ಪ್ರತಿನಿಧಿಸುವ ಖೇರಿ ಲೋಕಸಭೆ ಕ್ಷೇತ್ರದ ಆಗು ಹೋಗುಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆಶಿಶ್‌, ಲಖೀಮ್‌ಪುರ ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ರಾತ್ರಿ ಕಳೆದಿದ್ದಾನೆ ಎಂದು ಮೂಲಗಳು ತಿಳಿಸಿವೆ. ಎರಡನೇ ಎಫ್‌ಐಆರ್‌, ದುಷ್ಟಶಕ್ತಿಗಳ ದೂಷಣೆ:ಲಖೀಮ್‌ಪುರ ಘಟನೆಗೆ ಸಂಬಂಧಿಸಿದಂತೆ ಭಾನುವಾರ ಎರಡನೇ ಎಫ್‌ಐಆರ್‌ ದಾಖಲಾಗಿದ್ದು, ಪ್ರತಿಭಟನಾಕಾರರ ನಡುವೆ ನುಸುಳಿಕೊಂಡಿದ್ದ ದುಷ್ಟಶಕ್ತಿಗಳಿಂದಲೇ ಇಷ್ಟೆಲ್ಲ ಅನಾಹುತ ಉಂಟಾಯಿತು ಎಂದು ದೂರಲಾಗಿದೆ. ‘ಬಿಜೆಪಿ ಕಾರ್ಯಕರ್ತರನ್ನು ದುಷ್ಟರು ಹೊಂಚು ಹಾಕಿ ಹೊಡೆದು ಸಾಯಿಸಿದರು’ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದ್ದು, ರೈತರ ಮೇಲೆ ನುಗ್ಗಿದ ಕಾರಿನಲ್ಲಿ ಕೇಂದ್ರ ಸಚಿವರ ಪುತ್ರ ಆಶಿಶ್‌ ಇದ್ದ ಎನ್ನುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಘಟನೆ ನಡೆದ ಮರು ದಿನ ಅ.4ರಂದು ಮೊದಲ ಎಫ್‌ಐಆರ್‌ ದಾಖಲಾಗಿತ್ತು. ಅದರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕೊಂದು ಹಾಕಿದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆಶಿಶ್‌ ಹೆಸರನ್ನು ಕೂಡ ಅದರಲ್ಲಿ ತೋರಿಸಲಾಗಿತ್ತು. ಎರಡನೇ ಎಫ್‌ಐಆರ್‌ನಲ್ಲಿ ಅನಾಮಧೇಯ ಒಬ್ಬ ಗಲಭೆಕೋರನ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಘಟನೆ ದಿನ ಕಾರಿನಲ್ಲಿದ್ದು ತಪ್ಪಿಸಿಕೊಂಡು ಬಂದಿರುವ ಬಿಜೆಪಿ ಕಾರ್ಯಕರ್ತ ಸುಮಿತ್‌ ಜೈಸ್ವಾಲ್‌ ಎಂಬಾತ ನೀಡಿದ ದೂರಿನ ಮೇರೆಗೆ ಎರಡನೇ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕೋಮು ಲೇಪ ಬೇಡ ಎಂದ ವರುಣ್‌:ಲಖೀಮ್‌ಪುರ ಹಿಂಸಾಚಾರದ ವಿಚಾರದಲ್ಲಿ ಕಟು ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ಕಾರ್ಯಕಾರಿಣಿಯಿಂದ ಹೊರದೂಡಲ್ಪಟ್ಟಿರುವ ಸಂಸದ ವರುಣ್‌ ಗಾಂಧಿ, ಹಿಂಸಾಚಾರ ಪ್ರಕರಣಕ್ಕೆ ಕೋಮು ಬಣ್ಣ ಬಳಿಯದಿರುವಂತೆ ಎಚ್ಚರಿಕೆ ನೀಡಿದ್ದಾರೆ. ‘ಲಖೀಮ್‌ಪುರ ಖೇರಿ ಘಟನೆಯನ್ನು ಹಿಂದೂ ಮತ್ತು ಸಿಖ್ಖರ ನಡುವಿನ ಸಮರದಂತೆ ಬಿಂಬಿಸಲಾಗುತ್ತಿದೆ. ಇದು ಅಪಾಯಕಾರಿ ಮನಸ್ಥಿತಿ’ ಎಂದಿದ್ದಾರೆ. ‘ಪ್ರತಿಭಟನಾಕಾರರನ್ನು ಕುರಿತು ಖಲಿಸ್ತಾನಿಗಳು ಎಂಬ ಪದವನ್ನು ಹೇರಳವಾಗಿ ಬಳಸಲಾಗುತ್ತಿದೆ. ಇದು ಅಪಾಯಕಾರಿ, ಗಡಿ ರಕ್ಷಣೆಗಾಗಿ ರಕ್ತ ಹರಿಸಿದ ವೀರ ಪುತ್ರರಿಗೆ ತೋರುವ ಅಗೌರವ. ಘಟನೆಗೆ ಈ ರೀತಿ ಧರ್ಮದ ಲೇಪನ ಮಾಡಿ ಟೀಕಿಸುವುದರಿಂದ ಒಂದು ಸಮುದಾಯ ಘಾಸಿಗೊಳ್ಳುತ್ತದೆ. ಅವರಿಗೆ ಆಗಿರುವ ಹಳೆಯ ಗಾಯಗಳನ್ನೇ ಕೆದುಕಿದಂತಾಗುತ್ತದೆ’ ಎಂದು ಬಿಜೆಪಿ ಸಂಸದ ವರುಣ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.