ವಿದೇಶಿ ಲಸಿಕೆಗಳ ಅನುಮತಿಗೆ ನಿಯಮ ಸಡಿಲ, ಕೇಂದ್ರ ಸರಕಾರದಿಂದ ಮಹತ್ವದ ಕ್ರಮ

ವಿದೇಶಗಳಲ್ಲಿ ಅಭಿವೃದ್ಧಿಪಡಿಸಲಾದ ಕೊರೊನಾ ನಿರೋಧಕ ಲಸಿಕೆಗಳು ಭಾರತದ ಮಾರುಕಟ್ಟೆ ಪ್ರವೇಶಿಸಲು ಇದ್ದ ಹಲವು ನಿಯಮಗಳಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಜಿಸಿಎ) ವಿನಾಯಿತಿ ನೀಡಿದೆ.

ವಿದೇಶಿ ಲಸಿಕೆಗಳ ಅನುಮತಿಗೆ ನಿಯಮ ಸಡಿಲ, ಕೇಂದ್ರ ಸರಕಾರದಿಂದ ಮಹತ್ವದ ಕ್ರಮ
Linkup
ಹೊಸದಿಲ್ಲಿ: ವಿದೇಶಗಳಲ್ಲಿ ಅಭಿವೃದ್ಧಿಪಡಿಸಲಾದ ಕೊರೊನಾ ನಿರೋಧಕ ಲಸಿಕೆಗಳು ಭಾರತದ ಮಾರುಕಟ್ಟೆ ಪ್ರವೇಶಿಸುವ ಮುನ್ನ ಪ್ರತಿ ಬ್ಯಾಚ್‌ನ ಪರೀಕ್ಷೆಗೆ ವಿನಾಯಿತಿ ಸೇರಿದಂತೆ ಹಲವು ನಿಯಮಗಳನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಜಿಸಿಐ) ಸಡಿಲಿಸಿದೆ. ಅಮೆರಿಕ, ಬ್ರಿಟನ್‌ ಹಾಗೂ ಇತರ ರಾಷ್ಟ್ರಗಳಲ್ಲಿ ತುರ್ತು ಬಳಕೆಗಾಗಿ ಅಲ್ಲಿನ ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರಗಳಿಂದ ಅನುಮತಿ ಪಡೆದಿರುವ ಲಸಿಕೆಗಳನ್ನು ಅಥವಾ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಸುರಕ್ಷಿತ ಎಂದು ಪರಿಗಣಿಸಲಾಗಿರುವ ಲಸಿಕೆಗಳಿಗೆ ಹಲವು ನಿಯಮಗಳಿಂದ ವಿನಾಯಿತಿ ನೀಡಲಾಗುವುದು. ಭಾರತದ ಮಾರುಕಟ್ಟೆ ಪ್ರವೇಶಕ್ಕೂ ಮುನ್ನ ಕಡ್ಡಾಯವಾಗಿದ್ದ ಕ್ಲಿನಿಕಲ್‌ ಪ್ರಯೋಗ, ಪ್ರತಿ ಬ್ಯಾಚ್‌ನ ಲಸಿಕೆಗಳ ಪ್ರಯೋಗಾಲಯ ಪರೀಕ್ಷೆ, ರಾಷ್ಟ್ರೀಯ ಪ್ರಯೋಗಾಲಯ ನಿಯಂತ್ರಣದಿಂದ ಪ್ರಮಾಣೀಕೃತವಾಗಿದ್ದಕ್ಕೆ ದಾಖಲೆ ಒದಗಿಸುವ ನಿಯಮಗಳನ್ನು ಸಡಿಲಿಸಲಾಗಿದೆ. ''ಈ ಕ್ರಮದಿಂದ ಭಾರತದಲ್ಲಿ ಹೆಚ್ಚೆಚ್ಚು ಲಸಿಕೆಗಳು ಲಭ್ಯವಾಗುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಅಮೆರಿಕ, ಬ್ರಿಟನ್‌, ಜಪಾನ್‌ ಹಾಗೂ ಇತರ ವಿದೇಶಗಳಲ್ಲಿ ಅಭಿವೃದ್ಧಿಪಡಿಸಲಾದ ಲಸಿಕೆಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, ಲಸಿಕೆಗಳ ಅಭಾವ ನೀಗಲಿದೆ,'' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಮೂರನೇ ಅಲೆ ಅಪ್ಪಳಿಸುವ ಭೀತಿ, ಲಸಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಆಗದೆಯೇ ಉಂಟಾಗಿರುವ ಅಭಾವದಿಂದ ದೇಶವನ್ನು ಹೊರತರಲು ವಿದೇಶಿ ಮಾರುಕಟ್ಟೆಯಲ್ಲಿನ ಲಸಿಕೆಗಳು ದೇಶ ಪ್ರವೇಶಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೀಘ್ರವೇ , ಭಾರತಕ್ಕೆ ವಿದೇಶಿ ಲಸಿಕೆಗಳಿಗೆ ನಿಯಮ ಸಡಿಲಿಕೆ ಮಾಡಿರುವ ಬೆನ್ನಲ್ಲೇ ಶೀಘ್ರವಾಗಿ ಅಮೆರಿಕದ ಫೈಜರ್‌ ಮತ್ತು ಮಾಡೆರ್ನಾ ಕಂಪನಿಗಳ ಕೊರೊನಾ ನಿರೋಧಕ ಲಸಿಕೆಗಳು ದೇಶದ ಮಾರುಕಟ್ಟೆ ಪ್ರವೇಶಿಸಲಿವೆ. ಭಾರತದ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಫೈಜರ್‌, ಮಾಡೆರ್ನಾ ಕಂಪನಿಗಳ ಭಾರತ ಪ್ರವೇಶಕ್ಕೆ ಹಾಕಿರುವ ಷರತ್ತುಗಳಲ್ಲಿ ಪ್ರಮುಖವಾದವು ಎಂದರೆ ನಷ್ಟಕ್ಕೆ ಪರಿಹಾರ ಮತ್ತು ಕಾನೂನಾತ್ಮಕ ರಕ್ಷಣೆ. ಇದಕ್ಕೆ ಕೇಂದ್ರ ಸರಕಾರ ಬಹುತೇಕ ಒಪ್ಪಿಗೆ ಕೂಡ ಸೂಚಿಸಿದ್ದು, ಈಗಾಗಲೇ ಫೈಜರ್‌ , ಮಾಡೆರ್ನಾ ಲಸಿಕೆಗಳನ್ನು ಬಳಸುತ್ತಿರುವ ವಿಶ್ವದ ಹಲವು ರಾಷ್ಟ್ರಗಳು ಕೂಡ ಇದೇ ಷರತ್ತುಗಳಿಗೆ ಒಪ್ಪಿಗೆ ನೀಡಿವೆ ಎಂದು ತಿಳಿದು ಬಂದಿದೆ. ಜುಲೈ ಮತ್ತು ಅಕ್ಟೋಬರ್‌ ನಡುವೆ 5 ಕೋಟಿ ಡೋಸ್‌ಗಳಷ್ಟು ಲಸಿಕೆಗಳನ್ನು ಭಾರತಕ್ಕೆ ನೀಡಲು ಸಿದ್ಧವಿರುವುದಾಗಿ ಫೈಜರ್‌ ಹೇಳಿದೆ. ಲಸಿಕೆಗಳ ಅಡ್ಡಪರಿಣಾಮಕ್ಕೆ ಕಾನೂನಾತ್ಮಕ ಕ್ರಮದಿಂದ ವಿನಾಯಿತಿ ನೀಡುವಂತೆ ಫೈಜರ್‌ ಇರಿಸುತ್ತಿರುವ ಪ್ರಮುಖ ಬೇಡಿಕೆಗೆ ಅಮೆರಿಕ ಸರಕಾರ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಆದರೆ ಭಾರತದಲ್ಲಿ ಮಾತ್ರ ಯಾವುದೇ ಲಸಿಕಾ ತಯಾರಕರಿಗೆ ಇದುವರೆಗೂ ಇಂಥ ವಿನಾಯಿತಿ ನೀಡಲಾಗಿಲ್ಲ. ಮುಂಬಯಿ ಕಂಪನಿಯಿಂದ 2.28 ಕೋಟಿ ಡೋಸ್‌ ಕೊವ್ಯಾಕ್ಸಿನ್‌ ಉತ್ಪಾದನೆ ಮುಂಬಯಿ ಮೂಲದ ಸಾರ್ವಜನಿಕ ವಲಯದ ಉದ್ದಿಮೆ 'ಹಾಫ್‌ಕೈನ್‌ ಬಯೋಫಾರ್ಮ' ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 'ಕೊವ್ಯಾಕ್ಸಿನ್‌' ಲಸಿಕೆಯನ್ನು ಉತ್ಪಾದಿಸಲಿದೆ. ವಾರ್ಷಿಕ 2.28 ಕೋಟಿ ಡೋಸ್‌ಗಳನ್ನು ತಯಾರಿಸಲು ಹಾಫ್‌ಕೈನ್‌ ಸಿದ್ಧವಾಗಿದೆ. ಕೊವ್ಯಾಕ್ಸಿನ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಭಾರತ್‌ ಬಯೋಟೆಕ್‌ ಕಂಪನಿಯು ತನ್ನ ತಂತ್ರಜ್ಞಾನವನ್ನು ಹಾಫ್‌ಕೈನ್‌ಗೆ ಹಸ್ತಾಂತರಿಸಲಿದೆ. ಈ ಮೂಲಕ ದೇಶದ ಜನರಿಗೆ ಅತಿ ಶೀಘ್ರವಾಗಿ ದೇಶೀಯ ಕೊರೊನಾ ನಿರೋಧಕ ಲಸಿಕೆ ಪೂರೈಕೆ ಆಗಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಳಿಸಿದೆ. ಲಸಿಕೆ ಉತ್ಪಾದನೆಗಾಗಿ ಕೇಂದ್ರ ಸರಕಾರದಿಂದ 65 ಕೋಟಿ ರೂ. ಮತ್ತು ಮಹಾರಾಷ್ಟ್ರ ಸರಕಾರದಿಂದ 94 ಕೋಟಿ ರೂ. ಅನುದಾನವನ್ನು ಹಾಫ್‌ಕೈನ್‌ಗೆ ನೀಡಲಾಗಿದೆ. ಒಟ್ಟು ಎಂಟು ತಿಂಗಳ ಗಡುವನ್ನು ಲಸಿಕೆ ತಯಾರಿಕೆಗಾಗಿ ಸರಕಾರ ವಿಧಿಸಿದೆ. ಇದಲ್ಲದೇ, ಹೈದರಾಬಾದಿನ ಇಂಡಿಯನ್‌ ಇಮ್ಯುನೊಲಾಜಿಕಲ್ಸ್‌ ಮತ್ತು ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿನ ಭಾರತ್‌ ಇಮ್ಯುನೊಲಾಜಿಕಲ್ಸ್‌ನಲ್ಲಿ ಕೂಡ ಕೊವ್ಯಾಕ್ಸಿನ್‌ ಲಸಿಕೆ ಉತ್ಪಾದನೆಗೆ ಸಿದ್ಧತೆ ನಡೆಸಲಾಗುತ್ತಿದೆ.